ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕಿನ ಸುಮಾರು 19 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ವಿ ಪಾಟೀಲ ಹೇಳಿದರು.
ಹೊರ್ತಿಯ ಅಗಸನಾಳ ಕಾಲುವೆ ಬಳಿ ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ, ಸಣ್ಣ ನೀರಾವರಿ ಕೆರೆ ತುಂಬುವ ಯೋಜನೆಯಡಿ ಜಾಕ್‌ವೆಲ್ ಮೂಲಕ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಕೆರೆಗಳಿಗೆ ನೀರು ಹರಿಸುವುದರಿಂದ ಅಂತರ್ಜಲ ಮಟ್ಟ, ಬಾವಿ ಹಾಗೂ ಬೋರವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ಇದರಿಂದ ಕುಡಿಯುವ ನೀರು ಮತ್ತು ಹೊಲ-ಗದ್ದೆಗಳಿಗೆ ನೀರು ಹರಿಸಲು ಅನೂಕೂಲ ಆಗಲಿದೆ. ಬೇಸಿಗೆಗೆ ನೀರಿನ ಅವಶ್ಯಕತೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿರುವುದರಿಂದ ನೀರಿನ ಕೊರತೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುವುದು” ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಇಂಡಿ ತಾಲೂಕಿನ ಹೊರ್ತಿ, ಕೊಳರಗಿ, ನಿಂಬಾಳ, ದೇಗಿನಾಳ, ಬಬಲಾದಿ, ಹಲಗುಣಕಿ, ಗುಂಡವಾನ, ಕೂಡಗಿ, ಸಾವಳಸಂಗ, ಸೋನಕನಹಳ್ಳಿ, ಹಡಲಸಂಗ ಮುಂತಾದ 13 ಕೆರೆಗಳು ಹಾಗೂ ಜಿಗಜಿಣಗಿ, ತಾಲೂಕಿನ ಸಾತಲಗಾಂವ, ಇಂಚಗೇರಿ, ಶಿಗಣಾಪುರ, ನಂದರಗಿ ಮುಂತಾದ ಕೆರೆಗಳು ಸೇರಿದಂತೆ ಸಣ್ಣ ನೀರಾವರಿ ಕೆರೆ ತುಂಬುವ ಯೋಜನೆಯ ಜಾಕ್‌ವೆಲ್ ವೀಕ್ಷಣೆ ಮಾಡಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಶೋಷಿತರ ಗೌರವಯುತ ಬದುಕಿಗೆ ಅಂಬೇಡ್ಕರ್ ಕಾರಣ: ಚಿಂತಕ ರಂಜಾನ್ ದರ್ಗಾ
ಈ ವೇಳೆ ನಾಗಠಾಣ ಶಾಸಕ ವಿಠ್ಠಲ್ ಕಟಕದೊಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರಣಗೌಡ ಪಾಟೀಲ, ಸದಸ್ಯ ಮಹಾದೇವ ಪೂಜಾರಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ ನಾಯಕ, ಇಲಿಯಾಸ ಬೋರಾಮಣಿ, ರವಿದಾಸ, ಜಾಧವ, ಪ್ರಕಾಶಗೌಡ ಪಾಟೀಲ, ರೈತ ಮುಖಂಡ ಗುರುನಾಥ ಬಗಲಿ, ಮಲಗೌಡ ಬಿರಾದಾರ, ಕೃಷ್ಣಾ ಭಾಗ್ಯ ಜಲನಿಗಮ ನಿಗಮದ ಎಂಜಿನಿಯರ್‌ಗಳಾದ ಡಿ.ಬಸವರಾಜ, ಮಹೇಶ ರಿಯಾಜ್ ಬಾಗಲಕೋಟೆ, ಗೋವಿಂದ ರಾಠೋಡ, ಅಶೋಕ ರೆಡ್ಡಿ ಪಾಟೀಲ ಇದ್ದರು.
