ತಿರುಪತಿ ದೇವಾಲಯದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನಮ್ ತನ್ನ 18 ಹಿಂದೂಯೇತರ ಉದ್ಯೋಗಿಗಳ ವಿರುದ್ಧ ಕ್ರಮವನ್ನು ಕೈಗೊಂಡಿದೆ. ತಾವು ದೇವಾಲಯದಲ್ಲಿ ಉದ್ಯೋಗಿಯಾಗಿ ಸೇರುವ ವೇಳೆ ಹಿಂದೂಯೇತರ ಸಂಪ್ರದಾಯವನ್ನು ಪಾಲಿಸದೆ, ಹಿಂದೂ ನಂಬಿಕೆಗಳನ್ನು ಪಾಲಿಸುವುದಾಗಿ ಎಂದು ಪ್ರಮಾಣ ಮಾಡಿದ್ದರೂ ಕೂಡಾ ಅದನ್ನು ತಪ್ಪಿ ನಡೆದಿದ್ದಾರೆ ಎಂಬ ಕಾರಣಕ್ಕೆ ಟಿಟಿಡಿ ಕ್ರಮಕ್ಕೆ ಆದೇಶಿಸಿದೆ ಎಂದು ವರದಿಯಾಗಿದೆ.
ಈ ಎಲ್ಲಾ 18 ಉದ್ಯೋಗಿಗಳಿಗೂ ಕೂಡಾ ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ದೇವಾಲಯಕ್ಕೆ ಸಂಬಂಧಿಸದ ವಿಭಾಗಕ್ಕೆ ವರ್ಗಾಯಿಸುವಂತೆ ಆದೇಶಿಸಲಾಗಿದೆ. ಹಾಗೆಯೇ ದೇವಾಲಯದ ಆಧ್ಯಾತ್ಮಿಕ ಪಾವಿತ್ರತ್ಯೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಟಿಟಿಡಿ ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬ್ಯಾನರ್ನಲ್ಲಿ ಹಿಂದೂ ಹುಲಿಗಳೆಂದು ಸ್ವಾಗತ
ಈ ಉದ್ಯೋಗಿಗಳನ್ನು ಇತರೆ ಸರ್ಕಾರಿ ವಿಭಾಗಗಳಿಗೆ ವರ್ಗಾಯಿಸುವುದೇ ಅಥವಾ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯಡಿಯಲ್ಲಿ ನಿವೃತ್ತಿಗೊಳಿಸುವುದೇ ಎಂಬ ಬಗ್ಗೆ ಟಿಟಿಡಿ ಇತ್ತೀಚೆಗೆ ಸಭೆ ನಡೆಸಿದೆ ಎಂದು ವರದಿಯಾಗಿದೆ.
ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಈ ಉದ್ಯೋಗಿಗಳು ಹಿಂದೂಯೇತರ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಇದರಿಂದ ದೇವಾಲಯದ ಪಾವಿತ್ರತ್ಯೆಗೆ ಧಕ್ಕೆ ಉಂಟಾಗಿದೆ ಎಂದು ಟಿಟಿಡಿ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ಟಿಟಿಡಿ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತ ಪ್ರಜಾಪ್ರಭುತ್ವ ದೇಶವಾಗಿರುವಾಗ ತಾವು ಜನಿಸಿದಾಗಿನಿಂದ ಪಾಲಿಸುತ್ತಾ ಬಂದ ಸಂಪ್ರದಾಯವನ್ನು ಬಿಟ್ಟು ಹಿಂದೂ ಧರ್ಮವನ್ನು ಮಾತ್ರ ಪಾಲಿಸಬೇಕು ಎಂಬ ನಿಯಮವನ್ನು ಅನೇಕ ನೆಟ್ಟಿಗರು ಟೀಕಿಸಿದ್ದಾರೆ. ಇದು ಉದ್ಯೋಗಿಗಳ ಮೇಲೆ ಧಾರ್ಮಿಕ ಹೇರಿಕೆ ಮಾಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
