“ಗೋ ಕಳ್ಳತನ ಮಾಡಿದವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸುತ್ತೇವೆ” ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳ್ ಎಸ್ ವೈದ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರವಾರದಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ವೇಳೆ ಮಾತನಾಡಿದ ಅವರು, “ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗೋವು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. ಇತ್ತೀಚೆಗೆ ಹೊನ್ನಾವರದಲ್ಲಿ ಗರ್ಭಿಣಿ ಹಸುವನ್ನು ಕೊಂದ ಘಟನೆ ನಡೆದಿದೆ. ಗೋಕಳ್ಳತನ ಮಾಡುವವರ ಮೇಲೆ ಸ್ಥಳದಲ್ಲೇ ಶೂಟೌಟ್ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದು, ಸದ್ಯ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಗೋ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಅದನ್ನು ತಡೆಯಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ನಾವು ಹಸುವನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತೇವೆ. ನಾವು ಅವುಗಳನ್ನು ಬಹಳ ಪ್ರೀತಿಯಿಂದ ಕಾಣುತ್ತೇವೆ. ಅಂತಹ ಹಸುವಿನ ಮೇಲೆ ದೌರ್ಜನ್ಯ ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ. ಅವರು ಯಾರೇ ಆಗಲಿ ಕ್ರಮ ಕೈಗೊಳ್ಳಲಿ. ಇನ್ನೂ ಹೆಚ್ಚಾಗಿ ಹೇಳಬೇಕು ಅಂದ್ರೆ ಗೋ ಕಳ್ಳರ ವಿರುದ್ಧ ಅಥವಾ ಗೋವಿನ ಮೇಲೆ ದೌರ್ಜನ್ಯ ನಡೆಸುವವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ ಎಂದು ಬಹಿರಂಗವಾಗಿಯೇ ಸರ್ಕಾರಿ ಸಭೆಯಲ್ಲೇ ಹೇಳಿಕೆ ನೀಡಿದ್ದಾರೆ.
“ಗೋ ಕಳ್ಳತನ ಮಾಡಿದವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸುತ್ತೇವೆ” ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳ್ ಎಸ್ ವೈದ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
— eedina.com ಈ ದಿನ.ಕಾಮ್ (@eedinanews) February 4, 2025
ಸರ್ಕಾರಿ ಸಭೆಯಲ್ಲೇ ಹೇಳಿಕೆ ನೀಡಿ ವಿವಾದಕ್ಕೆ ನಾಂದಿ ಹಾಡಿದ ಮೀನುಗಾರಿಕಾ ಸಚಿವ pic.twitter.com/RfzBNVNe4t
ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಗೋ ಕಳ್ಳತನ ನಡೆದಿತ್ತು. ಈಗ, ಕುಮಟಾ ಶಾಸಕ ದಿನಕರ ಶೆಟ್ಟಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಯಾವುದೇ ಕ್ರಮ ಇರಲಿಲ್ಲ. ಆದರೆ, ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ವೈದ್ಯ ಹೇಳಿದರು.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ನಮ್ಮ ಪಕ್ಷದ ಶಾಸಕರಂತೆ. ಅವರು ಜಿಲ್ಲೆಯ ಅಭಿವೃದ್ಧಿಗೆ ಬೆಂಬಲ ನೀಡುವ ಕೆಲಸ ಮಾಡುತ್ತಿದ್ದಾರೆ. ಕುಮಟಾದಲ್ಲಿ ಮಾತ್ರ ಬಿಜೆಪಿ ಶಾಸಕರು ಇದ್ದಾರೆ. ಅಲ್ಲಿ, ನಮ್ಮ ಪಕ್ಷದ ಕಾರ್ಯಕರ್ತರ ಸಹಾಯದಿಂದ ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಅನಧಿಕೃತವಾಗಿ ಗೋವುಗಳನ್ನು ಸಾಗಿಸಿದವರ ವಿರುದ್ಧ 138 ಪ್ರಕರಣಗಳನ್ನು ದಾಖಲಿಸಲಾಗಿದ್ದು, 866 ಹಸುಗಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಒಟ್ಟು 23 ಹಸು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, 34 ಹಸುಗಳನ್ನು ಪತ್ತೆ ಮಾಡಲಾಗಿದ್ದು, ಅನಧಿಕೃತ ಗೋವು ಸಾಗಾಟ ಮತ್ತು ಗೋವು ಕಳ್ಳತನ ಪ್ರಕರಣಗಳಲ್ಲಿ 467 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
