ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ ಪ್ರಕರಣ)ದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಏಕಸದಸ್ಯ ನ್ಯಾಯಾಂಗ ಆಯೋಗಕ್ಕೆ ನೀಡಿದ್ದ ಗಡುವನ್ನು ರಾಜ್ಯ ಸರ್ಕಾರ ಮೇ 31ರವರೆಗೆ ವಿಸ್ತರಿಸಿದೆ.
ಆಯೋಗವು ಆರಂಭದಲ್ಲಿ ಜನವರಿ ಮಧ್ಯದ ವೇಳೆಗೆ ತನ್ನ ವರದಿಯನ್ನು ಸಲ್ಲಿಸುವುದಾಗಿ ಹೇಳಲಾಗಿತ್ತು. ಆದರೆ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ನೇತೃತ್ವದ ಆಯೋಗವು ಹೆಚ್ಚುವರಿ ಸಮಯವನ್ನು ಕೋರಿದ್ದರಿಂದ, ಸರ್ಕಾರವು ಗಡುವನ್ನು ವಿಸ್ತರಿಸಿದೆ.
ಮುಡಾದಲ್ಲಿ ಅವ್ಯವಹಾರದ ಆರೋಪಗಳು ಮತ್ತು ಅಕ್ರಮಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾದ ನಂತರ, ಸರ್ಕಾರವು ಜುಲೈ 2024ರ ಮಧ್ಯದಲ್ಲಿ ವಿಚಾರಣಾ ಆಯೋಗದ ಕಾಯ್ದೆಯಡಿ ಆಯೋಗವನ್ನು ರಚಿಸಿ, ತನ್ನ ವರದಿಗಳನ್ನು ಸಲ್ಲಿಸಲು ಆರು ತಿಂಗಳ ಗಡುವನ್ನು ನಿಗದಿಪಡಿಸಿತ್ತು. ಆದರೆ 2025ರ ಜನವರಿ ಮಧ್ಯದಲ್ಲಿ ಗಡವು ಕೊನೆಗೊಂಡಿದೆ. ಇದೀಗ ಆಯೋಗವು ಹೆಚ್ಚಿನ ಸಮಯವನ್ನು ಕೋರಿದ್ದರಿಂದ, ಸರ್ಕಾರವು ಗಡುವನ್ನು ಇನ್ನೂ ನಾಲ್ಕೂವರೆ ತಿಂಗಳಿಗೆ ವಿಸ್ತರಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂ.ಗ್ರಾ | ನೂತನ ಜಿಲ್ಲಾಧಿಕಾರಿಯಾಗಿ ಎ ಬಿ ಬಸವರಾಜು ನೇಮಕ
“ನಗರ ಸಂಸ್ಥೆಯಲ್ಲಿನ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಪಿ ಎನ್ ದೇಸಾಯಿ ಆಯೋಗದ ಗಡುವನ್ನು ಸರ್ಕಾರ ಮೇ 31ರವರೆಗೆ ವಿಸ್ತರಿಸಿದೆ” ಎಂದು ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ದೃಢಪಡಿಸಿದ್ದಾರೆ.