ಗೌರಿಬಿದನೂರು | ಡಾ.ಎಚ್.ಎನ್‌ ಸರಳತೆಯ ಜೀವನ ಸಕಲರಿಗೂ ಮಾದರಿ ; ನಾಡೋಜ ಹಂಪ ನಾಗರಾಜಯ್ಯ

Date:

Advertisements

“ಸರಳ ವೇಷಭೂಷಣ ಒಂದು ರೂಪಕ. ಮಹತ್ವ ಎಂಬುದು ವೇಷಭೂಷಣಗಳಲ್ಲಿಲ್ಲ. ನಾವು ಗಳಿಸುವ ಘನತೆಗೆ, ಭಾವಕ್ಕೆ, ನಮ್ಮ ಅರಿವಿಗೆ ಮಹತ್ವ ದೊರೆಯುತ್ತದೆ. ಹಾಗಾಗಿ ಸರಳ ಜೀವನ ನಡೆಸಿದ ಎಚ್‌ಎನ್‌ ಅವರ ದಾರಿ ಸಕಲರಿಗೂ ಮಾದರಿ” ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಭಾನುವಾರ ಆಯೋಜಿಸಿದ್ದ ಡಾ.ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಮತ್ತು ಶಾಲಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.

ಮರಳೆಯ ಪುಸ್ತಕವನ್ನು ನೋಡಿದಾಗ ಏನೂ ತಿಳಿಯುವುದಿಲ್ಲ. ಅದನ್ನ ತೆರೆದು, ಒಳಹೊಕ್ಕಾಗ ಅಂತರಂಗದ ಮಹತ್ವದ ಅರಿವಾಗುತ್ತದೆ. ಅಂತಹ ದಾರಿಯನ್ನು ಸವೆಸಿದವರು ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ. ಅವರು ಓದಿದಂತ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಹಿರಿಯ ವಿದ್ಯಾರ್ಥಿಗಳು ಪಣತೊಟ್ಟಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisements
WhatsApp Image 2025 02 03 at 10.54.59 AM 1

ಇದು ಬರೀ ಶಾಲೆಯಲ್ಲ. ಮಹಾಪುರುಷನಿಗೆ ಜನ್ಮಕೊಟ್ಟ ಶಾಲೆ. ಗಾಂಧೀಜಿಯವರ ಪುಣ್ಯಹಸ್ತದಿಂದ ಆಶೀರ್ವಾದ ಪಡೆದು ಶಿಕ್ಷಣ ತಜ್ಞಾನಾದ ಎಚ್.ಎನ್ ಅವರಿಗೆ ಜನ್ಮಕೊಟ್ಟ ಸ್ಥಳ ಇದು ಎಂದು ಬಣ್ಣಿಸಿದರು.

ಡಾ.ಎಚ್.ನರಸಿಂಹಯ್ಯ ಅವರು ಕನ್ನಡ ಭಾಷಾ ಪ್ರೇಮಿ ಆಗಿದ್ದರು. ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು. ಸ್ನೇಹ ಸೌಹಾರ್ದ ಬಾಳ್ವೆಯ ಸಂದೇಶವನ್ನು ಕೊಟ್ಟಿರುವ ಜಿಲ್ಲೆಗಳು ಎಂದರೆ ಅದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು. ನಮ್ಮ ಭಾಗದಲ್ಲಿ ತೆಲುಗು, ಕನ್ನಡ ಎರಡೂ ಬಳಕೆಯಲ್ಲಿದೆ. ತೆಲುಗು ಮತ್ತು ಕನ್ನಡಿಗರು ಎಂದಿಗೂ ಭಾಷೆಯ ವಿಷಯಕ್ಕೆ ದ್ವೇಷ ಹುಟ್ಟಿಸಿಕೊಳ್ಳಲಿಲ್ಲ. ತೆಲುಗರು ಎಂದಿಗೂ ತೆಲುಗು ಶಾಲೆ ಕೊಡಿ ಎಂದು ಕೇಳಲಿಲ್ಲ. ಎಂದಿಗೂ ಸಹ ಸ್ಫೋಟಗೊಂಡು ಬೇರೆ ರಾಜ್ಯಕ್ಕೆ ಹೋಗುತ್ತೇವೆ ಎಂದು ಹೇಳಲಿಲ್ಲ. ತೆಲುಗರಿಗೆ ಪ್ರೀತಿ ಕೊಟ್ಟಿರುವುದರಲ್ಲಿ ಕನ್ನಡಿಗರ ಔದಾರ್ಯವು ಇದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ  

ನಾನು ಕನ್ನಡ ಓದಿದರೂ ಸಹ, ಸುಮಾರು ಪುಸ್ತಕಗಳನ್ನು ಇಂಗ್ಲೀಷ್‌ನಲ್ಲಿ ಬರೆದಿದ್ದೇನೆ. ನಮಗೆ ಆಸಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ನಾನು ಬರೆದ ದ ಸ್ಪೆಕ್ಟ್ರಮ್‌ ಆಫ್‌ ಕ್ಲಾಸಿಕಲ್‌ ಲಿಟರೇಚರ್‌ ಇನ್‌ ಕರ್ನಾಟಕ ಎಂಬ ಪುಸ್ತಕ ಇತ್ತೀಚೆಗಷ್ಟೇ ಲಂಡನ್‌ನಲ್ಲಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

WhatsApp Image 2025 02 03 at 10.55.00 AM

ಮಾಜಿ ಶಾಸಕ ಎನ್.ಎಚ್.ಶಿವಶಂಕರ್ ರೆಡ್ಡಿ ಮಾತನಾಡಿ, ಸಿದ್ದರಾಮಯ್ಯ ಅವರ ಸದಾಶಯದಿಂದ ಎಚ್‌ಎನ್‌ ವಿಜ್ಞಾನ ಪಾರ್ಕ್‌ ನಿರ್ಮಾಣವಾಯಿತು. ಆಧುನಿಕ ಕಲಿಕಾ ವಿಧಾನಗಳನ್ನು ಈ ಶಾಲೆಯಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಹೊಂದಿರುವ ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ದೇಶ ಈಡೇರಲಿ. ಎಲ್ಲರೂ ಒಗ್ಗೂಡಿ ಎಚ್‌ ಎನ್‌ ಅವರ ಕನಸನ್ನು ನನಸು ಮಾಡುವ ಪ್ರಯತ್ನ ಮಾಡೋಣ ಎಂದು ಹೇಳಿದರು.

ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಜಿಪಂ ಮಾಜಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಮಾತನಾಡಿ, ಡಾ.ಎಚ್.ಎನ್ ಅವರು ಓದಿದ ಈ ಶಾಲೆಯನ್ನು ರಾಜ್ಯದ ಅತ್ಯುತ್ತಮ ಮಾದರಿ ಶಾಲೆಯನ್ನಾಗಿ ಮಾಡಲು ನಮ್ಮ ಹಿರಿಯ ವಿದ್ಯಾರ್ಥಿಗಳ ಸಂಘ ಬದ್ದವಾಗಿರುತ್ತದೆ. ಸರಕಾರ ಈ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮಾಡಿಕೊಟ್ಟರೆ, ಇದೇ ಆವರಣದಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಎಲ್ಲಾ ತರಗತಿಗಳು ನಡೆಯುತ್ತವೆ. ಅದಕ್ಕೆ ಬೇಕಾದ ಸ್ಥಳಾವಕಾಶವೂ ಇದೆ. ಇದಕ್ಕೆ ಸರಕಾರ ಅನುವು ಮಾಡಿಕೊಡಬೇಕು ಎಂದು ಕಾರ್ಯಕ್ರಮದಲ್ಲಿದ್ದ ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಶಾಲೆಯ ಮತ್ತೊಬ್ಬ ಹಿರಿಯ ವಿದ್ಯಾರ್ಥಿ ಎಚ್.ಎನ್.ಸುಬ್ರಹ್ಮಣ್ಯ ಮಾತನಾಡಿ, ನರಸಿಂಹಯ್ಯ ಅವರೊಂದಿಗಿನ ಒಡನಾಟ ಮತ್ತು ಗೆಳೆತನದ ದಿನಗಳನ್ನು ನೆನೆದು ಕಣ್ಣೀರಾದರು.

ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಮಾತನಾಡಿ, ನರಸಿಂಹಯ್ಯ ಅವರ ದೂರದೃಷ್ಟಿ ಜ್ಞಾನ ಭಾರತಿ ಕ್ಯಾಂಪಸ್ ನೋಡಿದಾಗ ತಿಳಿಯುತ್ತೆ. 1200 ಎಕರೆ ಜಾಗ ವಿದೇಶಿ ಮಾದರಿಯಲ್ಲಿ ವಿನ್ಯಾಸ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದರು.

WhatsApp Image 2025 02 03 at 10.54.59 AM

ಡಾ.ಎಚ್.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ಬೇಡಿಕೆ ಕುರಿತು ಮುಖ್ಯಮಂತ್ರಿಗಳು ಕಾನೂನು ಸಚಿವ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ಸೂಚನೆ ನೀಡಿದ್ದಾರೆ. ಕರ್ನಾಟಕ ಪಬ್ಲಿಕ್‌ ಶಾಲೆಯ ಪಟ್ಟಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದೇವೆ. ಪರಿಶೀಲನೆ ನಡೆಸಿ, ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಂಸದ ಡಾ.ಕೆ.ಸುಧಾಕರ್‌ ಮಾತನಾಡಿ, ಡಾ.ಎಚ್.ಎನ್ ಮತ್ತು ಸರ್.ಎಂ.ವಿ ಅವರು ನಮ್ಮ ದೇಶದ ಎರಡು ರತ್ನಗಳು. ಮೌಢ್ಯಕ್ಕೆ ಮತ್ತು ಮೂಢನಂಬಿಕೆಗೆ ಬಲವಾಗಿ ಪ್ರತಿರೋಧ ತೋರುತ್ತಿದ್ದವರು ಡಾ.ಎಚ್.ಎನ್ ಅವರು. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳೇ ನಮ್ಮ ದೇವರುಗಳು. ಉತ್ತಮ ಶಿಕ್ಷಣ ಮತ್ತು ಆರೋಗ್ಯವನ್ನು ಕೊಟ್ಟಾಗ ಮಾತ್ರವೇ ಸಮಸಮಾಜವನ್ನು ನಿರ್ಮಾಣ ಮಾಡಬಹುದು, ಪರಿವರ್ತನೆಯನ್ನು ಮಾಡಬಹುದು ಎಂಬ ತತ್ವವನ್ನು ಅಳವಡಿಸಿಕೊಂಡು ಬಂದವರು ಎಂದು ತಿಳಿಸಿದರು.

ಆಧುನಿಕ ಯುಗದಲ್ಲಿ ಗುರುಗಳೇ ತಾಯಿ ತಂದೆಯ ಎರಡೂ ಕೆಲಸ ಮಾಡುತ್ತಿದ್ದಾರೆ. ಅವರು ಕಟ್ಟಿದ್ದು ನ್ಯಾಶನಲ್ ಶಾಲೆಗಳನ್ನು. ಅವರು ಯಾವುದೇ ದೊಡ್ಡ ಕಾಲೇಜುಗಳನ್ನು ಮಾಡಲಿಲ್ಲ. ಬದಲಾಗಿ ಬಡಜನರ ಒಳಿತಿಗಾಗಿ ದುಡಿದವರು. ಡಾ.ಎಚ್.ಎನ್‌ ಅವರು ಸರಳವಾದ ಆದರ್ಶವನ್ನು ಇಟ್ಟುಕೊಂಡವರು ಎಂದು ಹೊಗಳಿದರು.

21 ಸಾವಿರ ಹೊಸ ಸರಕಾರಿ ಶಾಲೆ ಕೊಠಡಿ ಮಾಡುವ ಉದ್ದೇಶದಿಂದ ವಿವೇಕ ಎಂಬ ಯೋಜನೆಯನ್ನು ನಮ್ಮ ಸರಕಾರ ಜಾರಿಗೆ ತಂದಿತ್ತು. ಆದರೆ, ಕಾಂಗ್ರೆಸ್ ಸರಕಾರ ಆ ಯೋಜನೆಯನ್ನು ಜಾರಿಗೊಳಿಸಿಲ್ಲ. ಸರಕಾರಿ ಶಾಲೆಗಳು ಬಹಳ ದುಸ್ಥಿತಿಯಲ್ಲಿವೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿದಿದೆ. ಅಡಿಪಾಯ ಸರಿ ಆಗದಿದ್ದರೆ, ಉನ್ನತ ಶಿಕ್ಷಣ ಸರಿಯಾಗುವುದಿಲ್ಲ. ಹೆಣ್ಣು ಗಂಡೆಂಬ ಬೇಧಭಾವವಿಲ್ಲದೆ ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

WhatsApp Image 2025 02 03 at 11.14.58 AM

ಗೌರಿಬಿದನೂರು ಶಾಸಕ ಪುಟ್ಟಸ್ವಾಮಿ ಗೌಡ ಮಾತನಾಡಿ, ಪ್ರಶ್ನಿಸದೆ ಏನನ್ನು ಒಪ್ಪಬೇಡಿ ಎಂಬ ತತ್ವದಂತೆ ಮೌಢ್ಯಗಳನ್ನು ಬಿಟ್ಟು ವಿಚಾರವಂತರಾಗಿ. ನರಸಿಂಹಯ್ಯ ಅವರ ಹೆಸರಲ್ಲಿ ಪ್ರಾಧಿಕಾರ ಆಗಬೇಕು ಎಂಬುದು ನಮ್ಮೆಲ್ಲರ ಆಶಯ. ಇದಕ್ಕೆ ಸರಕಾರ ಸ್ಪಂದಿಸಬೇಕು ಎಂದರು.

ಇದನ್ನೂ ಓದಿ : ಆಸ್ಪತ್ರೆಗೆ ದಾಖಲಾದ ಸಿಎಂ ಸಿದ್ದರಾಮಯ್ಯ: ಚಿಕ್ಕಬಳ್ಳಾಪುರ, ರಾಮನಗರ ಪ್ರವಾಸ ರದ್ದು

ಶಾಲೆಯ ಹಿರಿಯ ವಿದ್ಯಾರ್ಥಿ ಡಾ.ಎಚ್.ವಿ ವಾಸು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯಾದ್ಯಂತ ಸಾಕಷ್ಟು ಶತಮಾನ ಕಂಡ ಶಾಲೆಗಳಿವೆ. ಆದರೆ, ರಾಜ್ಯದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಬೇಸರದ ಸಂಗತಿ. ನಾವು ಓದುವಾಗ ಗ್ರಾಮದ ಶ್ರೀಮಂತ ಮತ್ತು ಬಡ ಕುಟುಂಬಗಳ ಎಲ್ಲಾ ಮಕ್ಕಳು ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಆದರೆ, ಪ್ರಸ್ತುತ ಸರಕಾರಿ ಶಾಲೆಗಳಿಗೆ ಶಿಕ್ಷಣ ಸಚಿವರು ಸೇರಿದಂತೆ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಬಿಇಒ ಮಕ್ಕಳಷ್ಟೇ ಅಲ್ಲದೇ ಸರಕಾರಿ ಶಾಲೆಯಲ್ಲೇ ಪಾಠ ಮಾಡುವ ಶಿಕ್ಷಕರ ಮಕ್ಕಳೂ ಸಹ ಸರಕಾರಿ ಶಾಲೆಯಲ್ಲಿ ಓದುತ್ತಿಲ್ಲ. ಹೀಗಿರುವಾಗ ಸರಕಾರಿ ಶಾಲೆಗಳ ಗುಣಮಟ್ಟದಲ್ಲಿ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ. ಆದ್ದರಿಂದ, ಈ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ನಾವೆಲ್ಲರೂ ಸರಕಾರಿ ಶಾಲೆಗಳ ಈ ದುಸ್ಥಿತಿಯನ್ನು ಬದಲಿಸುತ್ತೇವೆ ಎಂಬ ಸಂಕಲ್ಪ ತೊಡಬೇಕಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ನಾಗಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ತಿಮ್ಮಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ.ಮಂಜುನಾಥ್, ವಕೀಲ ಎಚ್.ಎಲ್.ವೆಂಕಟೇಶ್, ಎಚ್.ಎಸ್.ಶಶಿಧರ್, ಶಿವರಾಮರೆಡ್ಡಿ, ದಾನಿಗಳಾದ ಕೃಷ್ಣ, ವಸಂತ್, ಮುನಿ ಕೆಂಪೇಗೌಡ, ಬಿಇಒ ಶ್ರೀನಿವಾಸ್ ಮೂರ್ತಿ, ಡಿಡಿಪಿಯು ಮರಿಸ್ವಾಮಿ, ಮಾಜಿ ಶಾಸಕಿ ಜ್ಯೋತಿ ರೆಡ್ಡಿ, ವೆಂಕಟೇಶ್, ಶಿವರಾಂ, ನಾಗರಾಜು, ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀ ಸೇರಿದಂತೆ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X