ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ಮೂರನೇ ಬಾರಿಗೆ ದೆಹಲಿಯ ಗದ್ದುಗೆ ಹಿಡಿಯಲು ಎಎಪಿ ಕಸರತ್ತು ನಡೆಸುತ್ತಿದೆ. ಎಎಪಿಯಿಂದ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಹವಣಿಸುತ್ತಿದ್ದರೆ, ತನ್ನ ನೆಲೆಯನ್ನು ಮರಳಿ ಪಡೆಯವ ಪ್ರಯತ್ನದಲ್ಲಿ ಕಾಂಗ್ರೆಸ್ ನಿರತವಾಗಿದೆ.
ಬುಧವಾರ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 6ರವರೆಗೆ ನಡೆಯಲಿದೆ. ಮತದಾನ ನಡೆಯುವ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 220 ಅರೆಮಿಲಿಟರಿ ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ 35,626 ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ಪಡೆದ 19 ಸಾವಿರ ಮಂದಿ ಭದ್ರತಾ ಕಾರ್ಯಗಳಿಗೆ ನಿಯೋಜಿಸಲಾಗಿದೆ.
ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆಯಿದ್ದು, ವಿಧಾನಸಭೆಯ ಎಲ್ಲ 70 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ದೆಹಲಿಯಲ್ಲಿ ಸರ್ಕಾರ ರಚಿಸಲು ಕನಿಷ್ಠ 35 ಸ್ಥಾನಗಳನ್ನು ಗೆಲ್ಲುವ ಅಗತ್ಯವಿದೆ. ಸದ್ಯ, ಕನಿಷ್ಠ 55 ಸ್ಥಾನಗಳನ್ನು ಗೆಲ್ಲುತ್ತೇವೆಂಬ ವಿಶ್ವಾಸ ಕೇಜ್ರಿವಾಲ್ ಅವರಲ್ಲಿದೆ.
2020ರ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದಿತ್ತು. ಅದಕ್ಕೂ ಹಿಂದಿನ 2015ರ ಚುನಾವಣೆಯಲ್ಲಿ 67 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎರಡೂ ಅವಧಿಯಲ್ಲಿಯೂ ಪ್ರಬಲ ವಿರೋಧ ಪಕ್ಷವೇ ಇಲ್ಲದ ರೀತಿಯಲ್ಲಿ ಎಎಪಿ ಗೆದ್ದು, ಸರ್ಕಾರ ರಚನೆ ಮಾಡಿತ್ತು.