ನಗರದಲ್ಲಿ ಅಭಿವೃದ್ಧಿಗೆ ಸಾಕಷ್ಟು ಸವಾಲುಗಳಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಸಚಿವರು, ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಸಲಹೆ ಮೇರೆಗೆ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗುವುದು ಎಂದು ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೋಹೊತ್ರ ಹೇಳಿದರು.
ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, “ನಗರದಲ್ಲಿ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿ ದೀಪ, ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಪಾಲಿಕೆಗೆ ಇವೆಲ್ಲ ಸವಾಲುಗಳಿದ್ದಂತೆ. ಈಗಾಗಲೇ ನಗರದ ಸಮಸ್ಯೆಗಳ ಮಾಹಿತಿ ಪಡೆಯುತ್ತಿದ್ದು, ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದು ಕಂಡುಬಂದಿದೆ. ಜೊತೆಗೆ ನಗರದಲ್ಲಿ ಧೂಳು ಹೆಚ್ಚಾಗಿದ್ದು, ನಗರವನ್ನು ಪ್ಲಾಸ್ಟಿಕ್ ಹಾಗೂ ಧೂಳು ಮುಖ್ತ ನಗರವನ್ನಾಗಿಸಲು ಮುಂದಿನ ದಿನಗಳಲ್ಲಿ ಯೋಜನೆಯನ್ನು ರೂಪಿಸಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು” ಎಂದರು.
“ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಕುರಿತು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಚರ್ಚಿಸಲಾಗುವುದು. ನಗರದ ಎಲ್ಲ ಕಡೆಗಳಲ್ಲೂ ಬೀದಿ ದೀಪಗಳು ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಕಡೆಗಳಲ್ಲಿ ವಾಟರ್ ಪೌಚ್‌ಗಳು ಬ್ಯಾನ್ ಆಗಿವೆ, ಆದರೆ ರಾಯಚೂರು ನಗರದಲ್ಲಿ ಮಾತ್ರ ನೀರಿನ ಪಾಕೆಟ್‌ಗಳು ಚಾಲ್ತಿಯಲ್ಲಿದ್ದು, ಮೂರು ವಾರಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ನಗರದ ಅಭಿವೃದ್ಧಿಗೆ ಆದಾಯವು ಬಹುಮುಖ್ಯವಾಗಿದ್ದು, ಸಾರ್ವಜನಿಕರು ಪಾಲಿಕೆಗೆ ಕಟ್ಟುವ ತೆರಿಗೆಯನ್ನು ಸಮರ್ಪಕವಾಗಿ ಕಟ್ಟಬೇಕಾಗುತ್ತದೆ. ತೆರಿಗೆ ಸರಿಯಾಗಿ ಪಾವತಿ ಮಾಡಿದ್ದಲ್ಲಿ ನಗರದ ಅಭಿವೃದ್ಧಿಯೂ ಸುಲಭವಾಗಿ ನಡೆಯುತ್ತದೆ. ನಗರದಲ್ಲಿ ವಾರ್ಡ್‌ವಾರು ಮನೆ ಮನೆಗಳಿಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಕಸವನ್ನು ಜಂಕ್ ಯಾರ್ಡ್‌ಗೆ ಸಾಗಿಸುವಾಗಿ ಸರಿಯಾದ ನಿರ್ವಹಣೆ ಇಲ್ಲದೆ ಕಸ ರಸ್ತೆಯ ಮೇಲೆ ಬೀಳುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಅಧಿಕಾರಿಗಳು ಮತ್ತು ಕಸ ಸಂಗ್ರಹಣೆ, ವಿಲೇವಾರಿ ಹಾಗೂ ಸಾಗಾಣೆ ಮಾಡುವ ಸಿಬ್ಬಂದಿಗೆಳಿಗೆ ಸರಿಯಾಗಿ ನಿರ್ವಹಣೆ ಮಾಡುವಂತೆ ಸೂಚಿಸಲಾಗುವುದು. ನಗರದಲ್ಲಿ ಐತಿಹಾಸಿಕ ಸ್ಥಳಗಳು ಹಾಗೂ ಸರ್ಕಾರಿ ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಕೂಡಲೇ ಒತ್ತುವರಿಯಾದ ಎಲ್ಲ ಸ್ಥಳಗಳಿಗೆ ಭೆಟಿ ನೀಡಿ ಅತಿಕ್ರಮಿಸಿಕೊಂಡಿರುವ ಸ್ಥಳಗಳನ್ನು ತೆರವುಗೊಳಿಸಲು ಯೋಜನೆ ರೂಪಿಸಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಅಕ್ರಮ ಆಸ್ತಿ ಆರೋಪ; ಜಿಪಂ ಸಹಾಯಕ ಲೆಕ್ಕಾಧಿಕಾರಿ ಮನೆಗೆ ಲೋಕಾಯುಕ್ತ ದಾಳಿ
ಈ ಸಂದರ್ಭದಲ್ಲಿ ಉಪ ಆಯುಕ್ತ ಗುರುಸಿದ್ದಯ್ಯ ಹಿರೇಮಠ, ಅಭಿವೃದ್ದಿ ಆಯುಕ್ತ ಅನಿಲ್, ವಲಯ ಆಯುಕ್ತ ಮೆಹಬೂಬ್ ಜಿಲಾನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
