ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಇಂದಿರಾ ಕ್ಯಾಂಟಿನ್ ಕಾಮಗಾರಿ ಕುಂಟುತ್ತ ಸಾಗಿದ್ದು, ಅಂತೂ ಪೂರ್ಣಗೊಂಡಿತು. ಇದೀಗ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ಕೂಡಾ ಈವರೆಗೆ ಉದ್ಘಾಟನೆ ಭಾಗ್ಯ ಕಾರಣದಿರುವುದು, ಕುಡುಕರ ಅಡ್ಡವಾಗಿ ಮಾರ್ಪಟ್ಟಿದೆ.
ಕ್ಯಾಂಟಿನ್ ಅಡುಗೆ ಕೊಠಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಗತ್ಯ ಉಪಕರಣಗಳನ್ನು ಅಳವಡಿಸಿ 2 ವರ್ಷಗಳು ಕಳೆದಿದೆ. ಬಳಕೆ ಮಾಡದ್ದರಿಂದ ಉಪಕರಣಗಳು ಧೂಳಿನಿಂದ ಆವೃತವಾಗಿವೆ. ಅಲ್ಲದೆ ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗಬಹುದು. ಸಾರ್ವಜನಿಕರಿಗೆ ಅನುಕೂಲವಾಗಲೆಂದು ಜನಸಾಮಾನ್ಯರ ಟ್ಯಾಕ್ಸ್ ಹಣದಿಂದ ಸರ್ಕಾರ ಯೋಜನೆಗಳನ್ನು ನೀಡುತ್ತದೆ. ಆದರೆ ಸಂಬಂಧಪಟ್ಟವರು, ಗುತ್ತಿಗೆದಾರರು ನಿಗಾ ವಹಿಸದ ಕಾರಣ ಎಲ್ಲವೂ ವ್ಯರ್ಥವಾಗುವ ಹಂತಕ್ಕೆ ತಲುಪಿವೆ.
“ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಹಾರ ದೊರೆಯಲೆಂದು ಇಂದಿರಾ ಕ್ಯಾಂಟಿನ್ ಆರಂಭಿಸುವ ಯೋಜನೆ ಘೋಷಿಸಿತು. ಆದರೆ ಸುಸಜ್ಜಿತ ಕಟ್ಟದವಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಯಾವಾಗ ಕಾರ್ಯಾರಂಭವಾಗುವುದೋ, ಜನಸಾಮಾನ್ಯರಿಗೆ ಊಟ ತಿಂಡಿ ಸಿಗುವುದೋ ಕಾದು ನೋಡಬೇಕಿದೆ” ಎಂದು ಸಾರ್ವಜನಿಕರು ಕಾತರಿಸುತ್ತಿದ್ದಾರೆ.

ಪಟ್ಟಣದ ಸಮಾಜಸೇವಕ ಸಾದೀಕ್ ಬೇಗ್ ಮತಮಾಡಿ, “ಪುರಸಭೆ ಮತ್ತು ಕ್ಷೇತ್ರದ ಕಾಂಗ್ರೆಸ್ ಶಾಸಕರು ಆದಷ್ಟು ಬೇಗ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲು ಇಚ್ಚಾಶಕ್ತಿ ತೋರಿಸಬೇಕು. ಇದರಿಂದ ನಿತ್ಯ ಪಟ್ಟಣಕ್ಕೆ ಬರುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಭಾಗದ ಬಡ ಕೂಲಿಕಾರ್ಮಿಕರಿಗೆ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ ದೊರೆಯುವುದು. ಆಸ್ಪತ್ರೆ ಮುಂಭಾಗ ಇಂದಿರಾ ಕ್ಯಾಂಟಿನ್‌ನ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದೆ. ಆದಷ್ಟು ಬೇಗ ನಿರ್ವಹಣೆಯಾದರೆ ಬಡ ಜನರಿಗೆ ಅನುಕೂಲವಾಗುತ್ತದೆ” ಎಂದರು.
ಕೂಲಿಕಾರರ ಸಂಘದ ಮುಖಂಡ ಖಾಜಾ ಸಾಬ್ ಮಾತನಾಡಿ, “ಇಂದಿರಾ ಕ್ಯಾಂಟಿನ್ ನಿರ್ಮಾಣವಾಗಬೇಕೆಮದು ಆಗ್ರಹಿಸಿದ್ದೆವು. ಆ ಬೇಡಿಕೆ ಈಡೇರಿದೆ. ಈಗ ಉದ್ಘಾಟನೆಗೂ ಕೂಡ ಆಗ್ರಹ ಮಾಡುವಂತಾಗಿದೆ. ಸುಮಾರು 2 ವರ್ಷಗಳಿಂದ ಇಂದಿರಾ ಕ್ಯಾಂಟಿನ್ ಕೆಲಸ ನಿಂತುಹೋಗಿದೆ. ಅದರ ಬಗ್ಗೆ ಯಾರೂ ಕೇಳುವವರಿಲ್ಲ, ಗಮನಿಸುವವರಿಲ್ಲ. ಸಾವಿರಾರು ಹಣ ಖರ್ಚು ಮಾಡಿ ಸುಂದರವಾದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯವೇ ಕಾಣುವಂತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ” ಎಂದು ಹೇಳಿದರು.

ಮಾಜಿ ಕಾಂಗ್ರೆಸ್ ಶಾಸಕ ಡಿ ಎಸ್ ಹುಲಗೇರಿ ಮಾತನಾಡಿ, “ಟೆಂಡರ್ ಕರೆದು ಮತ್ತೆ ಬಾಕಿ ಕೆಲಸ ಮಾಡಲಾಗುವುದು. ಸರ್ಕಾರ ಗುತ್ತಿಗೆ ನಿರ್ಣಯ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಅವರ ಜತೆಗೆ ಮಾತನಾಡಿ, ಆದಷ್ಟು ಬೇಗ ಪ್ರಾರಂಭಿಸುವೆ. ಜನರಿಗೆ ಅನುಕೂಲವಾಗುವಂತೆ ಮಾಡಲು ಪ್ರಯತ್ನಿಸುವೆ” ಎಂದು ಹೇಳಿದರು.


ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್