ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಮೀಪದಲ್ಲಿರುವ ಕೋಣೆಬೈಲು ಗ್ರಾಮದಲ್ಲಿ ಸುಮಾರು ನೂರಾರು ವರ್ಷದಿಂದ ಬದುಕು ಕಟ್ಟಿಕೊಂಡು ಜನರು ಬದುಕುತ್ತಿದ್ದಾರೆ. ಕೋಣೆಬೈಲು ಗ್ರಾಮದಲ್ಲಿ 55-60ಕ್ಕೂ ಅಧಿಕ ಕುಟುಂಬದವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಈವರೆಗೆ ಸರಿಯಾದ ಮೂಲಸೌಕರ್ಯಗಳು ಸಿಗದೆ ವಂಚಿತರಾಗಿದ್ದಾರೆ.

ಕುಡಿಯುವ ನೀರು, ದಾರಿ ದೀಪಗಳು, ಓಡಾಡಲು ಸೂಕ್ತವಾದ ರಸ್ತೆ ಸೇರಿದಂತೆ ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲ. ಇಷ್ಟು ವರ್ಷದಿಂದ ವಾಸ ಮಾಡಿದರೂ ಹಕ್ಕುಪತ್ರವಿಲ್ಲದೆ ಪರದಾಡುತ್ತಿರುವುದು ಅಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು ವರ್ಷದಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗದಿರುವ ಹಿನ್ನೆಲೆಯಲ್ಲಿ ಜನವರಿ 17ರಂದು ಈ ದಿನ.ಕಾಮ್ ತಂಡ ಕಳಸ ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒ ಕವಿಶ್ ಹಾಗೂ ತಹಶೀಲ್ದಾರ್ ಶಾರದ ಅವರನ್ನು ಭೇಟಿ ಮಾಡಿ ಕೋಣೆಬೈಲು ಗ್ರಾಮದ ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಗಿತ್ತು.

ಮುಖ್ಯವಾಗಿರುವ ಮೂಲಸೌಕರ್ಯ ಹಾಗೂ ರಸ್ತೆ ಸಂಬಂಧಿಸಿದಂತೆ ಜನವರಿ 19ರಂದು ಈ ದಿನ.ಕಾಮ್ ವರದಿ ಪ್ರಕಟಿಸಿತ್ತು. ಸುದ್ದಿ ಪ್ರಕಟಿಸಿದ ನಂತರ ಅಧಿಕಾರಿಗಳು ಗಮನವಹಿಸಿ ಜನವರಿ 21ರಂದು ಕಳಸ ಗ್ರಾಮ ಪಂಚಾಯಿತಿಯ ಪಿಡಿಒ ಭೇಟಿ ನೀಡಿ ಬೀದಿ ದೀಪಗಳನ್ನು ಅಳವಡಿಸಿದ್ದಾರೆ. ಹಾಗೆಯೇ, ಆ ದಿನವೇ ತಾಲೂಕಿನ ತಹಶೀಲ್ದಾರ್ ಶಾರದ ಅವರು ಕೋಣೆಬೈಲು ಗ್ರಾಮಕ್ಕೆ ಭೇಟಿನೀಡಿ ಅಲ್ಲಿನ ಸಮಸ್ಯೆ ಕುರಿತು ಸಾರ್ವಜನಿಕರನ್ನು ಮಾತನಾಡಿಸಿ, ಗ್ರಾಮದ ಕುಂದುಕೊರತೆ ಬಗ್ಗೆ ವಿಚಾರಿಸಿದ್ದಾರೆ. ಆ ಗ್ರಾಮದ ಜನರು ತಿರುಗಾಡದಂತೆ ರಸ್ತೆಗೆ ನಿರ್ಬಂಧ ಹಾಕಿದ್ದ ಮಾಲೀಕನನ್ನು ವಿಚಾರಿಸಿ ತಿಳಿಹೇಳಿ, ನಿರ್ಬಂಧ ಹಾಕಿರುವ ಜಾಗವನ್ನು ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ದಿನ.ಕಾಮ್ ಸುದ್ದಿ ಮಾಡಿ ಒಂದು ವಾರದ ನಂತರ ಕೋಣೆಬೈಲು ಗ್ರಾಮಕ್ಕೆ ಕೊಪ್ಪ ತಾಲೂಕಿನ ಡಿವೈಎಸ್‌ಪಿ ಬಾಲಾಜಿ ಸಿಂಗ್ ಭೇಟಿ ಮಾಡಿ ಸಾರ್ವಜನಿಕರಲ್ಲಿ ಗ್ರಾಮದ ಸಮಸ್ಯೆ ಕುರಿತು ಮಾತನಾಡಿದ್ದು, ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಡಿವೈಎಸ್‌ಪಿ ಭೇಟಿ ನೀಡಿದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅವರು ಕೋಣೆಬೈಲು ಗ್ರಾಮಕ್ಕೆ ಭೇಟಿ ಮಾಡಿ “ತಹಶೀಲ್ದಾರ್ ಅವರು ಸರ್ವೇ ಮಾಡಲು ಕೊಟ್ಟಿದ್ದಾರೆ. ಸರ್ವೇಯಲ್ಲಿ ನಕಾಶೆ ರಸ್ತೆ ಹಾಗೂ ರಸ್ತೆ ಎಲ್ಲಿ ಕಂಡುಬರುತ್ತದೆಂದು ತಿಳಿದ ಕೂಡಲೇ, ನಾವು ಆ ರಸ್ತೆಯನ್ನು ಬಿಡಿಸಿಕೊಡುತ್ತೇವೆ” ಎಂದು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದ್ದಾರೆ.

ಎಸ್‌ಸಿ/ಎಸ್‌ಟಿ ದಲಿತ ದೌರ್ಜನ್ಯ ನಿಯಂತ್ರಣ ಸಮಿತಿಯಿಂದ ಈ ದಿನ.ಕಾಮ್ ಸುದ್ದಿ ಪ್ರಕಟ ಮಾಡಿರುವುದನ್ನು ಗಮನಿಸಿ ಅನಿಲ್ ಕುಮಾರ್ ಅವರು ಹಾಗೂ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗ ದಂಡಾಧಿಕಾರಿ ರಶ್ಮಿಯವರು ಕಳಸ ತಾಲೂಕಿನ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದು ಫೋನ್ ಮೂಲಕ ಮಾತನಾಡಿಸಿದ್ದಾರೆ” ಎಂದು ಕೋಣೆಬೈಲು ಗ್ರಾಮಸ್ಥರು ಈ ದಿನ.ಕಾಮ್‌ಗೆ ಮಾಹಿತಿ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ʼಸೂಸಲವಾನಿʼ ಗ್ರಾಮದ ರಸ್ತೆಗಿಲ್ಲ ಡಾಂಬರು ಭಾಗ್ಯ; ಗ್ರಾಮಸ್ಥರ ಅಳಲು ಕೇಳೋರೆ ಇಲ್ಲ
ಈ ದಿನ.ಕಾಮ್ ವರದಿ ಮಾಡಿದ್ದರಿಂದ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಆಲಿಸಿದ್ದಾರೆಂದು ಕೋಣೆಬೈಲು ಗ್ರಾಮಸ್ಥರು ಈ ದಿನ.ಕಾಮ್‌ಗೆ ಕೃತಜ್ಞತೆ ವ್ಯಕ್ತಪಡಿಸಿದ್ದು, ರಸ್ತೆ ಸಮಸ್ಯೆ ಆದಷ್ಟು ಬೇಗ ಬಗೆಹರಿದರೆ ಸಾಕು ಎಂದು ಕಾಯುತ್ತಿದ್ದಾರೆ.