ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಜನವರಿ 29 ರಂದು 30 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆಯನ್ನು ಸೋಮವಾರ ದುರದೃಷ್ಟಕರ ಎಂದು ಕರೆದ ಸುಪ್ರೀಂ ಕೋರ್ಟ್, ಉತ್ತರ ಪ್ರದೇಶದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದೆ.
ಅರ್ಜಿದಾರ ವಕೀಲ ವಿಶಾಲ್ ತಿವಾರಿ ಅವರಿಗೆ ಅಲಹಾಬಾದ್ ಹೈಕೋರ್ಟ್‌ಗೆ ಹೋಗುವಂತೆ ನ್ಯಾಯಾಲಯವು ತಿಳಿಸಿದೆ.
“ಇದೊಂದು ದುರದೃಷ್ಟಕರ ಘಟನೆ. ಈಗಾಗಲೇ ನ್ಯಾಯಾಂಗ ಆಯೋಗವನ್ನು ರಚಿಸಲಾಗಿದೆ. ಈ ಕುರಿತು ಹೈಕೋರ್ಟ್ ಸಂಪರ್ಕಿಸಿ,” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕಾಲ್ತುಳಿತ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶಾಲ್ ತಿವಾರಿ ಅವರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಮಹಿಳಾ ಸಂಘಟನೆಗಳಿಂದ ಮೌನ ಜಾಗೃತಿ ಅಭಿಯಾನ
ರಾಜ್ಯವನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ, ಕಾಲ್ತುಳಿತ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಇದೇ ರೀತಿಯ ಅರ್ಜಿಯನ್ನೂ ಅವರು ಉಲ್ಲೇಖಿಸಿದರು.
ವಕೀಲ ವಿಶಾಲ್ ತಿವಾರಿ ಸಲ್ಲಿಸಿದ ಅರ್ಜಿಯಲ್ಲಿ, ಆದಿತ್ಯನಾಥ್ ಸರ್ಕಾರವು ಮಹಾ ಕುಂಭಮೇಳದಲ್ಲಿ, ವಿಶೇಷವಾಗಿ ಮೌನಿ ಅಮವಾಸ್ಯೆಯಂದು ಕಾಲ್ತುಳಿತವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ವಾದಿಸಿದರು. ಆಡಳಿತದಲ್ಲಿ ಲೋಪಗಳಾಗಿವೆ, ಕುಂಭಮೇಳದಲ್ಲಿ ಭಕ್ತರಿಗಾಗಿ ಮೀಸಲಾದ ಸಹಾಯ ಕೇಂದ್ರವನ್ನು ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.
ಅರ್ಜಿದಾರರು ಎಲ್ಲ ರಾಜ್ಯಗಳು ಜನಸಂದಣಿ ನಿರ್ವಹಣಾ ನೀತಿಗಳನ್ನು ಸುಧಾರಿಸಲು ನಿರ್ದೇಶಿಸುವಂತೆ ನ್ಯಾಯಾಲಯವನ್ನು ಕೋರಿದರು. ಉತ್ತರ ಪ್ರದೇಶ ಸರ್ಕಾರದ ಸಮನ್ವಯದೊಂದಿಗೆ ವಿವಿಧ ರಾಜ್ಯಗಳ ವೈದ್ಯಕೀಯ ತಂಡಗಳನ್ನು ನಿಯೋಜಿಸುವಂತೆ ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದರು.
