ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಸೂಕ್ತ ಆಧಾರವಿಲ್ಲದೆಯೂ ಆರೋಪಿಗಳನ್ನು ಅಪರಾಧಿಗಳೆಂದು ವಿಚಾರಣಾ ನ್ಯಾಯಾಲಯಗಳು ಘೋಷಿಸುತ್ತಿವೆ. ಆ ಮೂಲಕ ಪದೇ-ಪದೇ ತಪ್ಪು ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಆಕೆಯ ಪತಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿತ್ತು. ಆ ಪ್ರಕರಣದಲ್ಲಿ ಆರೋಪಿ ಪತಿಯನ್ನು ನಿರ್ದೋಷಿ ಎಂದು ಸುಪ್ರೀಂ ಕೋರ್ಟ್ ಘೊಷಿಸಿದೆ. ಈ ವೇಳೆ,ವಿಚಾರಣಾ ನ್ಯಾಯಾಲಯಗಳು ಪದೇ-ಪದೇ ತಪ್ಪು ಮಾಅಡುತ್ತಿವೆ. ನ್ಯಾಯಾಂಗ ಅಕಾಡೆಮಿಗಳು ಮಧ್ಯ ಪ್ರವೇಶಿಸುವ ಅನಿವಾರ್ಯತೆ ಇದೆ ಎಂದು ಕೋರ್ಟ್ ಹೇಳಿದೆ.
1998ರಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಮಹಿಳೆಗೆ ಆಕೆಯ ಪತಿ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಅವರ ಕಿರುಕುಳದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು ಯಾವುದೇ ಸಾಕ್ಷ್ಯಗಳು ಇಲ್ಲದೆಯೂ ಆರೋಪಿಗಳನ್ನು ದೋಷಿಗಳನ್ನು ಘೋಷಿಸಿ, ಮಹಿಳೆಯ ಪತಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಆರೋಪಿ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಆರೋಪಿಯನ್ನು ನಿರ್ದೋಷಿಯೆಂದು ತೀರ್ಪು ನೀಡಿದೆ. ಪ್ರಕರಣವನ್ನು ಖುಲಾಸೆಗೊಳಿಸಿದೆ.
ಆರೋಪಿ ಪತಿಯ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಮಹಿಳೆಯ ಮೇಲೆ ದೌರ್ಜನ್ಯಗಳು ನಡೆದಿವೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಒಂದೇ ಒಂದು ಆರೋಪವನ್ನೂ ಪ್ರಾಸಿಕ್ಯೂಷನ್ ಸಾಬೀತು ಮಾಡಿಲ್ಲ. ಆದಾಗ್ಯೂ, ವಿಚಾರಣಾ ನ್ಯಾಯಾಲಯಗಳು ಶಿಕ್ಷೆ ವಿಧಿಸುತ್ತಿವೆ. ಪದೇ-ಪದೇ ತಪ್ಪು ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಯಾವುದೇ ಸಾವನ್ನು ವರದಕ್ಷಿಣೆಯ ಸಾವು ಎಂದು ಪರಿಗಣಿಸಬೇಕೆಂದರೆ, ಐಪಿಸಿ ಸೆಕ್ಷನ್ 304(ಬಿ) ಅಡಿಯಲ್ಲಿ ಆರೋಪಗಳನ್ನು ಸಾಬೀತು ಮಾಡಬೇಕು. ಆಗ ಮಾತ್ರವೇ, ಸಂತ್ರಸ್ತ ಮಹಿಳೆಯ ಪತಿ ಅಥವಾ ಆತನ ಸಂಬಂಧಿಕರು ಅಪರಾಧಿಗಳು ಎಂದು ಪರಿಗಣಿಸಬಹುದು. ಪ್ರಸ್ತುತ ಪ್ರಕರಣದಲ್ಲಿ, ಮಹಿಳೆಯ ಸಾವಿಗೂ ಮುನ್ನ, ಆರೋಪಿಯು ವರದಕ್ಷಿಣೆಗಾಗಿ ಆಕೆಯ ಮೇಲೆ ಕ್ರೌರ್ಯ ಎಸಗಿದ್ದಾರೆ. ಕಿರುಕುಳ ನೀಡಿದ್ದಾರೆ ಎಂಬುದನ್ನು ಸಾಕ್ಷ್ಯಾಧಾರ ಕಾಯ್ದೆಯ ಸೆಕ್ಷನ್ 113 (ಬಿ) ಅಡಿ ಸಾಬೀತು ಪಡಿಸಬೇಕಾಗುತ್ತದೆ. ಆದರೆ, ಆರೋಪಗಳನ್ನು ಸಾಬೀತು ಮಾಡಲಾಗಿಲ್ಲ. ಊಹೆಯ ಮೇಲೆ ತೀರ್ಪು ನೀಡಬಾರದು” ಎಂದು ಕೋರ್ಟ್ ಗಮನಿಸಿದೆ.