ಎನ್‌ಸಿಸಿ ಶಿಬಿರಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ಬೆಳಕಿಗೆ ಬಂದು ಆರು ತಿಂಗಳಾದ ಬಳಿಕ, ಪ್ರಕರಣದಲ್ಲಿ ಮೂವರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬರಗೂರು ಸರ್ಕಾರಿ ಶಾಲೆಯ ಮೂವರು ಶಿಕ್ಷಕರನ್ನು ಕೃಷ್ಣಗಿರಿ ಪೊಲೀಸರು ಬಂಧಿಸಿದ್ದಾರೆ. 13 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮಾಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಕಳೆದೊಂದು ತಿಂಗಳಿನಿಂದ ವಿದ್ಯಾರ್ಥಿನಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇತ್ತೀಚೆಗೆ, ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಸಹ ಶಿಕ್ಷಕಿ ಆಕೆಯ ಆರೋಗ್ಯ ವಿಚಾರಿಸಲು ವಿದ್ಯಾರ್ಥಿನಿಯ ಮನೆಗೆ ತೆರಳಿದ್ದರು. ಈ ವೇಳೆ, ಬಾಲಕಿ ತನ್ನ ಮೇಲೆ ಮೂವರು ಶಿಕ್ಷಕರು ಜನವರಿ 2 ಮತ್ತು 3ರಂದು ಅತ್ಯಾಚಾರ ಎಸಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಬಳಿಕ, ಮುಖ್ಯೋಪಾಧ್ಯಾಯ ಮತ್ತು ಬಾಲಕಿಯ ಪೋಷಕರು ಬರಗೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಮೂವರು ಆರೋಪಿ ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 5 (ಎಫ್), ಬಿಎನ್‌ಎಸ್ ಸೆಕ್ಷನ್ 329 (3) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸಂತ್ರಸ್ತ ಬಾಲಕಿಯ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ಶಿಕ್ಷಕರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ತೆರಳಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಟನಾಕಾರು ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.