ಖಜಾನೆ ಇಲಾಖೆಯ ಅಧಿಕಾರಿಯೊಬ್ಬರ ಲಂಚದ ಬಗ್ಗೆ ವಿಳಾಸವಿಲ್ಲದ ಪತ್ರವೊಂದು ಮೇಲಧಿಕಾರಿಗಳಿಗೆ ಶುಕ್ರವಾರ ಬಂದಿದ್ದು, ಚಳ್ಳಕೆರೆ ತಾಲೂಕಿನ ಸರ್ಕಾರಿ ಅಧಿಕಾರಿಗಳಲ್ಲಿ ಗಾಬರಿ ಹುಟ್ಟಿಹಾಕಿದೆ. ಖಜಾನೆ ಇಲಾಖೆಯ ಉಪನಿರ್ದೇಶಕರಾದ ರಮೇಶ್ ಅವರು ಶನಿವಾರ ಚಳ್ಳಕೆರೆಗೆ ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದು ಟೀಕೆಗೆ ಗುರಿಯಾಗಿದೆ.
ಅನಾಮಧೇಯ ಅಂಚೆ ಪತ್ರದ ಲಕೋಟೆಯ ಮೇಲೆ ದೂರುದಾರನ ವಿಳಾಸವಾಗಲೀ, ಮೊಬೈಲ್ ಸಂಖ್ಯೆಯಾಗಲೀ ಇರಲಿಲ್ಲ. ತೆರೆದು ನೋಡಿದಾಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಖಜಾನೆ ಆಯುಕ್ತರಿಗೆ, ಶಾಸಕ ಟಿ ರಘುಮೂರ್ತಿ ಅವರಿಗೆ ಮತ್ತು ಚಿತ್ರದುರ್ಗ ಲೋಕಾಯುಕ್ತ ಕಚೇರಿಗೆ ಭ್ರಷ್ಟಾಚಾರ ಸಂಬಂಧ ದೂರು ನೀಡಿರುವುದು ಗೊತ್ತಾಗಿದೆ.
ಹೀಗಾಗಿ ಚಿತ್ರದುರ್ಗದ ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ರಮೇಶ್, ಚಳ್ಳಕೆರೆ ಉಪಖಜಾನೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ.
ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ ಟಿ ವೀರೇಶ್ ಪ್ರತಿಕ್ರಿಯಿಸಿ, “ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಬರುವ ಅನಾಮಧೇಯ ದೂರುಗಳ ಬಗ್ಗೆ ಕ್ರಮಕೈಗೊಳ್ಳುವಂತಿಲ್ಲ. ಪೂರ್ಣ ವಿಳಾಸ, ದಾಖಲೆ ಇದ್ದರೆ ಮಾತ್ರ ತನಿಖೆ ನಡೆಸುವಂತೆ ಸರ್ಕಾರ ಈಗಾಗಲೇ ಸುತ್ತೋಲೆಯನ್ನೂ ಹೊರಡಿಸಿದೆ. ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಬರುವ ದೂರುಗಳು ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಗ್ರಹದಿಂದ ಕೂಡಿರುತ್ತವೆ” ಎಂದರು.
“ಇಂತಹ ದೂರುಗಳಲ್ಲಿ ಪೂರಕವಾದ ಮಾಹಿತಿ, ದಾಖಲೆಗಳು ಸಾಮಾನ್ಯವಾಗಿ ಇರುವುದಿಲ್ಲ. ಈ ಆರೋಪಗಳಿಂದಾಗಿ ಸರ್ಕಾರಿ ಅಧಿಕಾರಿ, ನೌಕರರ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗುತ್ತದೆ. ಜೊತೆಗೆ ದಕ್ಷ ಮತ್ತು ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಅವರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆಯಾದರೂ ಇಂತಹ ಅನಾಮಧೇಯ ದೂರು ಪತ್ರಗಳಿಗೆ ಮಾನ್ಯತೆ ನೀಡಬಾರದು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ?: ಚಳ್ಳಕೆರೆ | ರಸ್ತೆ ಕಾಮಗಾರಿ ಸ್ಥಗಿತ; ಉಪಲೋಕಾಯುಕ್ತ ನ್ಯಾ. ಫಣೀಂದ್ರರಿಗೆ ದೂರು ನೀಡಲು ಸ್ಥಳೀಯರ ನಿರ್ಧಾರ
ಚಳ್ಳಕೆರೆ ಉಪಖಜಾನೆ ಅಧಿಕಾರಿಗಳ ಪರವಾಗಿ ನಿಂತಿರುವ ತಾಲೂಕು ನೌಕರರ ಸಂಘವು, “ಈ ಅಧಿಕಾರಿಯಿಂದ ಇದುವರೆಗೂ ಯಾವುದೇ ತೊಂದರೆಯಾಗಿಲ್ಲ, ಸಕಾರಾತ್ಮಕವಾಗಿ ಕೆಲಸ ನಿರ್ವಹಿಸಿದ್ದಾರೆ” ಎಂದು ಹೇಳಿದೆ. ಜಿಲ್ಲಾ ಖಜಾನೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸುವ ವೇಳೆ ವಿವಿಧ ಇಲಾಖೆಯ ಸರಕಾರಿ ನೌಕರರು, ಅನುದಾನಿತ ಶಾಲೆ ಶಿಕ್ಷಕರು, ಸಂಘದ ಪದಾಧಿಕಾರಿಗಳು ಹಾಜರಿದ್ದರು.
