ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ದೇರಳಕಟ್ಟೆ ಸಮೀಪದ ಅಸೈ ಮದಕದಲ್ಲಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಕಳೆದ 29 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುಂದಿನ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿರುವ ಶಿಕ್ಷಕ ಮಂಜುನಾಥ್ ಭಟ್ರಿಗೆ ಅದ್ಧೂರಿಯ ಬೀಳ್ಕೊಡುಗೆ ಸಮಾರಂಭವು ಸಂಸ್ಥೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಫೆ.3ರಂದು ನಡೆಸಲಾಯಿತು.
ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪೂರ್ಣಿಮಾ, “ಒಂದೇ ಸಂಸ್ಥೆಯಲ್ಲಿ 29 ವರ್ಷ ಸರ್ಕಾರಿ ಕೆಲಸ ಮಾಡುವುದು ಎಂದರೆ ಅದೊಂದು ಸರಳ ವಿಷಯವಲ್ಲ. ಗಣಿತ ಶಿಕ್ಷಕರಾದ ಮಂಜುನಾಥ್ ಭಟ್ ಅದನ್ನು ಸಾಧಿಸಿ, ತೋರಿಸಿದ್ದಾರೆ. ಅವರ ನಿವೃತ್ತಿ ಜೀವನವು ಸಂತಸದಿಂದ ಕೂಡಿ” ಎಂದು ಹಾರೈಸಿದರು.
ಸಹ ಶಿಕ್ಷಕ ಮುಹಮ್ಮದ್ ಹನೀಫ್ ಮಾತನಾಡಿ, “ಕಳೆದ 29 ವರ್ಷಗಳಿಂದ ಮುಸ್ಲಿಮ್ ಮಕ್ಕಳ ನಡುವೆಯೇ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾರೆ. ಎಷ್ಟೇ ಸಾಂಪ್ರದಾಯಿಕ ವ್ಯತ್ಯಾಸಗಳಿದ್ದರೂ ಕೂಡ ಈವರೆಗೆ ಒಂದೇ ಒಂದು ಚಕಾರವೆತ್ತದೆ ಕಾರ್ಯ ನಿರ್ವಹಿಸುವ ಮೂಲಕ ಮಾದರಿ ಶಿಕ್ಷಕರಾಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ದೇವರು ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತಿ ಜೀವನದ ನಂತರ ಹಳ್ಳಿಗಾಡಿನಲ್ಲಿ ಕೃಷಿ ಮಾಡುವ ಬಯಕೆ ಹೊಂದಿದ್ದಾರೆ. ಅದು ಈಡೇರಲಿ” ಎಂದು ಆಶಿಸಿದರು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಮುಹಮ್ಮದ್ ಅನ್ವರ್ ಎ.ಎಸ್ ಮಾತನಾಡಿ, “ನಾವು ಎಷ್ಟೇ ದೊಡ್ಡ ಹುದ್ದೆಗೆ ಹೋದರೂ ಶಿಕ್ಷಕರನ್ನು ಮರೆಯುವಂತಿಲ್ಲ. ನಾನು ಇಂದು ವೈದ್ಯಕೀಯ ಕಾಲೇಜೊಂದರ ಪ್ರೊಫೆಸರ್ ಆಗುವುದಕ್ಕೆ ಮಂಜುನಾಥ್ ಭಟ್ ಅಂಥವರ ಶಿಕ್ಷಕರ ಪಾತ್ರವೂ ಇದೆ” ಎಂದು ವಸತಿ ಶಾಲೆಯ ದಿನಗಳನ್ನು ನೆನಪಿಸಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಗಣಿತ ಶಿಕ್ಷಕ ಮಂಜುನಾಥ್ ಭಟ್ ಮಾತನಾಡಿ, “ಇಷ್ಟೊಂದು ಅದ್ಧೂರಿಯ ಬೀಳ್ಕೊಡುಗೆ ಸಮಾರಂಭ ನನಗೆ ನಿರೀಕ್ಷಿಸಿರಲಿಲ್ಲ. ಎರಡು ಪೇಪರ್ನ ಮೇಲೆ ಅಂಟು(ಗಮ್) ಹಾಕಿ ಅಂಟಿಸಿದರೆ, ಆ ಅಂಟು ಕಾಣಿಸುವುದಿಲ್ಲ. ಆದರೆ, ಪೇಪರ್ ಬೇರೆ ಬೇರೆಯಾಗುವುದಿಲ್ಲ. ಅದೇ ರೀತಿ ನನ್ನ ಹಾಗೂ ವಿದ್ಯಾರ್ಥಿಗಳ ನಡುವಿನ ಸ್ನೇಹ. ಅದೊಂದು ರೀತಿಯಲ್ಲಿ ಅಂಟಿನಂತಿದೆ. ಈ ಸ್ನೇಹವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅದು ಗಟ್ಟಿ ಇರುವುದರಿಂದಲೇ ಇಷ್ಟೊಂದು ಅದ್ಧೂರಿಯ ಬೀಳ್ಕೊಡುಗೆ ಸಮಾರಂಭ ನನಗೆ ದೊರಕಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ಪ್ರಾಚಾರ್ಯರಾದ ಉಮರಬ್ಬ ವಹಿಸಿ ಮಾತನಾಡಿ, ನನ್ನ ಒಡನಾಡಿಯಾಗಿರುವ ಮಂಜುನಾಥ್ ಭಟ್ ಅವರು ಸಸ್ಯಾಹಾರಿ. ಆದರೂ ಕೂಡ ಮಾಂಸಾಹಾರ ಸೇವಿಸುವವರ ನಡುವೆ ಇಷ್ಟೊಂದು ವರ್ಷ ಸೇವೆ ಸಲ್ಲಿಸಿದ್ದರೂ ಕೂಡ ಈವರೆಗೆ ಯಾವುದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ತೋರಿಸಿದವರಲ್ಲ. ಏನೇ ಸಮಸ್ಯೆ ಬಂದರೂ ಕೂಡ ಬಹಳ ಚಾಕಚಕ್ಯತೆಯಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಅವರು ಮಾದರಿ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿವೃತ್ತಿ ಜೀವನವು ಸಂತಸದಿಂದ ಕೂಡಿರಲಿ. ಸಂಸ್ಥೆಗೆ ನಿವೃತ್ತಿಯ ನಂತರವೂ ಸದಾ ಭೇಟಿ ನೀಡಬೇಕು” ಎಂದು ಹೇಳಿ, ಶುಭ ಹಾರೈಸಿದರು.

ಕಲಾ ಶಿಕ್ಷಕರಾದ ಅಶೋಕ್, ಧಾರ್ಮಿಕ ಗುರುಗಳಾದ ಉಮರುಲ್ ಫಾರೂಕ್, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರಾದ ಮಹಾಬಲೇಶ್ವರ ನಾಯಕ್, ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಫಾರೂಕ್, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಮುಹಮ್ಮದ್ ಅಸೈ, ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಶಕೀಲ್ ತುಂಬೆ ಮಾತನಾಡಿ, ಶುಭ ಹಾರೈಸಿದರು. ಕಚೇರಿಯ ಸಹಾಯಕಿ ಉಷಾರವರು ಹಾಡಿನ ಮೂಲಕ ಶುಭ ಹಾರೈಸಿದರು. ಸಹ ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕಿ ಹಸೀನಾ ಅವರು ಧನ್ಯವಾದ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಈ ಬಾರಿಯ ಬಜೆಟ್ನಲ್ಲಿ ಹೆಚ್ಚು ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ: ಸಚಿವ ಝಮೀರ್ ಭರವಸೆ
ಸಮಾರಂಭದಲ್ಲಿ ಶಿಕ್ಷಕ ಮಂಜುನಾಥ್ ಭಟ್ರಿಗೆ ಹಳೆ ವಿದ್ಯಾರ್ಥಿಗಳ ಸಹಿತ ಹಲವು ಮಂದಿ ಹಳೆಯ ವಿದ್ಯಾರ್ಥಿಗಳು ಚಿನ್ನದುಂಗರ ಸೇರಿದಂತೆ ಹಲವು ಅಮೂಲ್ಯವಾದ ಕೊಡುಗೆಗಳನ್ನು ನೀಡುವ ಮೂಲಕ ಗೌರವಿಸಿದರು.
ಸಮಾರಂಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿದ ಶಿಕ್ಷಕ ಮಂಜುನಾಥ್ ಭಟ್ ಅವರ ಪತ್ನಿ ಸಹನಾ, ಮಕ್ಕಳಾದ ಶ್ರೀವತ್ಸ, ಸಿಂಧೂರ ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್ ಆರ್, ಸರ್ಕಾರಿ ವಸತಿ ಶಾಲೆಯ ಸಿಬ್ಬಂದಿಗಳಾದ ರಾಮಚಂದ್ರ, ಬಿ ಪಿ ಓಝ್ವಾಲ್ಡ್ ಕುವೆಲ್ಹೋ, ಮಣಿರಾಜ್, ಹಸನಬ್ಬ, ಆದಂ, ಅಬ್ದುಲ್ ಮಜೀದ್, ಮೈಮೂನಾ, ಅಬ್ದುಲ್ ಅಝೀಝ್, ಅಬೂಬಕ್ಕರ್ ತುಂಬೆ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









