ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮನನೊಂದ ರೈತ ಆತ್ಮಹತ್ಯೆ ನಡೆದಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಂಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಕೆ ಡಿ ರವಿ(50) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಇವರು ವಿವಿಧ ಸಂಘ ಸೇರಿದಂತೆ ಮೈಕ್ರೋ ಫೈನಾನ್ಸ್‌ನಲ್ಲಿ ಒಟ್ಟು ₹9 ಲಕ್ಷ ಸಾಲ ಮಾಡಿಕೊಂಡಿದ್ದರೆಂದು ತಿದುಬಂದಿದೆ. ಸಾಲ ಮಾರುಪಾವತಿಗೆ ಸಂಘ ಸಂಸ್ಥೆಗಳು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಒತ್ತಡ ಹಾಗೂ ಕಿರುಕುಳ ಹೆಚ್ಚಿದ ಕಾರಣ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೊಣನೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ರೈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಇಟ್ಟಿದ್ದು, ಕುಟುಂಬಸ್ಥರು ಹಾಗೂ ಬಂಧು ಬಾಂಧವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪತ್ನಿ ಇದ್ದಾರೆ. ಕ್ಷೇತ್ರದ ಶಾಸಕ ಎ ಮಂಜು ಅವರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
“ರಾಜ್ಯ ಸರ್ಕಾರ ಮೈಕ್ರೋ ಫೈನಾಸ್ಸ್ ಹಾವಳಿ ಮತ್ತು ಕಿರುಕುಳ ನಿಯಂತ್ರಿಸಲು ಕಾನೂನು ಅನುಷ್ಠಾನಕ್ಕೆ ಮುಂದಾಗಿದ್ದು, ಯಾರೂ ಕೂಡ ಆತುರದ ನಿರ್ಧಾರದಿಂದ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ಮುಂದಾಗಬಾರದು” ಎಂದು ಶಾಸಕ ಎ ಮಂಜು ವಿನಂತಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ವಿಸಿ ನಾಲೆಗೆ ಉರುಳಿದ ಕಾರು; ಮೂವರ ಸಾವು
ಘಟನೆ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
