ಪರಿಸರದ ಕಾಳಜಿ ಕೇವಲ ವಾಟ್ಸಪ್ ಸ್ಟೇಟಸ್‌ಗೆ ಸೀಮಿತವಾಗಬಾರದು. ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರದ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದು ನಟ, ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಹೇಳಿದರು.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಯುವ ಸಂಗಮ ಯುವ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮಿಣ ಅಭಿವೃದ್ಧಿ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿದ್ದ ʼವೃಕ್ಷಥಾನ್ ಜಾಥಾʼದಲ್ಲಿ ಮಾತನಾಡಿದ ಅವರು, “ಮರ ಗಿಡಗಳು ಮನುಷ್ಯನಿಗೆ ಶುದ್ಧ ಗಾಳಿ ನೀಡುತ್ತವೆ. ನೆರಳು, ಹಣ್ಣು ನೀಡಿ ನೆರವಾಗುತ್ತಿವೆ. ಆದರೆ ಮನುಷ್ಯ ದುರಾಸೆಯಿಂದ ಪರಿಸರವನ್ನು ಹಾಳುಮಾಡಿ ನಾಶ ಮಾಡುತ್ತಿದ್ದಾನೆ. ಪ್ರಕೃತಿ ಇದ್ದರೆ ಜೀವ ಸಂಕುಲ ಬದುಕಲು ಸಾಧ್ಯ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಬೆಳಕು, ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು” ಎಂದರು.
ದೇವರ ಹಿಪ್ಪರಗಿ ಜೆಎಮ್‌ಜೆ ನಿರ್ದೇಶಕಿ ಸಿಸ್ಟರ್ ಹೃದಯಾ ಮಾತನಾಡಿ, “ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಆಸಕ್ತಿ ವಹಿಸಬೇಕಿದೆ. ಒಬ್ಬರೇ ಮಾಡುವುದಕ್ಕಿಂತ ಒಬ್ಬೊಬ್ಬರೂ ಸೇರಿ ಮಾಡುವ ಕೆಲಸ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಇಂಗಳಗಿ-ಚಟ್ಟರಕಿ ಗ್ರಾಮ, ಜಮೀನುಗಳಿಗೆ ತೆರಳಲು ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹ
ಈ ವೇಳೆ ಸಂಗಮ ಸಂಸ್ಥೆ ನಿರ್ದೇಶಕ ಫಾ. ಸಂತೋಷ, ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ ಮೆಲ್ಲೊ, ಪೊಲೀಸ್ ಹವಾಲ್ದಾರ ವಿ ಪಿ ಜೋಗಿ, ರಾಜೀವ ಕುರಿಮನಿ, ಫಾ. ಜೀವನ, ಸಂಗಮ ಸಮಗ್ರ ಅಭಿವೃದ್ಧಿ ಕೇಂದ್ರದ ಸಿಬ್ಬಂದಿಗಳು, ಯುವ ಸಂಗಮ ಯುವ ಒಕ್ಕೂಟದ ಯುವಕರು, ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು ಸೇರಿದಂತೆ ಇನ್ನಿತರರು ಇದ್ದರು.
