ಇಂದಿನ ಯುವ ಸಮೂಹವು ಓದುವ ಹವ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರತಿಯೊಂದು ವಿಚಾರದಲ್ಲೂ ಆಳವಾದ ಅಧ್ಯಯನ ಕೈಗೊಳ್ಳಬೇಕು ಎಂದು ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ ಎನ್ ಲಕ್ಷ್ಮಿ ಅವರ ಅಭಿನಂದನಾ ಸಮಾರಂಭ, ‘ಅರಿವಿನ ಸಿರಿ’ ಅಭಿನಂದನಾ ಗ್ರಂಥ ಹಾಗೂ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಾಮಾಜಿಕ ಜಾಲತಾಣದ ಮೂಲಕ ಪರಿಪೂರ್ಣವಾದ ಸಮಾಜ ನಿರ್ಮಿಸಲು ಸಾಧ್ಯವಿಲ್ಲ. ಓದುವ ಹವ್ಯಾಸದಿಂದ ಮಾತ್ರ ಭೌದ್ಧಿಕವಾಗಿ ಬಲಾಢ್ಯರಾಗಲು ಸಾಧ್ಯ. ದೇಶದಲ್ಲಿರುವ ಅವೈಜ್ಞಾನಿಕತೆಯನ್ನು ತೊಲಗಿಸಲು ಶಿಕ್ಷಣ ಬಹಳ ಮುಖ್ಯ. ವೈಜ್ಞಾನಿಕತೆ ಹಾಗೂ ವೈಚಾರಿಕತೆಯಿಂದ ಕೂಡಿದ ಶಿಕ್ಷಣವು ಮೂಢನಂಬಿಕೆ, ಅನಾಗರಿಕತೆ ಹಾಗೂ ಶೋಷಣೆಯನ್ನು ತೊಡೆದು ಹಾಕುತ್ತದೆ” ಎಂದರು.

“ಮಹಿಳೆಯರ ಸಮಾನತೆಗಾಗಿ ಬಾಬಾ ಸಾಹೇಬರು ಜಾರಿಗೆ ತಂದ ಹಿಂದೂ ಕೋಡ್ ಬಿಲ್ ಕುರಿತು ಯಾವುದೇ ಕಾರ್ಯಾಗಾರದಲ್ಲಿ ಚರ್ಚೆಗಳು ನಡೆಯುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕಾದ ಮಹಿಳೆಯರು ಮೌಢ್ಯ, ಕಂದಾಚಾರಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಹೆಣ್ಣುಮಕ್ಕಳು ವಿದ್ಯಾವಂತರಾಗಿದ್ದರೂ ಕೂಡ ಹೆಚ್ಚು ಮೌಢ್ಯದ ಕಡೆ ವಾಲುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದದ್ದೀರಾ?:ಮೈಸೂರು | ಕ್ರಿಯೇಟಿವ್ ಎಕಾನಮಿಯೇ ಭಾರತದ ಭವಿಷ್ಯ: ಕೇಂದ್ರ ಸಚಿವ ಮುರುಗನ್
ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ, ಕೆಎಸ್‌ಒಯು ಕುಲಪತಿ ಶರಣಪ್ಪ ವಿ ಹಲಸೆ, ವಿಶ್ರಾಂತ ಕುಲಪತಿ ಪ್ರೊ ಕೆ ಎಸ್ ರಂಗಪ್ಪ, ರಾಮೇಗೌಡ, ಪ್ರೊ ನಾಗಣ್ಣ, ಬಂಜಗೆರೆ ಜಯಪ್ರಕಾಶ್, ಚಿಂತಕ ಪ್ರೊ ಭಗವಾನ್, ಚಂದ್ರಶೇಖರ್, ಕುಲಸಚಿವ ಪ್ರವೀಣ್ ಮೊದಲಾದವರು ಇದ್ದರು.
