“ಗೋ ಕಳ್ಳತನ ಮಾಡುವವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸುತ್ತೇವೆ” ಎಂದು ಮೀನುಗಾರಿಕಾ ಸಚಿವ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂಕಾಳ್ ಎಸ್ ವೈದ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.
ಕಾರವಾರದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗೋವು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. ಅದನ್ನು ತಡೆಯಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಹಸುವಿನ ಮೇಲೆ ದೌರ್ಜನ್ಯ ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ. ಅವರು ಯಾರೇ ಆಗಲಿ ಕ್ರಮ ಕೈಗೊಳ್ಳಲಿ. ಇನ್ನೂ ಹೆಚ್ಚಾಗಿ ಹೇಳಬೇಕು ಅಂದ್ರೆ ಗೋ ಕಳ್ಳರ ವಿರುದ್ಧ ಅಥವಾ ಗೋವಿನ ಮೇಲೆ ದೌರ್ಜನ್ಯ ನಡೆಸುವವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ” ಎಂದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮುವಾದಿ ಹೇಳಿಕೆ ನೀಡಿದ್ದಾರೆ.
ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಂಕಾಳು ವೈದ್ಯ ಅವರ ಹೇಳಿಕೆ ಖಂಡಿಸಿ ಪೋಸ್ಟ್ ಹಾಕಿರುವ ಬಸವರಾಜು ಸೂಳಿಬಾವಿ ಅವರು, “ಸಮಾಜವಾದಿಗಳಾದ ಸಿದ್ಧರಾಮಯ್ಯನವರೆ ಇವರು ನಿಮ್ಮ ಸರ್ಕಾರದ ಮಂತ್ರಿನಾ? ಈಗಿರುವ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಸರ್ಕಾರ ಎಂದು ಭಾವಿಸಿದ್ದರಾ ಇವರು? ಸಂವಿಧಾನ/ ಸರ್ಕಾರದ/ ಆಡಳಿತದ ಭಾಷೆ ಗೊತ್ತಿಲ್ಲದ ಮೂರ್ಖತನವಿರುವ ವ್ಯಕ್ತಿಯನ್ನು ಹೇಗೆ ಮಂತ್ರಿ ಮಾಡಿದಿರಿ? ದನಗಳ್ಳತನವಾದರೆ ಬಂಧಿಸುವ, ಶಿಕ್ಷೆ ವಿಧಿಸುವಂಥ ಅದಕ್ಕೊಂದು ವ್ಯವಸ್ಥೆ ಇದೆ ಎಂದೂ ಅರ್ಥವಾಗದಿರುವ ಈ ಮಂತ್ರಿ ಯಾವ ಸೀಮೆಯ ಸರ್ವಾಧಿಕಾರಿಗಿಂತ ಕಡಿಮೆ ಇದ್ದಾರೆ? ಸರ್ಕಾರದ ಗೌರವ ಕೊಂಚವಾದರೂ ಉಳಿಸಿಕೊಳ್ಳಬೇಕೆಂದರೆ ಈ ಮಂತ್ರಿಯನ್ನು ತಕ್ಷಣ ವಜಾ ಮಾಡಿ. ಮಾಡ್ತೀರಾ? ಇಂಥ ಸರ್ವಾಧಿಕಾರಿಯನ್ನು ಉಳಿಸಿಕೊಂಡು ಮುಂದುವರಿಯುತ್ತೀರಾ? ಸರ್ಕಾರದ ಬಿಡೆಗೆ ಬಿದ್ದವರೂ ದನಿ ಎತ್ತಬಹುದೆ ಈ ಕುರಿತು? ಎಚ್ಚರಾಗಿ ಎದ್ದೇಳಬಹುದೆ?” ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಬಜಿಲಕೇರಿ ಅವರು, “ಕದ್ದು ಗೋವುಗಳನ್ನು ಕೊಂಡು ಹೋಗುವವರನ್ನು ಎನ್ಕೌಂಟರ್ ಮಾಡಲೇಬೇಕು…. ಕದ್ದ ಮಾಂಸ ತಿಂದರು ಆರಾಮ್ ಎಂದು ಮುಸ್ಲಿಮರಲ್ಲಿದೆ, (ಗೋಗಳನ್ನ ಕದಿಯುವವರ ಜೊತೆಯಲ್ಲಿ ಕೆಲವೊಂದು ಹಿಂದೂಗಳು ಕೂಡ ಸೇರಿಕೊಂಡಿದ್ದಾರೆ ಅವರನ್ನು ಎನ್ಕೌಂಟರ್ ಮಾಡಬೇಕು) ಯಾರಾದರೂ ರೈತರು ಮಾರಿದರೆ (14 ವರ್ಷದ ನಂತರದ ಗೋವು) ಅದನ್ನು ಕೊಂಡೋಗಿ ತಿನ್ನಬಹುದೆಂದು ಬಿಜೆಪಿ ಹೇಳಿದೆ” ಎಂದಿದ್ದಾರೆ.