ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದಾಗ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಅವರು ಪ್ರತಿನಿಧಿಸುತ್ತಿರುವ ವಾರ್ಡ್ 17ರ ಕೋಡಿಕಲ್ ಶಾಲೆಯ ಬಳಿ ಸುಸಜ್ಜಿತ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಶಿಕ್ಷಣದೊಂದಿಗೆ ಬಾಬಾ ಸಾಹೇಬರ ಹಾದಿಯಲ್ಲಿ ನಡೆಯಬೇಕು. ಅವರ ಹೆಸರಿನಲ್ಲಿ ನಿರ್ಮಾಣವಾದ ಈ ಭವನದಲ್ಲಿ ಶಿಕ್ಷಣ, ಉದ್ಯೋಗ, ಮತ್ತಿತರ ತರಬೇತಿಗಳು ದೊರಕಲಿ. ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಪ್ರಯೋಜನವಾಗಲಿ” ಎಂದು ಆಶಿಸಿದರು. ಭವನದ ನಿರ್ಮಾಣ ಪೂರ್ಣಗೊಳಿಸಲು ಬೇಕಾದ ಕ್ರಮ ಕೈಗೊಂಡ ಮೇಯರ್ ಮನೋಜ್ ಕುಮಾರ್ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಮನೋಜ್ ಕುಮಾರ್, “ಈ ಸಮುದಾಯ ಭವನ ನಿರ್ಮಾಣಕ್ಕೆ ಹಲವು ಅಡ್ಡಿ ಆತಂಕ ಎದುರಾಗಿತ್ತು. ನಾನು ಪಾಲಿಕೆ ಸದಸ್ಯನಾದ ಬಳಿಕ ಪೂರ್ಣಗೊಳಿಸಲು ಮುಂದಾದೆ. ಆದರೆ ಕೊರೊನಾ ಅಡಚಣೆ ಜೊತೆಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ತಾಂತ್ರಿಕ ಕಾರಣದಿಂದ ಸಮಾಜ ಕಲ್ಯಾಣ ಇಲಾಖೆಯಿಂದಲೂ ಅನುದಾನ ಸಿಗಲಿಲ್ಲ. ಕೊನೆಗೆ ಪಾಲಿಕೆ ಸಾಮಾನ್ಯ ನಿಧಿ ಹಾಗೂ ಮೀಸಲು ನಿಧಿಯಿಂದ ಹಣ ಒದಗಿಸಿ ಭವನ ಪೂರ್ಣಗೊಳಿಸಿದ್ದೇನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೂ ಹಾಗೂ ಇತರರಿಗೂ ಈ ಸಮಾಜ ಭವನದಲ್ಲಿ ಕಡಿಮೆ ಶುಲ್ಕದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗುವುದು. ಇದರಿಂದ ಪಾಲಿಕೆಗೂ ಆದಾಯ ಬರುವಂತಾಗುತ್ತದೆ. ಸಮಾಜಮುಖಿ ಚಟುವಟಿಕೆಗೆ ಈ ಭವನ ಸದುಪಯೋಗವಾಗಲಿ” ಎಂದರು.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ಸುರತ್ಕಲ್‌ನ ಐಎನ್‌ಸಿಯುಬಿ8: ಪ್ರಮುಖ ಉದ್ಯಮಶೀಲತಾ ಉತ್ಸವಕ್ಕೆ ಚಾಲನೆ
ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಜಯಲಕ್ಷ್ಮಿ, ಕಿರಣ್ ಕುಮಾರ್ ಕೋಡಿಕಲ್, ಎಸ್ಎಸ್‌ಡಿಪಿ ಮಂದಿರದ ಸಂಚಾಲಕರಾದ ಪುರುಷೋತ್ತಮ್ ಪೂಜಾರಿ, ಮುಂಡಲ ಯುವ ವೇದಿಕೆಯ ಪ್ರದೀಪ್ ಕಾಪಿಕಾಡ್, ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯ ಚಂದ್ರಕುಮಾರ್, ಡಾ. ಬಿ ಆರ್ ಅಂಬೇಡ್ಕರ್ ಸೇವಾ ಸಮಿತಿಯ ಚಂದ್ರಹಾಸ್ ಮತ್ತು ಇತರರು ಇದ್ದರು.
