ಉತ್ತರ ಪ್ರದೇಶದ ಅಯೋಧ್ಯೆಯ ಸಹ್ನವಾ ಗ್ರಾಮದ ಹೊರವಲಯದಲ್ಲಿ ಇಪ್ಪತ್ತಾರು ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಸಲ್ಲಿಸಿತು.
ಪೊಲೀಸರ ಮಾಹಿತಿ ಪ್ರಕಾರ ಯುವತಿಯ ಮೃತದೇಹದ ಕಾಲುಗಳು ಮುರಿದಿದ್ದು, ಕಣ್ಣುಗಳನ್ನು ಕಿತ್ತು ಹಾಕಿಲಾಗಿತ್ತು. ಇಂತಹ ಹೇಯ ಕೃತ್ಯಗಳು ಪದೇ ಪದೆ ಸಂಭವಿಸಿದರೂ ಸರ್ಕಾರ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷ ಗತಿಸಿದರು.. ಇದುವರೆಗೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಕೊಲೆ ಸುಲಿಗೆಗಳಿಗೆ ಕಡಿವಾಣ ಬಿದ್ದಿಲ್ಲ. ವರ್ಷದಿಂದ ವರ್ಷಕ್ಕೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆಯೇ ವಿನಃ ಕ್ರಮ ತೆಗೆದುಕೊಂಡಿರುವುದು ಬೆರಳೆಣಿಕೆಯಷ್ಟು ಮಾತ್ರ. ಕೇಂದ್ರ ಗೃಹ ಮಂತ್ರಿಯವರು ಈ ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಬೇಕು. ಅತ್ಯಾಚಾರ ಮಾಡಿದ ಕಾಮುಕರನ್ನು ತಕ್ಷಣ ಗುಂಡಿಕ್ಕಿ ಕೊಲ್ಲುವಂತೆ ಕೇಂದ್ರ ಸಚಿವ ಸಂಪುಟದಲ್ಲಿ ಕಾನೂನು ಜಾರಿಗೊಳಿಸಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮುಂದೆ ಇಂತಹ ಕೃತ್ಯ ನಡೆಯದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಸಮಿತಿ ಒತ್ತಾಯಿಸಿತು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ದೈಹಿಕವಾಗಿ ಹಲ್ಲೆ ಮಾಡಿದ ಪೊಲೀಸರ ಅಮಾನತುಗೊಳಿಸುವಂತೆ ಒತ್ತಾಯ
ಈ ವೇಳೆ ಸಮಿತಿ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರಿ, ಬಸವರಾಜ್ ಜಯಂ, ಲಕ್ಷ್ಮಣ ಮಸರಕಲ್, ಆಂಜನೇಯ ಟೊಣ್ಣೂರು, ಮಹಾದೇವ, ವಿಜಯಕುಮಾರ ಇನ್ನಿತರರು ಹಾಜರಿದ್ದರು.
