ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಅನೇಕ ಕುಟುಂಬಗಳು ಅನಾಥವಾಗುತ್ತಿವೆ. ಇಂತಹ ಅಪಘಾತಕ್ಕೆ ಕಾರಣಗಳನ್ನು ಮನಮುಟ್ಟುವಂತೆ ತಿಳಿಸುವ ಮೂಲಕ ಶಿವಮೊಗ್ಗದ ಸಂಚಾರಿ ಪೊಲೀಸರು ಶನಿವಾರ ವಿನೂತನವಾಗಿ ಜಾಗೃತಿ ಮೂಡಿಸಿದ್ದಾರೆ.
ಕೋಟೆ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಪೊಲೀಸ್ ವಸತಿಗೃಹದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಚಾರ ಜಾಗೃತಿ ಕಾರ್ಯಕ್ರಮದಲ್ಲಿ ಎಸ್‌ಪಿ ಮಿಥುನ್ ಕುಮಾರ್ ಮಾತನಾಡಿ, “ರಸ್ತೆಗಳು ಉತ್ತಮವಾಗಿರುವುದರಿಂದ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳು ಅಧಿಕವಾಗುತ್ತಿದ್ದು, ಅಪಘಾತದಲ್ಲಿ ಯುವಕರೇ ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಂದು ವರ್ಷಕ್ಕೆ 363 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು” ಎಂದು ಕಿವಿಮಾತು ಹೇಳಿದರು.
ರಸ್ತೆ ಸುರಕ್ಷತೆ ಹೇಗೆ ಮಾಡಬೇಕು, ಸಂಚಾರಿ ನಿಯಮಗಳೇನು, ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದರೆ ಹೇಗೆ ದಂಡ ಬೀಳುತ್ತದೆ, ಅಪಘಾತದಿಂದ ಜೀವಹಾನಿ ಹೇಗಾಗುತ್ತದೆ, ವಾಹನಗಳ ಕರ್ಕಶ ಶಬ್ದ ಹೇಗೆ ತೊಂದರೆಯುಂಟು ಮಾಡುತ್ತದೆ ಎಂಬುದರ ಬಗ್ಗೆ ಕಣ್ಣಿಗೆ ಕಟ್ಟುವಂತಹ ಮಾದರಿಗಳ ಮೂಲಕ ಪೊಲೀಸರು ಪ್ರದರ್ಶಿಸಿದರು.

ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುವುದು ರಸ್ತೆ ನಿಯಮಗಳೇ. ಅಂದರೆ ಜೀಬ್ರಾ ಕ್ರಾಸ್ ಅಂದರೆ ಏನು?, ರಸ್ತೆಯಲ್ಲಿ ಸಂಚಾರ ಮಾಡುವಾಗ ಪಾಲಿಸಬೇಕಾದ ನಿಯಮಗಳು ಯಾವುವು?, ಯಾವ ಚಿಹ್ನೆ ಬಳಸಬೇಕು, ರಸ್ತೆ ಪಕ್ಕದಲ್ಲಿ ಯಾವ ಚಿಹ್ನೆ ಇದ್ದರೆ ವಾಹನವನ್ನು ಹೇಗೆ ಓಡಿಸಬೇಕು, ಅಪಘಾತ ನಡೆದಾಗ ಅದರ ತೀವ್ರತೆ ಹೇಗಿರುತ್ತದೆ ಎಂಬುದನ್ನು ತಿಳಿಸಿದರು. ಇದರ ಜತೆಗೆ ಸಿಇಎನ್ ಪೊಲೀಸರು, ಸೈಬರ್ ಅಪರಾಧದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಸಪ್ತಾಹಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಫೀಡ್ಬ್ಯಾಕ್ ಪಡೆಯಲಾಗಿದೆ.
ವಿದ್ಯಾರ್ಥಿಗಳಿಂದ ವೀಕ್ಷಣೆ: ಜಾಗೃತಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದು, ರಸ್ತೆ ಅಪಘಾತ, ಸಂಚಾರ ನಿಯಮಗಳ ಮಾದರಿಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.
ರಾಷ್ಟ್ರೀಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಚಿಂತನಾ ಮಾತನಾಡಿ, “ನಮ್ಮ ಶಾಲೆಯಿಂದ ಇಂದು ಒಳ್ಳೆಯ ಕಡೆ ಕರೆದುಕೊಂಡು ಬಂದಿದ್ದಾರೆ. ಟ್ರಾಫಿಕ್ ಸಿಗ್ನಲ್, ಟ್ರಾಫಿಕ್ ಸೇಫ್ಟಿ ಹೇಗಿರಬೇಕು ಮತ್ತು ಹೆಲ್ಮೆಟ್ ಯಾಕೆ ಹಾಕಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡೆವು. ಜತೆಗೆ ಸೈಬರ್ ಕ್ರೈಂ ಬಗ್ಗೆಯೂ ತಿಳಿದುಕೊಂಡೆವು. ಅಪಫಾತದ ಮಾದರಿ ನೋಡಿ ನಿಜಕ್ಕೂ ಬೇಜಾರಾಯಿತು. ಅಪಘಾತದಿಂದ ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿಸಿದ ಪೊಲೀಸ್ ಇಲಾಖೆಗೆ ಧನ್ಯವಾದ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ; ಯುವಕ ಸಾವು
ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿನಿ ವಿಘ್ನತ್ರಿ ಮಾತನಾಡಿ, “ಈ ಕಾರ್ಯಕ್ರಮದಲ್ಲಿ ನಮಗೆ ಅದ್ಭುತ ಸಲಹೆಗಳು ಸಿಕ್ಕದವು. ನಾವೆಲ್ಲ ಹೇಗೆ ರಸ್ತೆ ನಿಯಮವನ್ನು ಉಲ್ಲಂಘಿಸುತ್ತಿದ್ದೇವೆಂಬುದು ಇಲ್ಲಿಗೆ ಬಂದ ಮೇಲೆಯೇ ತಿಳಿದದ್ದು. ನಮ್ಮ ಸುರಕ್ಷತೆಗಿರುವ ನಿಯಮಗಳನ್ನು ಪಾಲನೆ ಮಾಡಿದರೆ ನಮ್ಮ ಜೀವ ಹೇಗೆ ಸೇಫ್ ಆಗುತ್ತದೆ ಎಂಬುದು ಗೊತ್ತಾಯಿತು. ಪೊಲೀಸ್ ಕೆಲಸ ಹೇಗಿದೆ, ಕುಡಿದು ವಾಹನ ಚಾಲನೆ ಮಾಡಿದರೆ ಹಾಗೂ ಮೊಬೈಲ್ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡಿದರೆ ಏನಾಗುತ್ತದೆ ಎಂಬುದನ್ನೆಲ್ಲ ತಿಳಿದುಕೊಂಡೆವು” ಎಂದರು.
ಇನ್ನೂ ವಿಶೇಷವಾಗಿ ಎಕ್ಸ್‌ಪೋದಲ್ಲಿ ವಿದ್ಯಾರ್ಥಿಗಳಿಗೆ ಸಂಚಾರ ಜಾಗೃತಿ ಮೂಡಿಸಲಾಗಿದೆ. ಸಂಚಾರಿ ನಿಯಮಗಳ ಬಗ್ಗೆ ಹಾಗೂ ಸಂಚಾರದ ವೇಳೆ ತಿಳಿದುಕೊಳ್ಳಬೇಕಾದ ಅಂಶಗಳನ್ನು ತಿಳಿದ ವಿದ್ಯಾರ್ಥಿಗಳು ಬಳಿಕ ಎಸ್‌ಪಿ ಮಿಥುನ್ ಕುಮಾರ್‌ರವರ ಬಳಿ ಸೆಲ್ಫಿಗಾಗಿ ಮುಗಿಬಿದ್ದರು. ಸಮವಸ್ತ್ರದ ಅಧಿಕಾರಿಗಳಿಗೆ ಶೇಕ್ ಹ್ಯಾಂಡ್ ಕೊಟ್ಟು ತಮ್ಮನ್ನು ರಕ್ಷಿಸುವ ಪೊಲೀಸ್ ಇಲಾಖೆಗೆ ಸೆಲ್ಯೂಟ್ ಹೊಡೆದರು. ಇದೇ ಸಂದರ್ಭದಲ್ಲಿ ಆಟೋದಿಂದ ಸಮಸ್ಯೆಯಾದಲ್ಲಿ ಪೊಲೀಸ್ ಇಲಾಖೆ ಮಾಹಿತಿ ನೀಡುವಂತೆ ಸಹಾಯವಾಣಿ ಸಂಖ್ಯೆ ನೀಡಿದರು.