ಸರ್ಕಾರ ಸಹಕಾರ ಸಂಘಗಳ ಮೂಲಕ ಸ್ವ-ಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದರೆ ಮೈಕ್ರೋ ಫೈನಾನ್ಸ್ ಹಾವಳಿ ತಡೆಯಬಹುದು ಎಂದು ರಾಜ್ಯ ಸಹಕಾರ ಭಾರತಿ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಸೀತೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದ ಬಡವರು ಸಾಲ ಮರುಪಾವತಿಸಲಾಗದೆ ಹಾಗೂ ಅವರ ದಬ್ಬಾಳಿಕೆ ಸಹಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಎಸ್ ಎಂ ಕೃಷ್ಣನವರು ಮುಖ್ಯಮಂತ್ರಿಯಾಗಿದ್ದಾಗ ಸ್ವ–ಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಶೇ.4ರ ಬಡ್ಡಿಯಲ್ಲಿ ಸಾಲ ನೀಡಿದ್ದರು. ಬಳಿಕ, ಯಡಿಯೂರಪ್ಪ ಸಿಎಂ ಆಗಿದ್ದಾಗ ಶೇ.6ರ ಬಡ್ಡಿಯಲ್ಲಿ ಸಾಲ ನೀಡಲಾಗಿತ್ತು. ನಂತರದ ದಿನಗಳಲ್ಲಿ ಸ್ವ–ಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವುದು ನಿಂತು ಹೋಗಿದೆ. ಇದನ್ನು ಉಪಯೋಗಿಸಿಕೊಂಡು ಮೈಕ್ರೊ ಫೈನಾನ್ಸ್ ಕಂಪನಿಗಳು ಬಡವರಿಗೆ, ಕಾರ್ಮಿಕರಿಗೆ ಅಧಿಕ ಬಡ್ಡಿಯಲ್ಲಿ ಸಾಲ ನೀಡುತ್ತಿವೆ. ಸಾಲ ನೀಡುವುದರಲ್ಲಿ ಪಾರದರ್ಶಕತೆ ಇಲ್ಲವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸೈಬರ್ ಸುರಕ್ಷತೆಗೆ ಪರಿಣಾಮಕಾರಿ ತಾಂತ್ರಿಕ ವ್ಯವಸ್ಥೆ ಬೇಕು : ಬಿ. ವಿ. ಅಶ್ವಿಜಾ
“ಸಹಕಾರ ಸಂಘಗಳಲ್ಲಿ ಸಾಲ ನೀಡುವಾಗ ಕೆಲವು ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತದೆ. ಆದ್ದರಿಂದ ಸರ್ಕಾರವು ಈ ಬಗ್ಗೆ ಚಿಂತನೆ ನಡೆಸಿ ಹಿಂದಿನ ರೀತಿಯಲ್ಲೇ ಸ್ವ–ಸಹಾಯ ಸಂಘ, ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಬಹುದಾಗಿದೆ” ಎಂದು ತಿಳಿಸಿದ್ದಾರೆ.
ಸೀತೂರು ವಿಎಸ್‌ಎಸ್‌ಎನ್ ಅಧ್ಯಕ್ಷ ಬೆಮ್ಮನೆ ಮೋಹನ್, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್ ವಿ ಸಂದೀಪ್ ಇದ್ದರು.