ರಾಜ್ಯದಲ್ಲಿ ಆರೋಗ್ಯ, ಉದ್ಯೋಗ ಮತ್ತು ಶಿಕ್ಷಣದ ಅಭಿವೃದ್ಧಿಗಾಗಿ ರಾಜ್ಯದ 28 ಸಂಸದರು ಪ್ರಧಾನಿ ಮೋದಿಯವರ ಎದುರು ಒಗ್ಗಟ್ಟು ಪ್ರದರ್ಶನಕ್ಕೆ ನಿರ್ಧರಿಸಿದ್ದಾರೆ. ರಾಯಚೂರಿನಲ್ಲಿ ʼಏಮ್ಸ್ʼ ಸ್ಥಾಪನೆ ಮಾಡಲು ಪಕ್ಷಾತೀತವಾಗಿ ಎಲ್ಲಾ ಸಂಸದರು ಒಕ್ಕೊರಲಿನ ಒತ್ತಾಯ ಮಾಡಬೇಕಿದೆ ಎಂದು ಸಂಸದ ಜಿ ಕುಮಾರ ನಾಯಕ ಹೇಳಿದರು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಸಮೀಪ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆ ನಡೆಸಿದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, “ಜವಾಹರಲಾಲ್ ನೆಹರು ಏಮ್ಸ್ ಸಂಸ್ಥೆಯನ್ನು ಹುಟ್ಟು ಹಾಕಿದರು. ನಂತರದ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಪ್ರತಿಯೊಂದು ರಾಜ್ಯದಲ್ಲಿ ಏಮ್ಸ್ ಸ್ಥಾಪನೆ ಮಾಡಿವೆ. ಕರ್ನಾಟಕ ಸುತ್ತಲೂ ಇರುವ ಎಲ್ಲಾ ರಾಜ್ಯಗಳಲ್ಲಿ ಏಮ್ಸ್ ಸ್ಥಾಪನೆಯಾಗಿವೆ. ಆದರೆ ಕರ್ನಾಟಕಕ್ಕೆ ಮಾತ್ರ ಏಮ್ಸ್ ನೀಡಲು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ದೇಶಕ್ಕೆ ಅತಿ ಹೆಚ್ಚಿನದಾಗಿ ಚಿನ್ನ ಉತ್ಪಾದನೆ, ವಿದ್ಯುತ್ ಒದಗಿಸುತ್ತಿರುವ ಜಿಲ್ಲೆ ರಾಯಚೂರು. ಆದರೆ ಅಭಿವೃದ್ಧಿ, ಆರೋಗ್ಯದ ವಿಷಯಕ್ಕೆ ಜಿಲ್ಲೆಯನ್ನು ಪರಿಗಣಿಸುತ್ತಿಲ್ಲ” ಎಂದು ಆಕ್ರೋಶ ಹೊರಹಾಕಿದರು.

“ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಘೋಷಣೆ ಮಾಡಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರಬೇಕು. ರಾಜ್ಯದಲ್ಲಿ 28 ಸಂಸದರಿದ್ದು, 19 ಮಂದಿ ಬಿಜೆಪಿ ಸಂಸದರ ಪೈಕಿ 5 ಜನ ಕೇಂದ್ರ ಮಂತ್ರಿಗಳಿದ್ದಾರೆ. ಆದರೆ ಆ ಮಂತ್ರಿಗಳು ರಾಜ್ಯದ ಮಂತ್ರಿಗಳಾಗಿ ರಾಜ್ಯಕ್ಕೆ ಅನುದಾನ ಪ್ಯಾಕೇಜ್ ತರುವ ಕೆಲಸ ಮಾಡುತ್ತಿಲ್ಲ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಅಯೋಧ್ಯೆಯ ದಲಿತ ಯುವತಿ ಹತ್ಯೆ; ಕಠಿಣ ಕ್ರಮಕ್ಕೆ ಮಾದಿಗ ಹೋರಾಟ ಸಮಿತಿ ಒತ್ತಾಯ
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಯುವ ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಏಮ್ಸ್ ಹೋರಾಟ ಸಮಿತಿ ಸಂಚಾಲಕ ಬಸವರಾಜ ಕಳಸ, ಪಾಲಿಕೆ ಉಪಾಧ್ಯಕ್ಷ ಸಾಜೀದ್ ಸಮೀರ್, ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಪಾಟೀಲ್, ಕೆಪಿಸಿಸಿ ಕಾರ್ಯದರ್ಶಿ ಕೆ.ಶಾಂತಪ್ಪ, ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಗಿರಿ, ಡಾ.ರಾಮಪ್ಪ, ರಾಕೇಶ ರಾಜಲಬಂಡಾ, ಪೂಜಾರಿ, ಬಾಬುರಾವ್ ಶೇಗುಣಸಿ, ಎನ್ ಮಹಾವೀರ, ಅಶೋಕ ಕುಮಾರ ಜೈನ್, ಆರ್ ಕೆ ಹುಡಗಿ, ಲಕ್ಷ್ಮಣ ಗಸ್ತಿ, ಚಂದ್ರಶೇಖರ, ವಿನಯ ಮಾಳಗೆ, ಡಾ.ಬಸವರಾಜ ಕುಮನೂರು, ವೈಜನಾಥ ಪಾಟೀಲ್ ತುಮಕೂರು, ಚಂದ್ರಶೇಖರ ಪಾಟೀಲ್, ರೋಹನ್ ಕುಮಾರ, ಡಾ. ರಜಾಕ ಉಸ್ತಾದ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ರೈತ, ಕನ್ನಡ ಪರ, ದಲಿತ ಪರ ಶಿಕ್ಷಣ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

