ಮೋದಿಯವರ ವಿಕಸಿತ ಭಾರತದ ಕನಸು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿರುವುದು ಈ ಬಾರಿಯ ಕೇಂದ್ರ ಬಜೆಟ್ ನೋಡಿದರೆ ಗೊತ್ತಾಗುತ್ತದೆ. ಅವರ ವಿಕಸಿತ ಭಾರತ ದೊಡ್ಡ ದೊಡ್ಡ ಬಂಡವಾಳಶಾಹಿಗಳದ್ದೇ ಹೊರತು, ರೈತ, ಕೃಷಿ, ಕಾರ್ಮಿಕರಿಗಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಎಐಕೆಕೆಎಂಎಸ್ ಸಂಘದ ಜಿಲ್ಲಾಧ್ಯಕ್ಷ ಗೋವಿಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಳಾರಿ ನಗರದ ತಾಲೂಕು ಕಚೇರಿ ಮುಂಭಾಗ ಎಐಕೆಕೆಎಂಎಸ್ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ 2025-2026ನೇ ಸಾಲಿನ ಬಜೆಟ್ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸುತ್ತ ಮಾತನಾಡಿದರು.
“ಈ ಬಾರಿಯ ಬಜೆಟ್‌ನಲ್ಲಿ ಮನರೇಗಾ ಯೋಜನೆಗೆ ಸುಮಾರು ₹4,000 ಕೋಟಿ, ಕೃಷಿಗೆ ₹4 ಲಕ್ಷ ಕೋಟಿಗಿಂತ ಅಧಿಕ ಹಣ ಕಡಿತ ಗೊಳಿಸಲಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಟಾವಿಗೆ ಬಂದ ಜೋಳದ ಬೆಳೆಗೆ ಬೆಂಕಿ; ₹2 ಲಕ್ಷ ಮೌಲ್ಯ ಬೆಳೆನಾಶ
ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, “ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಆದಾಯವನ್ನು ದುಪ್ಪಟ್ಟು ಮಾಡುವೆವೆಂದು ಹೇಳುತ್ತಲೇ ಇದೆ. ಆದರೆ ನಮ್ಮ ರೈತರ ಬದುಕು ನೋಡಿದರೆ ಎಷ್ಟರ ಮಟ್ಟಿಗೆ ಶ್ರೀಮಂತಗೊಳಿಸಿದ್ದಾರೆ ಎಂಬುದು ತಿಳಿಯುತ್ತದೆ. ಒಟ್ಟಾರೆ ಇಂದು ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ವ್ಯವಸ್ಥೆಯಲ್ಲಿ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಾರೆ. ಇದನ್ನು ನಾವು ಅರ್ಥ ಮಾಡಿಕೊಂಡು ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬಲಿಷ್ಠ ಹೋರಾಟಕಟ್ಟಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ತಾಲೂಕು ಕಾರ್ಯದರ್ಶಿ ಧನರಾಜ, ರೈತ ಹನುಮಂತ, ನಿಂಗಣ್ಣ ಸೇರಿದಂತೆ ಇತರರು ಇದ್ದರು.