ದೆಹಲಿ ಮುಖ್ಯಮಂತ್ರಿ ಆತಿಶಿ ಅವರ ಆಪ್ತ ಸಹಾಯಕ ಒಟ್ಟು ಐದು ಲಕ್ಷ ರೂಪಾಯಿ ನಗದು ಸಮೇತವಾಗಿ ಸಿಕ್ಕಿಬಿದ್ದಿದ್ದಾರೆ. ಈ ಹಣವನ್ನು ಮತದಾರರಿಗೆ ಹಂಚಲೆಂದು ಹೊರಟಿದ್ದರು ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಬಿಜೆಪಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಉಸ್ತುವಾರಿ ಅಮಿತ್ ಮಾಳವಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ದೆಹಲಿ ಸಿಎಂ ಆತಿಶಿ ಮರ್ಲೇನಾ ಅವರ ಆಪ್ತ ಸಹಾಯಕ ಗಿರಿಖಂಡ್ ನಗರದಲ್ಲಿ 5 ಲಕ್ಷ ರೂ.ಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಕಲ್ಕಾಜಿಯಲ್ಲಿ ಮತದಾರರನ್ನು ಖರೀದಿಸುವ ಪಿತೂರಿ ನಡೆಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಆತಿಶಿ ವಿರುದ್ದ ಬಿಜೆಪಿ ಹೂಡಿದ್ದ ಮಾನನಷ್ಟ ಮೊಕದ್ದಮೆ ವಜಾಗೊಳಿಸಿದ ಕೋರ್ಟ್
ಈ ಹಿಂದೆ ಯಮುನಾ ನದಿಯ ನೀರನ್ನು ‘ವಿಷಗೊಳಿಸಲಾಗಿದೆ’ ಎಂಬ ಹೇಳಿಕೆ ಸಂಬಂಧ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಬುಧವಾರ ಬೆಳಿಗ್ಗೆ 7 ಗಂಟೆಗೆ 70 ಸದಸ್ಯರ ದೆಹಲಿ ವಿಧಾನಸಭೆಗೆ ಮತದಾನ ಆರಂಭವಾಗಿದೆ. 8ರಂದು ಮತ ಎಣಿಕೆ ನಡೆಯಲಿದೆ. ಇದಕ್ಕೂ ಮುನ್ನ ಈ ಎರಡು ಬೆಳವಣಿಗೆಗಳು ನಡೆದಿವೆ.
ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ರವಿ ಕುಮಾರ್ ಸಿಂಗ್, “ಕೆಲವು ಜನರು ಐದು ಲಕ್ಷ ರೂಪಾಯಿ ನಗದಿನೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ನಮ್ಮ ತಂಡ ಅಲ್ಲಿಗೆ ತಲುಪಿದ್ದು, ಗೌರವ್ ಮತ್ತು ಅಜಿತ್ ಎಂಬ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಇಬ್ಬರೂ ಕೂಡಾ ಸಿಎಂ ಕಚೇರಿಗೆ ಸಂಬಂಧಿಸಿದವರು ಎಂಬ ಮಾಹಿತಿ ಲಭಿಸಿದೆ” ಎಂದು ತಿಳಿಸಿದ್ದಾರೆ.
