40 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಶಾಲಾ ವಾಹನವೊಂದು ಪಲ್ಟಿಯಾಗಿದ್ದು, ಚಕ್ರಗಳ ಅಡಿಗೆ ಸಿಲುಕಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯ ಚೋಮು ಪ್ರದೇಶದಲ್ಲಿ ನಡೆದಿದೆ.
ಖಾಸಗಿ ಶಾಲೆಯ ಬಸ್ ವಿದ್ಯಾರ್ಥಿಗಳನ್ನು ಹೊತ್ತು, ಶಾಲೆಗೆ ತೆರಳುತ್ತಿತ್ತು. ಈ ವೇಳೆ, ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
“ಬಸ್ ಗಂಟೆಗೆ ಸುಮಾರು 60-70 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಇದ್ದಕ್ಕಿದಂತೆ ಸ್ಕಿಡ್ ಆಗಿ ಪಲ್ಟಿಯಾಯಿತು. ಸ್ಥಳೀಯರೆಲ್ಲರೂ ಬಸ್ನ ಕಿಟಕಿ ಗಾಜುಗಳನ್ನು ಒಡೆದು ವಿದ್ಯಾರ್ಥಿಗಳನ್ನು ಹೊರ ತಂದಿದ್ದೇವೆ. ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಲಾಗಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಘಟನೆಯ ನಂತರ, ಶಾಲಾ ವಾಹನಗಳನ್ನು ವೇಗವಾಗಿ ಚಲಾಯಿಸುವುದನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.