ಬಾಲಕಿಯರು, ಮಹಿಳೆಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿರುವ ಆರೋಪ ಎದುರಿಸುತ್ತಿರುವ ಮೆಡಿಕಲ್ ಶಾಪ್ ಮಾಲೀಕ ಅಮ್ಜದ್‌ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿ ನಡೆಸಿದ್ದ ದಾವಣಗೆರೆಯ ಚನ್ನಗಿರಿ ಬಂದ್ ಯಶಸ್ವಿಯಾಗಿದೆ.
ಮಹಿಳಾ ಸಂಘಟನೆಗಳು, ಹಿಂದೂ ಪರ ಸಂಘಟನೆಗಳು ಸೇರಿದಂತೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಜನರು ಸ್ವಯಂ ಪ್ರೇರಿತರಾಗಿ ಸಹಕರಿಸಿದರು. ಅತ್ಯಾಚಾರ ಆರೋಪಿ ಅಮ್ಜದ್ ಎಸಗಿರುವುದು ಹೀನ ಕೃತ್ಯವಾಗಿದ್ದು, ಮರಣದಂಡನೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದವು. ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಟೈರ್ ಹಚ್ಚಿ, ಆತನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
“ಚನ್ನಗಿರಿಯ ಮೆಡಿಕಲ್ ಶಾಪ್ ಮತ್ತು ಮನೆಯಲ್ಲಿ ಅಪ್ರಾಪ್ತ ಬಾಲಕಿಯರು, ಯುವತಿಯರು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಸುಮಾರು 60ಕ್ಕೂ ಹೆಚ್ಚು ವೀಡಿಯೋ ಚಿತ್ರೀಕರಿಸಿದ್ದ ಎನ್ನುವ ಮಾಹಿತಿ ಇದೆ. ಇವುಗಳಲ್ಲಿ ಕೆಲವು ವಿಡಿಯೋಗಳು ಸೋರಿಕೆಯಾಗಿದ್ದು, ಅಮಾಯಕ ಮಹಿಳೆಯರ, ಬಾಲಕಿಯರ ಗೌರವ, ಮರ್ಯಾದೆಗೆ ಧಕ್ಕೆಯಾಗಿದೆ. ಈ ಪ್ರಕರಣದಿಂದ ಚನ್ನಗಿರಿಯಲ್ಲಿ ಮಹಿಳೆಯರು ತಲೆಯೆತ್ತಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯಮಟ್ಟದಲ್ಲಿ ಚನ್ನಗಿರಿಗೆ ಕಳಂಕ ತಂದಿಟ್ಟಿದ್ದಾನೆ. ಆರೋಪಿ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಸೂಕ್ತ ತನಿಖೆ ನಡೆಸಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಉಗ್ರ ಶಿಕ್ಷೆ ಕೊಡಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ?: ಚನ್ನಗಿರಿ | ದೃಢೀಕರಣ ಪತ್ರ ನೀಡಲು ರೈತನಿಂದ ಲಂಚ: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಉಪತಹಶೀಲ್ದಾರ್
ಪ್ರತಿಭಟನೆಯಲ್ಲಿ ಔಷಧಿ ವ್ಯಾಪಾರಿಗಳ ಸಂಘ ಕೂಡ ಪಾಲ್ಗೊಂಡು ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿತು. ಪ್ರತಿಭಟನೆಗೆ ಚನ್ನಗಿರಿ ತಾಲೂಕು ವಕೀಲರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಈತನ ವಿರುದ್ಧ ದಾಖಲಾಗಿರುವ ಲೈಂಗಿಕ ಪ್ರಕರಣದಲ್ಲಿ ಚನ್ನಗಿರಿಯ ಯಾವುದೇ ವಕೀಲರು ವಕಾಲತ್ತು ವಹಿಸದಂತೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
