ಹಾವೇರಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 7 ವರ್ಷದ ಬಾಲಕನ ಕೆನ್ನೆಯ ಮೇಲಾಗಿದ್ದ ಗಾಯಕ್ಕೆ ನರ್ಸ್ ಒಬ್ಬರು ‘ಫೆವಿಕ್ವಿಕ್’ ಗಮ್ ಹಚ್ಚಿ ಚಿಕಿತ್ಸೆ ನೀಡಿರುವ ಘಟನೆ ನಡೆದಿದೆ.
‘ಸ್ಟಿಚ್ ಹಾಕಿದರೆ ಕಲೆ ಉಳಿಯುತ್ತದೆ’ ಎನ್ನುವ ಕಾರಣಕ್ಕೆ ನರ್ಸ್ ಈ ರೀತಿ ನಡೆದುಕೊಂಡಿರುವುದಾಗಿ ವರದಿಯಾಗಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೋಷಕರು ನರ್ಸ್ ವಿರುದ್ಧ ಹಿರಿಯ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ. ಕಳೆದ ಜನವರಿ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
7 ವರ್ಷದ ಗುರುಕಿಶನ್ ಅಣ್ಣಪ್ಪ ಹೊಸಮನಿ ಎಂಬ ಬಾಲಕನಿಗೆ ಕೆನ್ನೆ ಮೇಲೆ ಗಾಯ ಆಗಿತ್ತು. ಆಟ ಆಡುವಾಗ ಗುರುಕಿಶನ್ ಕೆನ್ನೆಗೆ ಗಾಯ ಮಾಡಿಕೊಂಡಿದ್ದ. ಕೆನ್ನೆಯ ಮೇಲಿನ ಗಾಯ ಬಹಳ ಆಳಕ್ಕೆ ಇಳಿದಿದ್ದರಿಂದ ರಕ್ತ ಕೂಡ ಸುರಿಯುತ್ತಿತ್ತು. ಕೂಡಲೇ ಬಾಲಕ ಗುರುಕಿಶನ್ ನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸ್ಥರು ಕರೆದೊಯ್ದಿದ್ದರು. ವಿದ್ಯಾರ್ಥಿಗೆ ಗಾಯಕ್ಕೆ ಹೊಲಿಗೆ ಹಾಕೋದು ಬಿಟ್ಟು ಫೆವಿಕ್ವಿಕ್ ಗಮ್ ಅಂಟಿಸಿ ನರ್ಸ್ ಜ್ಯೋತಿ ಎನ್ನುವವರು ಚಿಕಿತ್ಸೆ ನೀಡಿದ್ದರು.

ಇತ್ತ ಬಾಲಕನಿಗೆ ಫೆವಿಕ್ವಿಕ್ ಯಾಕೆ ಹಾಕಿದ್ದೀರಿ ಅಂತ ಕೇಳಿದರೆ ಸ್ಟಿಚ್ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗ್ತಾ ಇತ್ತು ಎಂದು ಹೇಳಿದ್ದಾರೆ. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ ಎಂದು ನರ್ಸ್ ಜ್ಯೋತಿ ಹೇಳಿದ್ದಾರೆ.
ಸಮಜಾಯಿಷಿ ನೀಡಿದ ನರ್ಸ್!
“ನನಗೆ ತಿಳಿದ ಮಟ್ಟಿಗೆ ನಾನು ಚಿಕಿತ್ಸೆ ಮಾಡಿದ್ದೇನೆ. ನೀವು ಫೆವಿಕ್ವಿಕ್ ಹಚ್ಚಬೇಡಿ ನಾವು ಮುಂದೆ ಹೋಗುತ್ತೇವೆ ಅಂದಿದ್ದರೆ ಬೇರೆ ಕಡೆಗೆ ರೆಫರ್ ಮಾಡುತ್ತಿದ್ದೆವು” ನರ್ಸ್ ಸಮಜಾಯಿಷಿ ನೀಡಿದ್ದಾರೆ.
ನರ್ಸ್ ಜ್ಯೋತಿ ನೀಡಿರುವ ವಿಡಿಯೋ ಹೇಳಿಕೆಯನ್ನು ಮೊಬೈಲ್‌ನಲ್ಲಿ ಬಾಲಕನ ಪೋಷಕರು ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ಬಾಲಕನ ಪೋಷಕರು ದೂರು ನೀಡಿದ್ದಾರೆ.
ಈ ಬಗ್ಗೆ ವರದಿ ಪಡೆದು ಕ್ರಮ ಜರುಗಿಸಲು ಡಿ.ಹೆಚ್ ಒ ರಾಜೇಶ್ ಸುರಗಿಹಳ್ಳಿ ಮುಂದಾಗಿದ್ದು, ಹಾವೇರಿ ತಾಲೂಕು ಗುತ್ತಲ ಆರೋಗ್ಯ ಸಂಸ್ಥೆಗೆ ನಿಯೋಜನೆ ಮಾಡಲು ಡಿಹೆಚ್‌ಒ ಆದೇಶಿಸಿದ್ದಾರೆ. ಬಾಲಕನ ಪೋಷಕರು ದೂರು ನೀಡಿದ್ದರೂ ಕೂಡ ನರ್ಸ್ ಅನ್ನು ಅಮಾನತು ಮಾಡದೇ ಬೇರೆಡೆಗೆ ವರ್ಗಾವಣೆ ಮಾಡಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅನುಮತಿಸಿ: ಸಾರಿಗೆ ಸಚಿವರಿಗೆ ಆರೋಗ್ಯ ಸಚಿವ ಗುಂಡೂರಾವ್ ಪತ್ರ
ಈ ಬಗ್ಗೆ ಮಾಹಿತಿ ನೀಡಿರುವ ಪೋಷಕರು, “ಕಳೆದ ಜನವರಿ 14 ರಂದು ನಡೆದ ಘಟನೆ ಇದು. ಮಗ ಗುರುಕಿಶನ್ ಆಟ ಆಡುವಾಗ ಗುರುಕಿಶನ್ ಕೆನ್ನೆಗೆ ಗಾಯ ಮಾಡಿಕೊಂಡಿದ್ದ. ಮುಖದ ಮೇಲೆ ಮೂರು ಹೊಲಿಗೆ ಹಾಕುವಷ್ಟು ಗಾಯವಾಗಿತ್ತು. ಕೂಡಲೆ ಆತನನ್ನು ಹಾನಗಲ್‌ನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದೆವು. ಇದಾದ ಬಳಿಕ ನರ್ಸ್ ಬಾಲಕನ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಗಮ್ ಹಾಕಿ ಬ್ಯಾಂಡೇಜ್ ಅಂಟಿಸಿದ್ದಾರೆ. ಅವರು ಅಂಟಿಸಿದ ಬಳಿಕವಷ್ಟೇ ನಮಗೆ ಗೊತ್ತಾಯಿತು. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ಕೊಟ್ಟರೂ ಸರಿಯಾದ ಕ್ರಮ ಜರುಗಿಸಿಲ್ಲ. ಮಗನ ಮುಖದ ಗಾಯಕ್ಕೆ ಹಾಕಿರುವ ಫೆವಿಕ್ವಿಕ್‌ನಿಂದ ಏನಾದರೂ ಸೆಪ್ಟಿಕ್ ಆಗಿ, ಗಾಯ ಉಲ್ಬಣಗೊಂಡರೆ ಯಾರು ಹೊಣೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಇಲಾಖೆಯ ಅಧಿಕಾರಿಗಳು ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಪೋಷಕರು ಒತ್ತಾಯಿಸಿದ್ದಾರೆ.
