ಮೈಕ್ರೋಫೈನಾನ್ಸ್ ಕಿರುಕುಳ ಮತ್ತು ಬ್ಯಾಂಕ್‌ಗಳ ಸಾಲಬಾಧೆಯಿಂದ ರಾಜ್ಯದಲ್ಲಿ ಒಂದೇ ದಿನ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2, ಹಾಸನ ಮತ್ತು ದಾವಣಗೆರೆಯಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಜಿಗನಹಳ್ಳಿ ನಿವಾಸಿ ಗಿರೀಶ್ ಅವರು ಮೈಕ್ರೋಫೈನಾನ್ಸ್‌ನಿಂದ ಸಾಲ ಪಡೆದು, ಕೃಷಿ ಕೆಲಸಗಳಿಗಾಗಿ ಟ್ರ್ಯಾಕ್ಟರ್ ಖರೀದಿದ್ದರು. ಆದರೆ, ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಲಾಗದ ಕಾರಣಕ್ಕೆ, ಸಾಲ ನೀಡಿದ್ದವರು, ಅವರ ಟ್ರ್ಯಾಕ್ಟರ್‌ಅನ್ನು ಕಿತ್ತುಕೊಂಡಿದ್ದಾರೆ. ಇದರಿಂದ ಮನನೊಂದ ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನರಸಿಂಹಯ್ಯ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆ ಬಿತ್ತನೆಗಾಗಿ ಅವರು ಸಾಲ ಮಾಡಿದ್ದರು. ಆದರೆ, ಬೆಳೆ ನಷ್ಟವಾಗಿ, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಂತೆನಹಳ್ಳಿ ನಿವಾಸಿ ರವಿ ಎಂಬವರು ತಮ್ಮ ಜಮೀನಿನಲ್ಲಿ ಶುಂಠಿ ಕೃಷಿ ಮಾಡಲು ಮೈಕ್ರೋಫೈನಾನ್ಸ್ ಬಳಿ 9 ಲಕ್ಷ ರೂ. ಸಾಲ ಮಾಡಿದ್ದರು. ಆದರೆ, ಉತ್ತಮ ಇಳುವರಿಯೂ ಬಾರದೆ, ಸರಿಯಾದ ಬೆಲೆಯೂ ಸಿಗದೆ, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೀತೂರು ಗ್ರಾಮದ ಎಲ್.ಕೆ ಸುರೇಶ್ ಅವರು ಬ್ಯಾಂಕ್‌ನಲ್ಲಿ 21 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಬೆಳೆ ನಷ್ಟದಿಂದಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಮರುಪಾವತಿ ಮಾಡುವಂತೆ ಬ್ಯಾಂಕ್‌ನಿಂದ ಪದೇ-ಪದೇ ನೋಟಿಸ್‌ಗಳನ್ನು ನೀಡಲಾಗಿತ್ತು. ಹೀಗಾಗಿ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರ ಪತ್ನಿ ಕಲ್ಪನಾ ಅವರು ನೀಡಿದ ದೂರಿನ ಆಧಾರದ ಮೇಲೆ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
