ಸದ್ಯ ಗ್ರಾಮೀಣರಿಗೆ ನೇರವಾಗಿ ಉದ್ಯೋಗ ನೀಡುತ್ತಿರುವ ಕಾರ್ಯಕ್ರಮವೆಂದರೆ ಮನ್‍ರೇಗಾ. ಅದನ್ನು ಸಾವಕಾಶವಾಗಿ ಕೊಲ್ಲಲು ಸರ್ಕಾರ ಪ್ರಯತ್ನಿಸುತ್ತಿದೆ. ಈಗ ಉದ್ಯೋಗ ಕಾರ್ಯಕ್ರಮಗಳಿವೆ. ಆದರೆ ಅವು ಸಾಲ ಸಂಬಂಧಿ, ಸಬ್ಸಿಡಿ ಸಂಬಂಧಿ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸಂಘಟನೆ ಸಂಬಂಧಿ ಕಾರ್ಯಕ್ರಮಗಳೇ ವಿನಾ ನೇರವಾಗಿ ಉದ್ಯೋಗ ನೀಡುವ ಸರ್ಕಾರಿ ಉದ್ಯೋಗ ಕಾರ್ಯಕ್ರಮಗಳಲ್ಲ.
ಕೇಂದ್ರ ಸರ್ಕಾರ ಮಂಡಿಸಿರುವ 2025-26ನೆಯ ಸಾಲಿನ ಬಜೆಟ್ ಕುಂಟುತ್ತಾ-ತೆವಳುತ್ತಾ ಸಾಗುತ್ತಿರುವ ಆರ್ಥಿಕ ಬೆಳವಣಿಗೆಗೆ ಯಾವ ರೀತಿಯಲ್ಲಿಯೂ ಪರಿಹಾರಾತ್ಮಕವಾಗಿಲ್ಲ ಮತ್ತು ಅದಕ್ಕೆ ಪುಷ್ಠಿಕೊಡುವಂತಹ ಸ್ಥಿತಿಯಲ್ಲಿಲ್ಲ. ಬಜೆಟ್‌ನ ಎಲ್ಲ ಆಯಾಮಗಳಲ್ಲಿಯೂ ವೆಚ್ಚವನ್ನು ತೀವ್ರವಾಗಿ ಕಡಿತ ಮಾಡಲಾಗಿದೆ. ಎಲ್ಲ ಬಗೆಯ ವೆಚ್ಚದಲ್ಲಿನ ಕಡಿತದ ಹಿನ್ನೆಲೆಯಲ್ಲಿ ಆರ್ಥಿಕತೆಯ ಪುನಶ್ಚೇತನ – ಅಂದರೆ ವಿಕಸಿತ ಭಾರತ ಹೇಗೆ ಸಾಧ್ಯ? ಈ ಬಜೆಟ್ ಆರ್ಥಿಕತೆಯಲ್ಲಿನ ಕೂಲಿಕಾರರು, ಕಾರ್ಮಿಕ ವರ್ಗ, ರೈತರು ಮತ್ತು ಮಹಿಳೆಯರ ಮೇಲೆ ಒಂದು ಕಡೆ ಹೆಚ್ಚಿನ(ಜಿ ಎಸ್ ಟಿ)ಹೊರೆ ಹೊರಿಸಿದರೆ, ಮತ್ತೊಂದು ಕಡೆ ಅದೇ ವರ್ಗಕ್ಕೆ ಯಾವ ಬಗೆಯ ಪರಿಹಾರವನ್ನೂ ಅದು ನೀಡುತ್ತಿಲ್ಲ.
ಕಳೆದ 2024-25 ರಲ್ಲಿ ಒಟ್ಟು ಬಜೆಟ್ ವೆಚ್ಚ ರೂ. 48.20 ಲಕ್ಷ ಕೋಟಿಯಿತ್ತು. ಆದರೆ, ವಾಸ್ತವವಾಗಿ ವೆಚ್ಚವಾಗುತ್ತಿರುವುದು ರೂ. 47.16 ಲಕ್ಷ ಕೋಟಿ. ಇಲ್ಲಿನ ಕಡಿತ ರೂ. 1.04 ಲಕ್ಷ ಕೋಟಿ. ನಮ್ಮ ಆರ್ಥಿಕತೆಯಲ್ಲಿ ರೂ. 1.04 ಲಕ್ಷ ಕೋಟಿ ವೆಚ್ಚ ಕಡಿಮೆಯಾಗಿದೆ. ಇದು ಮೊದಲಿನ ಕಡಿತದ ಕತೆ.
ಪ್ರಸ್ತುತ 2025-26ನೆಯ ಸಾಲಿನ ಬಜೆಟ್ ವೆಚ್ಚ ರೂ.50.65 ಲಕ್ಷ ಕೋಟ. ಹಿಂದಿನ ವರ್ಷದ ಪರಿಷ್ಕೃತ ವೆಚ್ಚಕ್ಕೆ ಹೋಲಿಸಿದೆ ಏರಿಕೆ ಕೇವಲ ರೂ. 2.45 ಲಕ್ಷ ಕೋಟಿ. ಇದರ ಏರಿಕೆಯ ಪ್ರಮಾಣ ಶೇ. 5.08. ಇಂದಿನ ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ನಿಜ ಏರಿಕೆಯು ಶೂನ್ಯ.
ಕಳೆದ 2024-25ನೆಯ ಸಾಲಿನ ಬಜೆಟ್ ವೆಚ್ಚ ರೂ.48.20 ಲಕ್ಷ ಕೋಟಿಯು ಅದೇ ವರ್ಷದ ಜಿಡಿಪಿಯ ಶೇ. 14.87 ರಷ್ಟಿತ್ತು. ಈಗ 2025-26ನೆಯ ಸಾಲಿನ ವೆಚ್ಚವು ಸದರಿ ವರ್ಷದ ಜಿಡಿಪಿಯ(ಅಂದಾಜು) ಶೇ. 14.18ರಷ್ಟಾಗುತ್ತದೆ. ಇದು ಕಡಿತದ ಮತ್ತೊಂದು ಕತೆ.
ನಿರ್ಮಲಾ ಸೀತಾರಾಮನ್, ಸರ್ಕಾರವು ಬಜೆಟ್ ನಲ್ಲಿ ಬಂಡವಾಳ ವೆಚ್ಚವನ್ನು ಏರಿಸಿರುವುದು ತಮ್ಮ ‘ಸಾಧನೆʼ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅಲ್ಲಿನ ಕತೆಯು ಬೇರೆಯಿದೆ. ಕಳೆದ 2024-25ರಲ್ಲಿ ಬಜೆಟ್‌ನಲ್ಲಿದ್ದ ಬಂಡವಾಳ ವೆಚ್ಚ ರೂ.11.11 ಲಕ್ಷ ಕೋಟಿ. ಆದರೆ ವಾಸ್ತವವಾಗಿ ವೆಚ್ಚವಾಗುತ್ತಿರುವುದು ರೂ.10.18 ಲಕ್ಷ ಕೋಟಿ. ಇಲ್ಲಿನ ಕಡಿತ ರೂ.93 ಲಕ್ಷ. ಇದು ಕಡಿತದ ಕತೆಯ ಮತ್ತೊಂದು ಆಯಾಮ.
ಎಲ್ಲಕ್ಕಿಂತ ಮುಖ್ಯವಾಗಿ ಸದ್ಯ ಜನರ ಕೈಗೆ ಹಣ ದೊರೆಯಬಹುದಾದ ವೆಚ್ಚವೆಂದರೆ ರೆವಿನ್ಯೂ ಅಥವಾ ಚಾಲ್ತಿ ವೆಚ್ಚ. ಆದರೆ ಈ ಸರ್ಕಾರವು ರೆವಿನ್ಯೂ ವೆಚ್ಚವನ್ನು ನಿರಂತರವಾಗಿ ಕಡಿತ ಮಾಡುತ್ತಾ ಬಂದಿದೆ. ಒಕ್ಕೂಟ ಸರ್ಕಾರದ 2021-22ನೆಯ ಸಾಲಿನ ಬಜೆಟ್‌ನ ಒಟ್ಟು ವೆಚ್ಚದಲ್ಲಿ ರೆವಿನ್ಯೂ ವೆಚ್ಚದ ಪ್ರಮಾಣ ಶೇ. 84.08ರಷ್ಟಿತ್ತು. ಇದು 2025-26ರಲ್ಲಿ ಇದು ಶೇ. 77.86ಕ್ಕಿಳಿದಿದೆ. ಇದು ಕಡಿತದ ಮಗದೊಂದು ಕತೆ.

ಇಂದು ನಮ್ಮ ಆರ್ಥಿಕತೆಯಲ್ಲಿ ಗ್ರಾಮೀಣ ಕೂಲಿಕಾರರಿಗೆ ಬದುಕನ್ನು ನೀಡುತ್ತಿರುವ ಕಾರ್ಯಕ್ರಮವೆಂದರೆ ಮನ್‍ರೇಗಾ. ಆದರೆ ಒಕ್ಕೂಟ ಸರ್ಕಾರವು ಇದನ್ನು ನಾಶ ಮಾಡಲು ಪಣತೊಟ್ಟಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಕಾರ್ಯಯೋಜನೆಗೆ 2024-25ರಲ್ಲಿ ನೀಡಿದ್ದ ಅನುದಾನ ರೂ. 60,000 ಕೋಟಿ. ವಾಸ್ತವವಾಗಿ ವೆಚ್ಚವಾಗಿರುವುದು ರೂ.90800 ಕೋಟಿ. ಅಂದರೆ ಗ್ರಾಮೀಣ ಭಾಗದಲ್ಲಿ ಇದಕ್ಕೆ ತೀವ್ರ ಬೇಡಿಕೆಯಿದೆ. ಆದರೆ ಸರ್ಕಾರ ಇದಕ್ಕೆ 2025-26ರಲ್ಲಿ ನೀಡಿರುವ ಹಣ ರೂ. 86000 ಕೋಟಿ. ಕಳೆದ ವರ್ಷದಲ್ಲಿನ ಒಟ್ಟು ವೆಚ್ಚ ರೂ.48.20 ಲಕ್ಷ ಕೋಟಿಯಲ್ಲಿ ಮನ್‍ರೇಗಾ ವೆಚ್ಚದ ಪ್ರಮಾಣ ಶೇ. 1.87. ಆದರೆ ಈಗ 2025-26ರಲ್ಲಿ ಅದು ಶೇ. 1.69ಕ್ಕಿಳಿದಿದೆ. ಇಲ್ಲಿದೆ ಜನರ ಜೀವನೋಪಾಯದ ಮೇಲೆ ಸರ್ಕಾರ ಹಾಕುತ್ತಿರುವ ಕಡಿತದ ಬರೆ.
ಇಂದು ನಮ್ಮ ದೇಶದಲ್ಲಿ 6 ತಿಂಗಳಿಂದ 59 ತಿಂಗಳ ವಯೋಮಾನದ ಮಕ್ಕಳು ತೀವ್ರ ಅನೀಮಿಯಾ (ರಕ್ತಹೀನತೆ) ಎದುರಿಸುತ್ತಿದ್ದಾರೆ. ಇದನ್ನು ಎನ್‍ಎಫ್‌ಎಚ್‍ಎಸ್ 5(2019-2021) ದೃಢಪಡಿಸಿದೆ. ಇದೇ ರೀತಿಯಲ್ಲಿ ವಯಸ್ಕ ಮಹಿಳೆಯರೂ ತೀವ್ರ ಅನೀಮಿಯಾ ಎದುರಿಸುತ್ತಿದ್ದಾರೆ(ಶೇ.57.0). ಆದರೆ ಇದರ ನಿವಾರಣೆಗೆ ಸರ್ಕಾರವು ಗಂಭೀರ ಪ್ರಯತ್ನ ನಡೆಸುತ್ತಿಲ್ಲ. ಸಕ್ಷಮ ಅಂಗನವಾಡಿ ಮತ್ತು ಪೋಷಣ್- 2 ಕಾರ್ಯಕ್ರಮಕ್ಕೆ 2023-24ರಲ್ಲಿ ನೀಡಿದ್ದ ಅನುದಾನ ರೂ.21209 ಕೋಟಿ ಮತ್ತು 2024-25ರಲ್ಲಿ ನೀಡಿದ್ದು ರೂ.20070 ಕೋಟಿ. ಪ್ರಸ್ತುತ 2025-26ರಲ್ಲಿ ನೀಡಿರುವ ಹಣ ರೂ.21960 ಕೋಟಿ. ಇಲ್ಲಿನ ಏರಿಕೆಯು ಶೇ.9.41. ಆದರೆ 2023-24ಕ್ಕೆ ಹೋಲಿಸಿದರೆ ಏರಿಕೆ ಕೇವಲ ಶೇ. 3.54. ಇಲ್ಲಿಯೂ ಹಣದುಬ್ಬರವನ್ನು ಪರಿಗಣನೆಗೆ ತೆಗೆದುಕೊಂಡರೆ ನಿಜವಾದ ಏರಿಕೆ ಶೂನ್ಯ. ಈ ಯೋಜನೆಯ ಫಲಾನುಭವಿಗಳು 8 ಕೋಟಿ ಮಕ್ಕಳು, 1 ಕೋಟಿ ಬಾಣಂತಿಯರು ಮತ್ತು 20 ಲಕ್ಷ ಹದಿಹರೆಯದ ಯುವತಿಯರು. ಇಷ್ಟು ದೊಡ್ಡ ಸಂಖ್ಯೆಗೆ ನೀಡುತ್ತಿರುವ ಅನುದಾನ ಅತ್ಯಂತ ಕಡಿಮೆ. ಇದು ಪ್ರಸ್ತುತ ಬಜೆಟ್‌ನ ಕಡಿತದ ಕ್ರೂರ ಕತೆ.
ಈ ಸರ್ಕಾರದ ತೆರಿಗೆ ನೀತಿಯು ಕಾರ್ಪೊರೇಟುಗಳ ಪರವಾಗಿದೆಯೇ ವಿನಾ ಕೂಲಿಕಾರರ-ಕಾರ್ಮಿಕರ-ರೈತಾಪಿಗಳ ಪರವಾಗಿಲ್ಲ. ಪ್ರಸ್ತುತ ಸಾಲಿನ ಒಟ್ಟು ತೆರಿಗೆ ರಾಶಿಯಲ್ಲಿ ಕಾರ್ಪೋರೇಟ್ ತೆರಿಗೆ ಪ್ರಮಾಣ ಶೇ. 17ರಷ್ಟಿದ್ದರೆ ಬಡವರ – ಕೂಲಿಕಾರರ-ಕಾರ್ಮಿಕ ವರ್ಗದ ಮೇಲೆ ಅತ್ಯಧಿಕ ಭಾರ ಹೇರುವ ಜಿಎಸ್‍ಟಿ ಪ್ರಮಾಣ ಶೇ.18. ಲಕ್ಷ-ಲಕ್ಷ ಕೋಟಿ ವರ್ಷ ವರ್ಷ ಲಾಭವನ್ನು ಕೊಳ್ಳೆ ಹೊಡೆಯುವ ಕಾರ್ಪೊರೇಟುಗಳು ನೀಡುತ್ತಿರುವ ತೆರಿಗೆ ಪ್ರಮಾಣವು ಜನಸಾಮಾನ್ಯರು ನೀಡುವ ತೆರಿಗೆ ಪ್ರಮಾಣಕ್ಕಿಂತ ಕಡಿಮೆ. ಇದು ಮತ್ತೊಂದು ದುರಂತದ ಕತೆ.
ಈ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ನೇರವಾಗಿ ಪ್ರತ್ಯಕ್ಷವಾಗಿ ಜನರಿಗೆ ಉದ್ಯೋಗ ನೀಡುವ ಕಾರ್ಯಕ್ರಮವನ್ನು ಆರಂಭಿಸಿಲ್ಲ. ಪ್ರಧಾನಮಂತ್ರಿ ಪ್ರಕಾರ ಯುವಕರು ಯುವತಿಯರು ಕೆಲಸ ಹುಡುಕುವುದಕ್ಕೆ ಬದಲಾಗಿ ಕೆಲಸ ಕೊಡುವಂತವರಾಗಬೇಕು. ಸದ್ಯ ಗ್ರಾಮೀಣರಿಗೆ ನೇರವಾಗಿ ಉದ್ಯೋಗ ನೀಡುತ್ತಿರುವ ಕಾರ್ಯಕ್ರಮವೆಂದರೆ ಮನ್‍ರೇಗಾ. ಅದನ್ನು ಸಾವಕಾಶವಾಗಿ ಕೊಲ್ಲಲು ಸರ್ಕಾರ ಪ್ರಯತ್ನಿಸುತ್ತಿದೆ. ಈಗ ಉದ್ಯೋಗ ಕಾರ್ಯಕ್ರಮಗಳಿವೆ. ಆದರೆ ಅವು ಸಾಲ ಸಂಬಂಧಿ, ಸಬ್ಸಿಡಿ ಸಂಬಂಧಿ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸಂಘಟನೆ ಸಂಬಂಧಿ ಕಾರ್ಯಕ್ರಮಗಳೇ ವಿನಾ ನೇರವಾಗಿ ಉದ್ಯೋಗ ನೀಡುವ ಸರ್ಕಾರಿ ಉದ್ಯೋಗ ಕಾರ್ಯಕ್ರಮಗಳಲ್ಲ.
ರಸಗೊಬ್ಬರಕ್ಕೆ 2024-25ರಲ್ಲಿನ ಅನುದಾನವು ಅದರ ಒಟ್ಟು ಬಜೆಟ್‌ನ ಶೇ. 3.54ರಷ್ಟಿತ್ತು. ಇದು 2025-26ರಲ್ಲಿ ಶೇ. 3.29ಕ್ಕಿಳಿದಿದೆ. ಇದೇ ರೀತಿಯಲ್ಲಿ ಆಹಾರ ಸಬ್ಸಿಡಿಯು 2024-25ರ ಒಟ್ಟು ಬಜೆಟ್ ವೆಚ್ಚದ ಶೇ. 4.35 ರಷ್ಟಿದ್ದುದು ಈಗ 2025-26ರಲ್ಲಿ ಇದು ಶೇ. 4.16ಕ್ಕಿಳಿದಿದೆ. ಇದು ಪ್ರಸ್ತುತ ಬಜೆಟ್‌ನ ಕಡಿತದ ಪುರಾಣ.

ದಲಿತರಿಗೆ ಮತ್ತು ಆದಿವಾಸಿಗಳಿಗೂ ಬಜೆಟ್ ನ್ಯಾಯ ನೀಡುತ್ತಿಲ್ಲ. ಈ ಸರ್ಕಾರವು 2024-25ರಲ್ಲಿ ಪ. ಜಾ. ಉಪಯೋಜನೆಗೆ ನೀಡಿದ್ದ ಅನುದಾನ ರೂ.1.65 ಲಕ್ಷ ಕೋಟಿ. ಆದರೆ ವೆಚ್ಚವಾಗಿರುವುದು ರೂ.1.38 ಲಕ್ಷ ಕೋಟಿ. ಇಲ್ಲಿನ ಕಡಿತ ರೂ.27138 ಕೋಟಿ. ಪ್ರಸ್ತುರ ನೀಡಿರುವ ಅನುದಾನ ರೂ.1.68 ಲಕ್ಷ ಕೋಟಿ. ಇದೇ ರೀತಿಯಲ್ಲಿ ಬುಡಕಟ್ಟು ಉಪಯೋಜನೆಗೆ 2024-25ರಲ್ಲಿ ನೀಡಿದ್ದ ಅನುದಾನ ರೂ. 1.25 ಲಕ್ಷ ಕೋಟಿ. ಆದರೆ ವೆಚ್ಚವಾಗಿರುವುದು ರೂ. 1.07 ಲಕ್ಷ ಕೋಟಿ ಮಾತ್ರ. ಈಗ ಇದಕ್ಕೆ ನೀಡಿರುವ ಹಣ ರೂ. 1.29 ಲಕ್ಷ ಕೋಟಿ. ಇಲ್ಲಿಯೂ ಹಣದುಬ್ಬರನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಇಲ್ಲಿನ ಏರಿಕೆಯು ಉತ್ತಮವಾಗಿಲ್ಲ.
ನಿರುದ್ಯೋಗದ ಕತೆ: ಹತಾಶ ಯುವಜನತೆಯ ಆಕ್ರಂದನ
ಐಎಲ್‍ಒ ಮತ್ತು ಐಎಚ್‍ಡಿ ಸಂಸ್ಥೆಗಳು ಪ್ರಕಟಿಸಿರುವ ಇಂಡಿಯಾ ಎಂಪ್ಲಾಯ್‍ಮೆಂಟ್ ರಿಪೋರ್ಟ್ 2024 ಪ್ರಕಾರ ನಮ್ಮ ಆರ್ಥಿಕತೆಯಲ್ಲಿ ಒಟ್ಟು ನಿರುದ್ಯೋಗಿಗಳಲ್ಲಿ ಯುವಕರ ಪ್ರಮಾಣ ಶೇ. 83. ಯೋಗ್ಯವಾದ(ಡೀಸೆಂಟ್) ಮತ್ತು ವರಮಾನ ತರುವಂತಹ ಉದ್ಯೋಗಗಳು ದೊರಕದೆ ಇರುವುದರಿಂದ ನಮ್ಮ ಯುವಜನತೆಯು ಉದ್ಯೋಗ ಅರಸುವುದನ್ನು ಬಿಟ್ಟು ಸಣ್ಣ-ಪುಟ್ಟ ಸ್ವ ಉದ್ಯೋಗಗಳನ್ನು ಅವಲಂಬಿಸುತ್ತಿದ್ದಾರೆ. ಆರ್ಥಿಕ ಸಮೀಕ್ಷೆ 2024-25ರಲ್ಲಿ ದೇಶದಲ್ಲಿನ ಒಟ್ಟು ಉದ್ಯೋಗಿಗಳಲ್ಲಿ ಸ್ವಉದ್ಯೋಗಿಗಳ ಪ್ರಮಾಣ 2017-18ರಲ್ಲಿ ಶೇ. 52.8 ರಷ್ಟಿದ್ದುದು 2024-25ರಲ್ಲಿ ಇದು ಶೇ. 58.6ಕ್ಕೇರಿದೆ ಎಂಬುದನ್ನು ದಾಖಲಿಸಿದೆ. ತಮಾಷೆಯ ಸಂಗತಿಯೆಂದರೆ ಇದನ್ನು ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಅವರು “ಉದ್ಯಮಿಗಳ ಚಟುವಟಿಕೆಗಳ ಬೆಳವಣಿಗೆಯ ಸೂಚಿ” ಎಂದಿದ್ದಾರೆ. ಇದೇ ವರದಿಯ ಪ್ರಕಾರ ಸ್ವಉದ್ಯೋಗಿಗಳ ಮಾಸಿಕ ಗಳಿಕೆ ರೂ. 13279. ಅಂದರೆ ದಿನದ ದುಡಿಮೆ ರೂ.443. ಇವರು ಎಂತಹ ಉದ್ಯಮಿಗಳಾಗ ಬಲ್ಲರು? ಮುಖ್ಯ ಆರ್ಥಿಕ ಸಲಹೆಗಾರರು ಸ್ವಉದ್ಯೋಗಗಳ ಬಗ್ಗೆ ಮಾಡುತ್ತಿರುವ ಅಪ್ರತ್ಯಕ್ಷ ವ್ಯಂಗ್ಯ ಇದಾಗಿದೆ.
ನಮ್ಮ ಆರ್ಥಿಕತೆಯ ಒಟ್ಟು ಉದ್ಯೋಗಿಗಳಲ್ಲಿ ಸ್ವಉದ್ಯೋಗಿಗಳ ಪ್ರಮಾಣ ಶೇ. 58.4. ಖಾಯಂ ಉದ್ಯೋಗಿಗಳ ಪ್ರಮಾಣ ಶೇ. 21.7. ತಾತ್ಪೂರ್ತಿಕ(ಕಾಶ್ಯುಯಲ್) ಉದ್ಯೋಗಿಗಳ ಪ್ರಮಾಣ ಶೇ. 19.8. ಒಟ್ಟು ಸ್ವಉದ್ಯೋಗಿಗಳು ಮತ್ತು ತಾತ್ಪೂರ್ತಿಕ ಉದ್ಯೋಗಿಗಳ ಒಟ್ಟು ಪ್ರಮಾಣ ಶೇ. 78.2. ಈಗಾಗಲೇ ಹೇಳಿದಂತೆ ಸ್ವಉದ್ಯೋಗಿಗಳ ಮಾಸಿಕ ಗಳಿಕೆ ರೂ.13279 ಮತ್ತು ತಾತ್ಪೂರ್ತಿಕ ಉದ್ಯೋಗಿಗಳ ದಿನಗೂಲಿ ರೂ. 418, ಈ ಗಳಿಕೆಯಲ್ಲಿ ಕಾರ್ಮಿಕ ಕುಟುಂಬವೊಂದು ಯಾವ ಬಗೆಯ ಜೀವನ ಸಾಗಿಸುತ್ತಿರಬಹುದು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ.

ಈ ಸರ್ಕಾರವು ಸ್ಕಿಲಿಂಗ್ ತರಬೇತಿಯನ್ನು ಶಿಕ್ಷಣದಿಂದ ಬೇರ್ಪಡಿಸಿ ನಿರ್ವಹಣೆ ಮಾಡುತ್ತಿದೆ. ಇದರ ಮೂಲದಲ್ಲಿರುವ ಮಹಾಮೋಸ ಯಾವುದು? ಆರ್ಥಿಕತೆಯಲ್ಲಿ ಉನ್ನತ ಎಲೈಟ್ ವರ್ಗದ ಮಕ್ಕಳಿಗೆ (ತ್ರೈವರ್ಣಿಕರಿಗೆ) ಉನ್ನತ ಶಿಕ್ಷಣ, ತಳವರ್ಗದ ಶೂದ್ರರು ಮತ್ತು ದಲಿತ ಮಕ್ಕಳಿಗೆ ಸ್ಕಿಲಿಂಗ್ ತರಬೇತಿ ಎನ್ನುವ ಕಾರ್ಯಯೋಜನೆಯನ್ನು ಒಕ್ಕೂಟ ಸರ್ಕಾರವು ಬೆಳೆಸುತ್ತಿದೆ. ನಮ್ಮ ಮುಂದೆ ಐಐಟಿ ಮತ್ತು ಐಐಎಂ ಸಂಸ್ಥೆಗಳಿಂದ ಹೊರಬರುವ ವಿದ್ಯಾರ್ಥಿಗಳು ಉದ್ಯೋಗಾರ್ಹರಾಗಿರುತ್ತಾರೆ. ಅಲ್ಲಿ ಶಿಕ್ಷಣ ಮತ್ತು ಸ್ಕಿಲಿಂಗ್ ಬೇರೆ ಬೇರೆಯಲ್ಲ. ಈ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟ ಅತ್ಯುತ್ತಮವಾಗಿದೆ. ಆದರೆ ಸಾಂಪ್ರದಾಯಿಕ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟವು ಅತ್ಯಂತ ಕೆಳಮಟ್ಟದಲ್ಲಿದೆ. ಅರ್ಧದಷ್ಟು ಬೋಧಕ ಹುದ್ದೆಗಳು ಖಾಲಿಯಿವೆ. ಇಲ್ಲಿಂದ ಹೊರಬರುವ ವಿದ್ಯಾರ್ಥಿಗಳು ಉದ್ಯೋಗಾರ್ಹರಾಗಿರುವುದಿಲ್ಲ. ಇವರಿಗೆ ಸ್ಕಿಲಿಂಗ್ ಮತ್ತು ಉಳ್ಳವರ ಕುಟುಂಬಗಳ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ. ಇಂತಹ ನೀತಿಯು ಸಮಾಜದಲ್ಲಿ ಸದ್ಯ ಇರುವ ವರಮಾನ-ಸಂಪತ್ತಿನ ಅಸಮಾನತೆಯನ್ನು ದೊಡ್ಡದು ಮಾಡುತ್ತದೆ.
ಕೊನೆಯದಾಗಿ ಒಕ್ಕೂಟ ಸರ್ಕಾರದ 2025-26ನೆಯ ಸಾಲಿನ ಬಜೆಟ್ ಉಳ್ಳವರಿಗಾಗಿ-ಉಳ್ಳವರಿಂದ ಸಿದ್ಧವಾಗಿರುವ ಒಂದು ಮಹಾಯೋಜನೆ. ನಾವು ಇಂತಹ ಬಜೆಟ್ ಕಾರ್ಯಕ್ರಮದ ಹಾಗೂ ಆರ್ಥಿಕ ನೀತಿ ಮೂಲದಲ್ಲಿನ ಹುನ್ನಾರವನ್ನು, ತ್ರೈವರ್ಣೀಕರ ಮಹಾಯೋಜನೆಯನ್ನು ಅರ್ಥ ಮಾಡಿಕೊಳ್ಳಬೇಕು. ಒಕ್ಕೂಟ ಸರ್ಕಾರದ 2025-26ನೆಯ ಸಾಲಿನ ಬಜೆಟನ್ನು ಸೂಕ್ಷ್ಮವಾಗಿ ಮತ್ತು ಎಚ್ಚರದಿಂದ ಪರಿಶೀಲಿಸಿದರೆ ಅದು ನಡೆಸುತ್ತಿರುವ ದ್ರೋಹವು ಅರ್ಥವಾಗುತ್ತದೆ.
ಇದನ್ನೂ ಓದಿ ಬಜೆಟ್ ವಿಶ್ಲೇಷಣೆ | ಬೇಟಿ ಬಚಾವೊ-ಬೇಟಿ ಪಡಾವೊ; ಹೇಳಿದ್ದೊಂದು ಮಾಡಿದ್ದೊಂದು
ಬಜೆಟ್ 2025 | ಎಂದಿನಂತೆ ಶಾಲಾ ಶಿಕ್ಷಣಕ್ಕೆ ಆಯವ್ಯಯದಲ್ಲಿ ಅತ್ಯಲ್ಪ ಆದ್ಯತೆ!

ಟಿ ಆರ್ ಚಂದ್ರಶೇಖರ
ವಿಶ್ರಾಂತ ಪ್ರಾಧ್ಯಾಪಕ, ಲೇಖಕರು