- ಬಿಜೆಪಿ ಸರ್ಕಾರದ ಭೂ ಅಕ್ರಮ ಬಂಡವಾಳ ತೆರೆದಿಟ್ಟ ಸಚಿವ ಗುಂಡೂರಾವ್
- ಸಿಎಂ ಹಾಗೂ ಕಂದಾಯ ಸಚಿವರು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುತ್ತಾರೆ
ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಯ ಸಲುವಾಗಿ ಹಿಂದಿದ್ದ ಬಿಜೆಪಿ ಸರ್ಕಾರ ಕಾನೂನು ಉಲ್ಲಂಘಿಸಿ ಆರ್‌ಎಸ್‌ಎಸ್ ಸಂಸ್ಥೆಗೆ ಅಕ್ರಮ ಭೂ ಹಂಚಿಕೆ ಮಾಡಿರುವುದು ನಿಜ. ಈ ಸಂಬಂಧ ದಾಖಲೆಗಳು ಲಭ್ಯವಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಈ ಅಕ್ರಮ ಪರಭಾರೆ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಚರ್ಚಿಸಿ ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ, ತಮ್ಮ ಅಧಿಕಾರದಲ್ಲಿ ದ್ವೇಷವನ್ನ ಬಿತ್ತುವ ಕೆಲಸ ಮಾಡುತ್ತಿದ್ದರು, ಪಠ್ಯಗಳಲ್ಲಿ ಬದಲಾವಣೆ ಮಾಡಿದ್ದೂ ಕೂಡ ಇದೇ ಕಾರಣಕ್ಕೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಕ್ರಮಗಳಾಗಿದ್ದವು. ಹೀಗಾಗಿ ಈಗಾಗಲೇ ಕೆಲ ಟೆಂಡರ್ ಗಳನ್ನ ರದ್ದುಪಡಿಸಿದ್ದೇವೆ, ಇದರಲ್ಲಿ ಜಿಕೆವಿಕೆ ಸಂಸ್ಥೆಗೆ ನೀಡಿದ್ದ 108 ಗುತ್ತಿಗೆಯನ್ನ ರದ್ದುಪಡಿಸಿದ್ದೇವೆ ಎಂದು ಅವರು ತಿಳಿಸಿದರು.
ಇದಿಷ್ಟೇ ಅಲ್ಲದೆ, ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ, ಹಾಗಾಗಿ ಡಯಾಲಿಸಿಸ್ ಟೆಂಡರ್ ಅನ್ನೂ ರದ್ದುಪಡಿಸಲಾಗಿದೆ, ಈಗ ಜರೂರಾಗಿರುವ ಕೆಲಸಗಳನ್ನ ಮಾಡುತ್ತಿದ್ದೇವೆ, ಇಲಾಖೆಯ ಕಾರ್ಯನಿರ್ವಹಣೆ ಬದಲಾವಣೆ ಕೆಲಸ ನಡೆಯುತ್ತಿದೆ, ಅಧಿಕಾರಿಗಳು, ವೈದ್ಯರ ಕಾರ್ಯನಿರ್ವಹಣೆ ಸರಿಪಡಿಸಬೇಕಿದೆ, ಪಾಲಿಸಿ ವಿಚಾರಗಳನ್ನ ಬದಲಾಯಿಸಬೇಕಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಈ ಸುದ್ದಿ ಓದಿದ್ದೀರಾ? : ಸಾರ್ವಜನಿಕರು ಬೆಂಗಳೂರುವರೆಗೆ ಬರುವುದು ತಪ್ಪಿಸಲು ನಾನೇ ಜನರ ಬಳಿ ಹೋಗುವೆ: ಸಚಿವ ಜಮೀರ್ ಅಹ್ಮದ್
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದ ಮರುತನಿಖೆ
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದ ಮರುತನಿಖೆ ನಡೆಸಲು ಸರ್ಕಾರಕ್ಕೆ ತಿಳಿಸಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಮನ್ವಯ ಇರುವುದರಿಂದ ಈ ಬಗ್ಗೆ ತನಿಖೆ ಮಾಡಬೇಕಿದೆ. ಈ ಹಿಂದಿನ ಸರ್ಕಾರ ಆದೇಶಿಸಿದ್ದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ನಮ್ಮ ಸರ್ಕಾರ ಮರು ತನಿಖೆಗೆ ನಿರ್ಧಾರ ಮಾಡಿದೆ, ಇದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ಹೇಳಿದರು