ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಕೊನೆಯಾಗಿದ್ದು, ಫೆಬ್ರವರಿ 8ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇಂದು ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ ಗೆಲುವು ಎಂದು ಹೇಳಿದೆ.
ಎಎಪಿಗೆ ಸ್ಪಷ್ಟ ಬಹುಮತ ಎಂದು ದೈನಿಕ್ ಭಾಸ್ಕರ್ ಹೇಳಿದರೆ, ಉಳಿದೆಲ್ಲ ಸಮೀಕ್ಷೆಗಳು ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದೆ. ಆಮ್ ಆದ್ಮಿ ಪಕ್ಷವು 43-47ರಷ್ಟು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೈನಿಕ್ ಭಾಸ್ಕರ್ ಬಹುಮತ ಪಡೆಯಲಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | 15 ಗ್ಯಾರಂಟಿಗಳನ್ನು ಒಳಗೊಂಡ ಎಎಪಿ ಪ್ರಣಾಳಿಕೆ ಬಿಡುಗಡೆ
ಮ್ಯಾಟ್ರಿಕ್ಸ್ ಪ್ರಕಾರ 32-37 ಎಎಪಿ, 35-40 ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲೂ ಗೆಲುವು ಸಾಧಿಸದು. ಇನ್ನು ಜೆವಿಸಿ ಪೋಲ್ ಪ್ರಕಾರ ಎಎಪಿ 22-31, ಬಿಜೆಪಿ 39-45, ಕಾಂಗ್ರೆಸ್ 0-2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು.
ಎಎಪಿ ಬರೀ 10-19, ಬಿಜೆಪಿ 51-60 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಹೇಳಿದೆ. ಇನ್ನು ಪಿ-ಮಾರ್‌ಕ್ಯೂ 21-31 ಎಎಪಿ, 39-49 ಬಿಜೆಪಿ, 0-1ರಷ್ಟು ಕ್ಷೇತ್ರಗಳು ಕಾಂಗ್ರೆಸ್ ಪಾಳಾಗಲಿದೆ ಎಂದು ಹೇಳಿದೆ. ಈ ನಡುವೆ ಪೀಪಲ್ಸ್ ಇನ್‌ಸೈಟ್ 25-29 ಕ್ಷೇತ್ರದಲ್ಲಿ ಎಎಪಿ, 40-44 ಕ್ಷೇತ್ರದಲ್ಲಿ ಬಿಜೆಪಿ, ಕೇವಲ ಒಂದರಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದಿದೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಉಚಿತ ಯೋಜನೆಗಳ ಸಮರ; ಗದ್ದುಗೆ ಯಾರಿಗೆ?
ಕಳೆದ ಎರಡು ಬಾರಿ ಎಎಪಿ ದೆಹಲಿಯಲ್ಲಿ ಅಧಿಕಾರವನ್ನು ಪಡೆದುಕೊಂಡಿದೆ. ಈ ಬಾರಿಯೂ ಸಿಎಂ ಕುರ್ಚಿಯನ್ನು ತನ್ನದಾಗಿಸಿಕೊಳ್ಳಲು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಯತ್ನ ನಡೆಸುತ್ತಿದ್ದಾರೆ. ಈ ನಡುವೆ ಬಹುತೇಕ ಸಮೀಕ್ಷೆಗಳು ಈ ಬಾರಿ ಅಧಿಕಾರ ಎಎಪಿ ಕೈ ಜಾರಿ ಬಿಜೆಪಿ ತೆಕ್ಕೆಗೆ ಸೇರಲಿದೆ ಎಂದಿದೆ. ಕಾಂಗ್ರೆಸ್ ಒಂದೆರಡು ಕ್ಷೇತ್ರದಲ್ಲಿ ಮಾತ್ರ ಗೆಲ್ಲಬಹುದು ಎಂದಿದೆ.
2013ರಲ್ಲಿ ಮೊದಲ ಬಾರಿಗೆ ಎಎಪಿ ದೆಹಲಿ ಚುನಾವಣಾ ರಂಗಕ್ಕೆ ಪ್ರವೇಶ ಪಡೆಯಿತು. 2013, 2015 ಮತ್ತು 2020ರಲ್ಲಿ ಎಎಪಿ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿತ್ತು. 2013ರಲ್ಲಿ ಎಎಪಿ ಉತ್ತಮ ಫಲಿತಾಂಶ ಪಡೆದರೂ ಗದ್ದುಗೆ ಪಡೆಯಲು ಸಫಲವಾಗಿಲ್ಲ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿ ಸರ್ಕಾರ ರಚಿಸಿತು.
ಆದರೆ 2015 ಮತ್ತು 2020ರಲ್ಲಿ ಎಎಪಿ ಸ್ಪಷ್ಟ ಬಹುಮತವನ್ನು ಪಡೆದು ಸರ್ಕಾರ ರಚಿಸಿಕೊಂಡಿದೆ. ಆದರೆ ಈ ಬಾರಿ ಚುನಾವಣಾ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಲಭಿಸಲಿದೆ ಎಂದು ಹೇಳಿದೆ. ಸಮೀಕ್ಷೆ ನಿಜವಾಗುತ್ತಾ ಎಂಬುದು ಫೆಬ್ರವರಿ 8ರಂದು ತಿಳಿಯಲಿದೆ.
