ಸ್ವಾಮಿ ವಿವೇಕಾನಂದರ ಚಿಂತನೆಯ ನಿಜವಾದ ವಾರಸುದಾರರು ಎಡಪಂಥೀಯರೇ ಹೊರತು ಬಲಪಂಥೀಯ ಹಿಂದುತ್ವವಾದಿ ಶಕ್ತಿಗಳಲ್ಲ ಎಂದು ಪ್ರಗತಿಪರ ಚಿಂತಕ, ನಿವ್ರತ್ತ ಪ್ರಾಂಶುಪಾಲ ಡಾ.ಎನ್ ಇಸ್ಮಾಯಿಲ್ ಅಭಿಪ್ರಾಯಪಟ್ಟರು.
ವಿವೇಕಾನಂದರ 162ನೇ ಜನ್ಮ ದಿನಾಚರಣೆಯ ಅಂಗವಾಗಿ ಉಳ್ಳಾಲದ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಕುತ್ತಾರಿನ ಮುನ್ನೂರು ಯುವಕ ಮಂಡಲದಲ್ಲಿ ಯುವಜನರ ವಿವೇಕವೂ, ವಿವೇಕಾನಂದರ ಚಿಂತನೆಯೂ ಎಂಬ ವಿಷಯದಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಿವೇಕಾನಂದರು 19ನೇ ಶತಮಾನದ ಭಾರತೀಯ ಪುನರುಜ್ಜೀವನ ಆಂದೋಲನದ ಪ್ರಮುಖ ನೇತಾರರಲ್ಲಿ ಒಬ್ಬರಾಗಿದ್ದರೆ ವಿನಃ ಹಿಂದುತ್ವವಾದಿಗಳು ಪ್ರತಿಪಾದಿಸುತ್ತಿರುವಂತೆ ಕೇವಲ ಸಂಕುಚಿತ ದ್ರಷ್ಠಿಯ ಹಿಂದುತ್ವದ ನೇತಾರರಾಗಿರಲಿಲ್ಲ. ಪ್ರಗತಿಪರ ಚಿಂತನೆಯ ಜಾತ್ಯತೀತ ಭಾವನೆಯ ಅತ್ಯಂತ ಮಾನವೀಯ ಮನಸ್ಸಿನ ವಿವೇಕಾನಂದರು ಭವ್ಯ ಭಾರತದ ಬಗ್ಗೆ ಆಳವಾದ ಚಿಂತನೆ ನಡೆಸಿದ್ದರು” ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ವಕೀಲ ಮನೋಜ್ ವಾಮಂಜೂರು ಪ್ರತಿಕ್ರಿಯಿಸಿ, “ಒಬ್ಬ ಶೂದ್ರನಾಗಿ ಸನ್ಯಾಸದೀಕ್ಷೆ ಪಡೆದ ಸ್ವಾಮಿ ವಿವೇಕಾನಂದರು ಪುರೋಹಿತಶಾಹಿ ವರ್ಗದ ಅನ್ಯಾಯ ಅನಾಚಾರದ ವಿರುದ್ಧ ರಣಕಹಳೆ ಮೊಳಗಿಸಿದ್ದರು. ಮಾತ್ರವಲ್ಲದೆ ಶೂದ್ರರ ಆಡಳಿತದ ಸಿದ್ಧಾಂತವನ್ನು ಮಂಡಿಸಿದ್ದರು. ಅದು ಕಾರ್ಮಿಕ ವರ್ಗದ ಆಳ್ವಿಕೆಯ ಭಾರತೀಯ ರೂಪವಾಗಿತ್ತು. ಅವರೇ ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುವಂತಹ ಭಾರತ ನಿರ್ಮಾಣವಾಗಬೇಕೆಂದು ವಿವೇಕಾನಂದರು ಹಂಬಲಿಸಿದ್ದರು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೀಡಿ ಕಾರ್ಮಿಕರ ಬದುಕಿಗೆ ಸಂಬಂಧಿಸಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದ ಡಾ. ಹರಿಣಾಕ್ಷಿ ಸುವರ್ಣ ಕುಂಪಲ, ಸಮಾಜಸೇವಕ ಬಾಬು ಪಿಲಾರ್, ಮುನ್ನೂರು ಯುವಕ ಮಂಡಲದ ಅಧ್ಯಕ್ಷ ಹರೀಶ್ ಮುಂಡೋಳಿ, ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ದೈಹಿಕ ಶಿಕ್ಷಕ ಜಯಾನಂದ ಅಂಚನ್ ಅವರುಗಳನ್ನು ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ?: ಉಳ್ಳಾಲ | ಮೀನು ಸಂಸ್ಕರಣಾ ಘಟಕಗಳಲ್ಲಿ ಕಲ್ಲಿದ್ದಲು ಬಳಸದಂತೆ ಜಿಲ್ಲಾಧಿಕಾರಿಗೆ ಡಿವೈಎಫ್‌ಐ ಮನವಿ
ಸಂವಾದದಲ್ಲಿ ಹಿರಿಯ ರೈತ ನಾಯಕ ಕೃಷ್ಣಪ್ಪ ಸಾಲ್ಯಾನ್, ಪ್ರಗತಿಪರ ಚಿಂತಕ ರಮೇಶ್ ಉಳ್ಳಾಲ್, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್, ಕಟ್ಟಡ ಕಾರ್ಮಿಕ ಸಂಘದ ಮುಖಂಡ ಜನಾರ್ಧನ ಕುತ್ತಾರ್, ವಕೀಲ ನಿತಿನ್ ಕುತ್ತಾರ್, ಯೆನೆಪೋಯ ಶಿಕ್ಷಣ ಸಂಸ್ಥೆಯ ಉಪಪ್ರಾಂಶುಪಾಲ ಡಾ.ಜೀವನ್ ರಾಜ್ ಕುತ್ತಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
