ಬಿಜೆಪಿಯಲ್ಲಿ ಕೆಲವು ಮಂದಿ ಮದ್ದು ಗುಂಡಿಗೆ ಸಗಣಿ ಬಗಡ ಸುರಿಯುವವರು ಇದ್ದಾರೆ. ಇಂತಹ ಕಪಟಿಗಳಿಂದ ನಾನು ಹಾಲು ಒಕ್ಕೂಟ ಚುನಾವಣೆ ಸೋತೆ ಎಂದು ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಶೇಖರ್ ಕಿಡಿಕಾರಿದರು.
ಗುಬ್ಬಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷವನ್ನೇ ಮುಂದಿಟ್ಟುಕೊಂಡ ಬಿಳಿ ಹೋರಿ ಕರಿ ಹೋರಿ ಹಾಗೂ ತಂಡ ಸ್ವಾರ್ಥಿಗಳು ಹಾಗೂ ಮೋಸಗಾರರು ಆಗಿದ್ದಾರೆ. ಈಗ ನಿಮ್ಮ ಬಳಿ ಬಂದಿದ್ದಾರೆ. ನಾಳೆ ನಿಮ್ಮ ಸೋಲಿಗೂ ಅವರೇ ಕಾರಣ ಆಗುತ್ತಾರೆ ಎಂದು ಶಾಸಕರಿಗೆ ಮಾರ್ಮಿಕ ಪ್ರತಿಕ್ರಿಯೆ ನೀಡಿದರು.
ಹಾಲು ಒಕ್ಕೂಟದ ಚುನಾವಣೆಯಲ್ಲಿ 11 ಮತಗಳು ಹಿಡಿದು ಕೊಡುವ ಪ್ಯಾಕೇಜ್ ಒಪ್ಪಿಕೊಂಡಿದ್ದ ಬಿಜೆಪಿ ಮುಖಂಡರು ಎಂದು ಹೇಳಿಕೊಳ್ಳುವ ಇವರೇ ಈ ಹಿಂದೆ ಬೆಟ್ಟಸ್ವಾಮಿ, ದಿಲೀಪ್ ಕುಮಾರ್ ಸೋಲಿಗೂ ಕಾರಣಕರ್ತರು ಎಂದು ಆರೋಪ ಮಾಡಿದ ಅವರು ಇಂತಹ ಕುತಂತ್ರಿಗಳ ಜೊತೆ ಸೇರಿ ಶಾಸಕರು ಕುತಂತ್ರ, ಅಡ್ಡದಾರಿ ಹಿಡಿದು ನನ್ನ 25 ವರ್ಷ ಸಹಕಾರ ಕ್ಷೇತ್ರದ ರಾಜಕೀಯ ಮುಗಿಸುವ ಪ್ರಯತ್ನ ಮಾಡಿದ್ದೀರಿ. ಇನ್ನುಳಿದ ಮೂರು ವರ್ಷದಲ್ಲಿ ನಿಮ್ಮನ್ನು ಸೋಲಿಸಲು ಇದೇ ತಂತ್ರಗಳ ಬಳಸುವ ಒಬ್ಬ ಗಂಡು ಹುಟ್ಟಿ ಬರುತ್ತಾನೆ. ಇದು ದೇವರ ಆಟ ವಾಸಣ್ಣನವರೇ, ನಾನು ಸೋತಿದ್ದೇನೆ ಅಷ್ಟೇ ಸತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಮ್ಮದೇ ಸರ್ಕಾರ, ನಿಮ್ಮದೇ ಅಧಿಕಾರಿಗಳು, ನಿಮ್ಮದೇ ಶಾಸಕತನ ಇವುಗಳ ಬಳಸಿ ನನ್ನ ಚುನಾವಣೆಗೆ ಸ್ಪರ್ಧಿಸದಂತೆ ಯಾವ ರೀತಿ ಅಸ್ತ್ರಗಳು ಬಳಸಿದ್ದೀರಿ ಎಂಬುದು ತಿಳಿಯಬೇಕು. ನನ್ನ ಮಗಳು ಚನ್ನಯ್ಯನಪಾಳ್ಯ ಹಾಲು ಡೈರಿಗೆ ಕಳೆದ ಒಂದೂವರೆ ವರ್ಷದಿಂದ ಹಾಲು ಹಾಕುತ್ತಿದ್ದಾಳೆ. ಆದರೆ ವಾಸಸ್ಥಳ ವಿಚಾರವಾಗಿ ನೋಟಿಸ್ ಜಾರಿ ಮಾಡಿಸಿದ್ದೀರಿ. ಆದರೆ ನಿಮ್ಮ ಪತ್ನಿ ಅವರು ಎಲ್ಲಿ ವಾಸವಿದ್ದಾರೆ, ಕೇವಲ ನಾಲ್ಕು ತಿಂಗಳು ಹಾಲು ಹಾಕಿ ಅಭ್ಯರ್ಥಿ ಯಾಗಿದ್ದು ಹೇಗೆ ಎಲ್ಲವೂ ಅಧಿಕಾರ ಬಳಕೆ ಜೊತೆಗೆ ಸಹಕಾರ ಸಚಿವರ ಸಹಾಯ. ರಾಜಣ್ಣ ಅವರ ಪೋಟೋ ಇಟ್ಟುಕೊಳ್ಳಬೇಕು ನೂತನ ನಿರ್ದೇಶಕರು. ಬಸವರಾಜು ಅವರ ಪೋಟೋ ವಾಸಣ್ಣ ಅವರು ಇಟ್ಟುಕೊಳ್ಳಬೇಕು ಎಂದು ಕಿಡಿಕಾರಿದರು.
ಚುನಾವಣೆ ಸ್ಪರ್ಧಿಸದಂತೆ ಆಸೆ ಆಮಿಷ ಒಡ್ಡುವ ಕೆಲಸ ಇಲ್ಲಿ ಯಾರು ಮಾಡಿದ್ದು , ನಿಮ್ಮ ಶಿಷ್ಯ ನನ್ನ ಬಳಿ ಬಂದು ಎರಡೂವರೆ ಕೋಟಿಯಿಂದ ಐದು ಕೋಟಿ ಆಮಿಷ ತೋರಿದ್ದು ನಾನು ಎಲ್ಲೂ ಹೇಳಿಲ್ಲ. ಕಾರ್ಯಕ್ರಮವೊಂದರಲ್ಲಿ ನಾನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೆ. ನನ್ನ ಕೆಲಸ ಮಾಡಿಕೊಡಿ ಎಂದು ಹೇಳಿದ್ದೀರಿ. ಯಾವಾಗ ಬಂದಿದ್ದೆ. ಸಾಕ್ಷಿ ಸಮೇತ ಹೇಳಿ ವಾಸಣ್ಣ. ಗುಬ್ಬಿಯಪ್ಪ ದೇವಸ್ಥಾನದ ಮುಂದೆ ಪ್ರಮಾಣ ಮಾಡಲು ನಾನು ಸಿದ್ಧ ಎಂದು ಸವಾಲೆಸೆದರು.
ಒಬ್ಬರನ್ನು ತುಳಿದು ಮತ್ತೊಬ್ಬ ಬೆಳೆಯೋದು ರಾಜಕಾರಣದಲ್ಲಿ ಸರ್ವೇ ಸಾಮಾನ್ಯ. ತಂತ್ರ ಕುತಂತ್ರ, ಅಧಿಕಾರ ದುರ್ಬಳಕೆ ಎಲ್ಲವೂ ಮಾಮೂಲಿ. ಆದರೆ ಗೆದ್ದ ಸಂಭ್ರಮದಲ್ಲಿ ಸೋತವರ ವಿರುದ್ಧ ಸಲ್ಲದ ಆರೋಪ ಸರಿಯಲ್ಲ. 25 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಸಹಕಾರ ಕ್ಷೇತ್ರ ಹೊರತಾಗಿ ರಾಜಕೀಯ ಪಕ್ಷಗಳ ಸಖ್ಯ ಕಡಿಮೆ. ನನ್ನ ಪಾಡಿಗೆ ನಾನು ಸಹಕಾರ ಸಂಘಗಳ ಸೇವೆಯಲ್ಲಿದ್ದೆ. ಆದರೆ ವಾಸಣ್ಣ ಅವರ ಆರೋಪ ಸತ್ಯಕ್ಕೆ ದೂರ. ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಶಿವನಂಜಪ್ಪ ಅವರ ಮನೆ ಸುತ್ತಿದ್ದು ಮರೆತಿದ್ದಾರೆ. ಮೊದಲ ಬಾರಿ ಶಾಸಕರಾಗಿದ್ದು ಕಾಂಗ್ರೆಸ್ ಟಿಕೆಟ್ ಹಂಚಿಕೆ ವ್ಯತ್ಯಾಸದಿಂದ ಎಂಬುದು ಗೊತ್ತಿದೆ. ವೀರಣ್ಣಗೌಡರಿಗೆ ಟಿಕೆಟ್ ತಪ್ಪಿತು. ವೀರಶೈವ ಸಮಾಜಕ್ಕೆ ಹಿನ್ನಲೆ ಪರಮಣ್ಣ ಅವರಿಗೆ ಟಿಕೆಟ್ ಕೊಟ್ಟ ಹಿನ್ನಲೆ ನಿಮ್ಮ ಗೆಲುವು ಆಯ್ತು. ಹೀಗೆ ಯಾವುದೂ ನೇರ ಚುನಾವಣೆ ನೀವು ಮಾಡಿಲ್ಲ. ಹಾಲು ಒಕ್ಕೂಟ ಚುನಾವಣೆ ಕೂಡ ನೇರ ಚುನಾವಣೆ ಎದುರಿಸಿದ್ದರೆ ಇಡೀ ಜಿಲ್ಲೆಯಲ್ಲಿ ನಮ್ಮ ತಂಡ ಗೆಲ್ಲುತ್ತಿತ್ತು ಎಂದು ಗಂಗೇಗೌಡರ ಮನೆಗೆ ಕೈ ಹಾಕಬಾರದಿತ್ತು. ಇದೇ ರೀತಿ ರಾಮೇಗೌಡರ ಮನೆಗೆ ಕೈ ಹಾಕುವ ಒಬ್ಬ ವ್ಯಕ್ತಿ ಬಂದೇ ಬರುತ್ತಾನೆ. ಅಲ್ಲಿಗೆ ನಿಮ್ಮ ರಾಜಕಾರಣ ಲಾಸ್ಟ್. ನನ್ನನ್ನು ತೋಟ ಕಾಯುವ ಕೆಲಸಕ್ಕೆ ಕಳುಹಿಸಿದ್ದಂತೆ ನೀವು ತೋಟ ಕಾಯುವ ಕೆಲಸಕ್ಕೆ ಹೋಗುವುದು ಖಂಡಿತ ಎಂದರು.
ಕಾನೂನು ಪ್ರಕಾರ ಚುನಾವಣೆ ನಡೆದರೆ ಭಾರತಕ್ಕ ಅವರು ಸ್ಪರ್ಧೆ ಮಾಡುವಂತಿಲ್ಲ. ಅಲ್ಲಿ ಸಹಾಯ ಮಾಡಿದ ಸಚಿವ ರಾಜಣ್ಣ ಅವರನ್ನು ಈಗ ಬೈಯುವ ಅಗತ್ಯವಿಲ್ಲ. ಒಬ್ಬರೇ ಕುಳಿತು ಯೋಚನೆ ಮಾಡಿ ವಾಸಣ್ಣನವರೇ, ಬೆಳೆದು ಬಂದ ಹಾದಿಯಲ್ಲಿ ನೀವು ಎಲ್ಲಿಯೂ ನೇರ ಚುನಾವಣೆ ಮಾಡಿಲ್ಲ. ಅಡ್ಡದಾರಿ, ಬೇರೆ ಪಕ್ಷದ ಕುತಂತ್ರಿಗಳ ಬಳಕೆ ಮೂಲಕ ತಂತ್ರ ಮಾಡಿಯೇ ಗೆದ್ದಿರುವುದು ಎಂದು ಛೇಡಿಸಿದ ಅವರು ಈಗ ಎಸ್ಸಿ ಜನಾಂಗದಲ್ಲಿ ವಿಂಗಡಿಸಿ ಮಾತನಾಡುತ್ತಿದ್ದೀರಿ. ಎಡಗೈ ಬಲಗೈ ಎಂಬ ಬೇದ ಭಾವ ಈಗ ಯಾಕೆ ಎಂಬುದು ನನ್ನ ಪ್ರಶ್ನೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಸಬ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಡಗೈ ಸಮುದಾಯವನ್ನು ಕಡೆಗಣಿಸಿದ್ದು ನೀವು. ಬಲಗೈ ಸಮುದಾಯದ ಸುರೇಶ್ ಅವರಿಗೆ ಟಿಕೆಟ್ ನೀಡಿದ್ದೀರಿ. ಬಿಜೆಪಿ ಜಗನ್ನಾಥ್ ಅವರಿಗೆ ಟಿಕೆಟ್ ನೀಡಿತ್ತು. ಈಗ ಎಡಗೈ ಪ್ರಾತಿನಿಧ್ಯ ಮಾತನಾಡುವುದು ಸರಿಯಲ್ಲ ಎಂದರು.