ಬಿಜೆಪಿಯ ರೈತ ವಿರೋಧಿ ಕಾಯ್ದೆಯನ್ನು ರದ್ದು ಮಾಡುವುದಾಗಿ ಹೇಳಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅದೇ ಕಾಯ್ದೆಯನ್ನು ಮುಂದುವರೆಸಿದೆ ಎಂದು ರೈತ ಸಂಘಟನೆಗಳು ಆರೋಪಿಸಿದೆ. ಈ ನಿಟ್ಟಿನಲ್ಲಿ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುರ್ತು ಬಹಿರಂಗ ಪತ್ರವನ್ನು ಬರೆದಿದ್ದು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವಂತೆ ತಿಳಿಸಿದ್ದಾರೆ.
ನಿನ್ನೆ ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿ ‘ರೈತರ ಆದಾಯಕ್ಕೆ ಹೆಚ್ಚಳ: ಹಳೆ ಕಾಯ್ದೆಗೆ ಜೋತುಬಿದ್ದ ಸರ್ಕಾರ’ ಎಂಬ ಶೀರ್ಷಿಕೆಯಲ್ಲಿ ಲೇಖನವೊಂದು ಪ್ರಕಟವಾಗಿತ್ತು. ಈ ಲೇಖನವನ್ನು ಓದಿ ನಾವು ಆಘಾತಕ್ಕೆ ಒಳಗಾಗಿದ್ದೇವೆ. ರೈತರ ಆದಾಯ ಹೆಚ್ಚಿಸುವ ಹೆಸರಿನಲ್ಲಿ ಬಿಜೆಪಿ ಸರ್ಕಾರ ರೂಪಿಸಿದ ನೀತಿಗಳನ್ನೇ ಯಥಾವತ್ ಜಾರಿಗೊಳಿಸುವ ಮಾರ್ಗಸೂಚಿಯನ್ನೇ ಕಾಂಗ್ರೆಸ್ ಸರ್ಕಾರವೂ ಪಾಲಿಸುತ್ತಿರುವ ಸ್ಪಷ್ಟ ಸಾಕ್ಷ್ಯ ಇದರಲ್ಲಿದೆ ಎಂದು ಕರ್ನಾಟಕ ರೈತ ಸಂಘಟನೆಗಳು ಬಹಿರಂಗ ಪತ್ರದಲ್ಲಿ ಬರೆದಿದೆ.
ಇದನ್ನು ಓದಿದ್ದೀರಾ? ಫೆ. 5ರಂದು ಕೇಂದ್ರ ಬಜೆಟ್ ಪ್ರತಿ ಸುಟ್ಟು ಐಕ್ಯ ಪ್ರತಿಭಟನೆ; ಕರೆ ನೀಡಿದ ರೈತ ಸಂಘಟನೆಗಳು
“ಇತ್ತೀಚೆಗೆ ಬೆಲೆ ಆಯೋಗದ ಸಭೆ ನಡೆದಿದೆ. ಅದರಲ್ಲೂ ಇವುಗಳನ್ನೇ ಮಾನದಂಡವನ್ನಾಗಿಸಲಾಗಿದೆ. ಚರ್ಚೆ ನಡೆಸಲಾಗಿದೆ. ಸರ್ಕಾರದ ನಿಲುವು ಇದೇ ಆಗಿದ್ದರೆ ಇದು ರೈತಕುಲಕ್ಕೆ ಮಾಡುತ್ತಿರುವ ಮಹಾದ್ರೋಹವಾಗಿದೆ. ನಾವಿದನ್ನು ಉಗ್ರವಾಗಿ ಪ್ರತಿಭಟಿಸಿ ಬೀದಿಗಿಳಿಯಬೇಕಾಗುತ್ತದೆ. ಮುಂದುವರೆಯುವ ಮುನ್ನ ನಿಮ್ಮಿಂದ ಸ್ಪಷ್ಟನೆ ಪಡೆಯಲು ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ” ಎಂದು ರೈತ ಸಂಘಟನೆಗಳು ತಿಳಿಸಿವೆ.
ಬಹಿರಂಗ ಪತ್ರದಲ್ಲಿ ಬೇರೇನಿದೆ?
ಬಿಜೆಪಿಯು ರೈತರ ಆದಾಯವನ್ನು ದ್ವಿಗುಣಗೊಳಿಸುವ ಬೋಗಸ್ ಮಾತುಗಳನ್ನು ಆಡುತ್ತಾ ಕೃಷಿ ಭೂಮಿಯನ್ನು, ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರವನ್ನು ಮಾಡುತ್ತಿದೆ. ಅದರ ವಿರುದ್ಧವಾಗಿ ದೇಶದ 562 ರೈತ ಸಂಘಟನೆಗಳು ಒಗ್ಗೂಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಐತಿಹಾಸಿಕ ದೆಹಲಿ ರೈತ ಹೋರಾಟವನ್ನು ನಡೆಸಿತ್ತು. ಈ ಹೋರಾಟದಲ್ಲಿ ಏಳು ನೂರಕ್ಕೂ ಹೆಚ್ಚು ರೈತರು ಪ್ರಾಣ ತ್ಯಾಗ ಮಾಡಿದರು.
ಕಡೆಗೂ ಬಗ್ಗಿದ ಕೇಂದ್ರ ಸರ್ಕಾರ ಅದನ್ನು ವಾಪಾಸ್ ತೆಗೆದುಕೊಂಡಿತು. ಲಿಖಿತ ಭರವಸೆಗಳನ್ನು ರೈತರಿಗೆ ನೀಡಿತು. ಆದರೆ ಯಾವೊಂದು ಭರವಸೆಯನ್ನೂ ಈಡೇರಿಸಲಿಲ್ಲ. ಬದಲಿಗೆ ತಾನಿದ್ದ ರಾಜ್ಯ ಸರ್ಕಾರಗಳಲ್ಲಿ ಅವನ್ನು ಜಾರಿ ಮಾಡಿಸುವ ಕೆಲಸ ಮುಂದುವರೆಸಿತು. ಅದರ ಭಾಗವಾಗಿಯೇ ಕರ್ನಾಟಕದಲ್ಲಿಯೂ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ಮಾಡಿತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸಿತು.
ಇದನ್ನು ಓದಿದ್ದೀರಾ? ಬಜೆಟ್‌ನಲ್ಲಿ ಕೃಷಿಗೆ ಆದ್ಯತೆ ನೀಡಬೇಕು: ರೈತ ಸಂಘದಿಂದ ಸಿಎಂ, ಸಚಿವರಿಗೆ ಮನವಿ
ರೈತರು ಬೀದಿಗಿಳಿದಾಗ ಕಾಂಗ್ರೆಸ್ ನಾಯಕರು ರೈತರೊಂದಿಗೆ ಕೂತರು ಹೋರಾಟ ಮಾಡೋಣ ಎಂದರು. 2023 ರ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ‘ಬಿಜೆಪಿ ಸರ್ಕಾರ ತಂದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ ರೈತರ ಮೇಲೆ ಹಾಕಿರುವ ರಾಜಕೀಯ ಪ್ರೇರಿತ ಕೇಸುಗಳನ್ನು ತೆಗೆಯುವ, ಎಂಎಸ್‌ಪಿಯನ್ನು ಜಾರಿ ಮಾಡುವ, ಬಡ್ಡಿ ರಹಿತ ಸಾಲದ ಪ್ರಮಾಣ ಹೆಚ್ಚಿಸುವ, ಹೀಗೆ ಮುಂತಾದ ಅನೇಕ ವಾಗ್ದಾನಗಳನ್ನು ಕಾಂಗ್ರೆಸ್ ಮಾಡಿತು. ಆದರೆ ಈ ಯಾವ ಭರವಸೆಗಳನ್ನೂ ಸರ್ಕಾರ ಈಡೇರಿಸಿಲ್ಲ ಎಂದು ರೈತ ಸಂಘಟನೆಗಳು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿವೆ.
ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾಯ್ದೆಗಳನ್ನು ಹಾಗೇ ಮುಂದುವರೆಸಿದೆ. ಬಿಜೆಪಿ ನೇಮಿಸಿದ್ದ ಬೆಲೆ ಆಯೋಗವನ್ನೇ ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಿದೆ. ಬಿಜೆಪಿ ನೀಡಿದ ಮಾರ್ಗ ಸೂಚಿಗಳನ್ನೇ ಕಾಂಗ್ರೆಸ್ ಸರ್ಕಾರವು ನೀಡಿದೆ. ಅದರಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮಾಡಿದ [ರೈತರ ಹೋರಾಟದಿಂದಾಗಿ ಹಿಂದಕ್ಕೂ, ತೆಗೆದುಕೊಂಡಿದ್ದ), ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ತಿದ್ದುಪಡಿ ಕಾಯ್ದೆಗಳನ್ನೇ ಉಲ್ಲೇಖಿಸಿ ಇವನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಏನೆಲ್ಲಾ ಮಾಡಬೇಕು ಎಂದು ಅಧ್ಯಯನ ಮಾಡಿ ಶಿಫಾರಸು ಮಾಡಿ ಎಂದಿದ್ದೀರಿ, ಎಂಎಸ್‌ಪಿ ಜಾರಿ ಮಾಡುವ, ಸರ್ಕಾರ ರೈತರ ಸಹಾಯಕ್ಕೆ ಬರುವ ಒಂದೇ ಒಂದು ಮಾತೂ ಸಹ ಇದರಲ್ಲಿ ಇಲ್ಲ. ಇದು ನಮಗೆ ಅಪಾರ ನೋವು ಮತ್ತು ಆಘಾತ ತಂದಿದೆ. ಇದಕ್ಕೆ ಕೂಡಲೇ ಸರ್ಕಾರ ಉತ್ತರ ನೀಡಲೇಬೇಕಿದೆ ಎಂದು ಕರ್ನಾಟಕ ರೈತ ಸಂಘಟನೆಗಳು ಒತ್ತಾಯಿಸಿದೆ.

ಇದು ಗೊದಿ ಮಿಡಿಯ ಅಥವ ಸಿದ್ದು ಮಿಡಿಯ ಸುದ್ದಿ ಯಂತೆ ಇದೆ.
ಯಾವ ಸಂಘಟನೆ ಹೆಸರಿಲ್ಲ ಮಖಂಡರ ಕಟೋ ಇಲ್ಲ. ಸರಕಾರದ ನಿಲುವು ಇಲ್ಲ. ಸಿದ್ರಾಮಣ್ಣ ವಿರುದ್ಧ ಗೂಬೆ ಕೂರಿಸುವ ವಿಫಲ ಯತ್ನ ಇದಾಗಿದೆ