ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 22 ವರ್ಷದ ದಲಿತ ಸಮುದಾಯದ ಯುವತಿಯ ಅಮಾನುಷ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಹರಿ ರಾಮ್ ಕೋರಿ, ವಿಜಯ್ ಸಾಹು ಹಾಗೂ ದಿಗ್ವಿಜಯ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳೆಲ್ಲರೂ ಅಯೋಧ್ಯೆ ನಿವಾಸಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರನ್ ನಯ್ಯರ್ ತಿಳಿಸಿದ್ದಾರೆ. ಆರೋಪಿಗಳನ್ನು ವಿದ್ಯುನ್ಮಾನ ಪರಿವೀಕ್ಷಣೆಯ ದಾಖಲೆಗಳ ಮೂಲಕ ಬಂಧಿಸಲಾಗಿದೆ.
ಕೊಲೆ ಮಾಡಿ ಮೃತದೇಹವನ್ನು ಕಾಲುವೆಗೆ ಎಸೆದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ತಪ್ಪೊಪ್ಪಿಗೆ ಹಾಗೂ ಅಪರಾಧ ಮಾಡಿದ ಸಂದರ್ಭದಲ್ಲಿ ದೊರೆತ ಪುರಾವೆಗಳ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ಮೂವರು ಆರೋಪಿಗಳು ಅಪರಾಧ ನಡೆಸುವ ವೇಳೆ ಮಾದಕ ದ್ರವ್ಯ ಸೇವಿಸಿದ್ದರು. ಆದಾಗ್ಯೂ ಇಲ್ಲಿಯವರೆಗೂ ಆರೋಪಿಗಳು ಯಾವುದೇ ರಾಜಕೀಯ ಗುಂಪು ಹಾಗೂ ಸಂಘಟನೆಗೆ ಸಂಬಂಧ ಹೊಂದಿಲ್ಲದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯು ಆಘಾತ ಹಾಗೂ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಅಪರಾಧವನ್ನು ನಿರ್ಧರಿಸಲು ಫೋರೆನ್ಸಿಕ್ ತಂಡ ಸಂತ್ರಸ್ತೆಯ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿತ್ತು.
ಈ ಸುದ್ದಿ ಓದಿದ್ದೀರಾ? ದಲಿತ ಯುವತಿಯ ಅಮಾನುಷ ಕೊಲೆ ಪ್ರಕರಣ: ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಸಂಸದ
ಸಂತ್ರಸ್ತೆಯು ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಕುಟುಂಬದವರು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದರು. ಮುಂದಿನ ದಿನ ಯುವತಿಯ ಮೃತದೇಹ ಗ್ರಾಮದ ಬಳಿಯ ಕಾಲುವೆಯಲ್ಲಿ ದೊರೆತಿತ್ತು. ನಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿತ್ತು.
ಮೃತದೇಹ ದೊರೆತಾಗ ಆಕೆಯ ಕಣ್ಣುಗಳನ್ನು ಕಿಳಲಾಗಿತ್ತು. ಆಕೆಯ ಕೈಗಳು ಮತ್ತು ಕಾಲುಗಳನ್ನು ಹಗ್ಗಗಳಿಂದ ಕಟ್ಟಿ ಹಾಕಲಾಗಿತ್ತು. ಆಕೆಯ ದೇಹದ ಮೇಲೆ ತೀವ್ರವಾದ ಗಾಯಗಳು ಕಂಡು ಬಂದಿದೆ, ಆಕೆಯ ಕಾಲು ಮುರಿದಿತ್ತು. ಸಂತ್ರಸ್ತೆಯನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು.
ಬೆತ್ತಲೆ ಮೃತದೇಹ ಪತ್ತೆ ಬೆನ್ನಲ್ಲೇ ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಮಾಧ್ಯಮದ ಮುಂದೆ ಗದ್ಗದಿತರಾಗಿ ಅತ್ತಿದ್ದರು. ತಾನು ದೆಹಲಿಗೆ ಹೋಗಿ ಪ್ರಧಾನಿ ಮೋದಿ ಬಳಿ ವಿಷಯವನ್ನು ಪ್ರಸ್ತಾಪಿಸುತ್ತೇನೆ. ನಮಗೆ ನ್ಯಾಯ ಸಿಗದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ. ಆ ಯುವತಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದರು.
ಘಟನೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
