ತುಂಗಾ ಮೇಲ್ದಂಡೆ ಕಾಲುವೆ ಸೇತುವೆಯ ಕಳಪೆ ಕಾಮಗಾರಿಯಿಂದ ಸೋರುತ್ತಿದೆ. ಈ ಸೇತುವೆ ಕೆಳಭಾಗದಲ್ಲಿ ತಗ್ಗು ಗುಂಡಿಗಳಿಂದ ತುಂಬಿದ್ದು, ಇದರಿಂದ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಿಂದ ಹಿರೇಕೆರೂರು ತಾಲೂಕಿಗೆ ತಲುಪುವ ರಾಷ್ಟೀಯ ಹೆದ್ದಾರಿ 766ರ ರಸ್ತೆ ಇದಾಗಿದೆ. ರಟ್ಟೀಹಳ್ಳಿ-ಮಾಸೂರು ಮಾರ್ಗ ಮಧ್ಯದಲ್ಲಿ ತುಂಗಾ ಮೇಲ್ದಂಡೆ ಯೋಜನೆಯಡಿ ಮೇಲು ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಯ ಕಳಪೆ ಕಾಮಗಾರಿಯಿಂದ ಹಲವಾರು ವರ್ಷಗಳಿಂದ ಸೋರುತ್ತಿದೆ. ಇದರಿಂದ ಸೇತುವೆ ಕೇಳಭಾಗದಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ.

“ತುಂಗಾ ಮೇಲ್ದಂಡೆ ಸೇತುವೆ ಕಳಪೆ ಕಾಮಗಾರಿ ಆಗಿದ್ದರಿಂದ ಕಾಲುವೆಯ ನೀರು ಸೋರಿಕೆಯಾಗಿ ಸೇತುವೆಯ ಕೇಳಭಾಗ ಅಂದರೆ ಅಂಡರ್ಗ್ರೌಂಡ್ನಲ್ಲಿ ನೀರು ಸಂಗ್ರಹವಾಗುತ್ತಿದೆ. ಅಷ್ಟೇ ಅಲ್ಲದೆ ಅವೈಜ್ಞಾನಿಕ ಅಂಡರ್ ಗ್ರೌಂಡ್ ರಸ್ತೆ ನಿರ್ಮಾಣ ಮಾಡಿದ್ದರಿಂದ ಮಳೆಗಾಲದಲ್ಲಿ ಇದಕ್ಕೂ ಹೆಚ್ಚು ನೀರು ಸಂಗ್ರಹವಾಗುತ್ತದೆ.ಕಾಂಕ್ರೀಟ್ ರಸ್ತೆಗೆ ಹಾಕಿರುವ ಕಬ್ಬಿಣದ ಎಳೆಗಳು ಹೊರಗೆ ಚಾಚಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಬಸ್ಸು, ದ್ವಿಚಕ್ರ ವಾಹನ ಸವಾರರು, ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹಲವಾರು ಸಂಘ-ಸಂಸ್ಥೆಗಳು, ರೈತರು ಮೌಖಿಕವಾಗಿ ಹಾಗೂ ಲಿಖಿತವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯ ಸಮಸ್ಯೆ ಕುರಿತು ಅಧಿಕಾರಿಗಳು, ಶಾಸಕರು ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಿ ಹೋಗುತ್ತಾರೆ. ಮತ್ತೆ ಆ ಸಮಸ್ಯೆ ಹಾಗೇ ಮುಂದುವರೆಯುತ್ತದೆ. ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ” ಎಂಬುದು ಸ್ಥಳೀಯರ ಆರೋಪವಾಗಿದೆ.

ಈ ಕುರಿತು ಡಿಎಸ್ಎಸ್ ಮುಖಂಡ ಕುಮಾರ್ ಈದಿನ.ಕಾಮ್ ಜತೆಗೆ ಮಾತನಾಡಿ, “ತುಂಗಾ ಮೇಲ್ದಂಡೆ ಕಳಪೆ ಕಾಮಗಾರಿಯನ್ನು ಸರಿಪಡಿಸಿ ನೀರು ಸೋರಿಕೆಯನ್ನು ನಿಲ್ಲಿಸಬೇಕು. ಸಮರ್ಪಕವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಬೇಕು. ರಸ್ತೆಯ ತಗ್ಗು ಗುಂಡಿಗಳನ್ನು ಸರಿಪಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಸರಿಪಡಿಸದಿದ್ದರೆ ದಲಿತಪರ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಒಗ್ಗೂಡಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ತುಂಗಭದ್ರಾ ನೀರು ಹಂಚಿಕೆ ಒಪ್ಪಂದ; ಅವಧಿಗೂ ಮುನ್ನ ಬದಲಾವಣೆಗೆ ಪರಿಸರವಾದಿ ಸದಾನಂದ ಹೆಗ್ಗಡಲ್ ಮಠ ಆಗ್ರಹ
“ರೈತರು ತಮ್ಮ ಹೊಲಗಳಿಗೆ ತುಂಗಾ ಕಾಲುವೆ ಮೂಲಕ ನೀರು ಹರಿಸುವಾಗ ಮಣ್ಣುಬಿದ್ದಿದೆ. ಅದು ಈ ಸೇತುವೆ ಹತ್ತಿರ ಬಂದು ಸಂಗ್ರಹ ಆಗುವುದರಿಂದ ಸೋರುತ್ತಿದೆ. ಎಂಎಲ್ಎ ಗ್ರ್ಯಾಂಟ್ ಕೊಟ್ಟಿರುವರು. ಟೆಂಡರ್ ಕರೆದು ಸರಿಪಡಿಸಲಾಗುವುದು” ಎಂದು ಅಸಿಸ್ಟೆಂಟ್ ಎಂಜಿನಿಯರ್ ರವಿಕುಮಾರ್ ಈದಿನ.ಕಾಮ್ಗೆ ಪ್ರತಿಕ್ರಿಯಿಸಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.