ಈ ದಿನ ಸಂಪಾದಕೀಯ | ದುರಹಂಕಾರಿ ದೊಡ್ಡಣ್ಣನ ಎದುರು ಮಂಡಿಯೂರಿದ ಮೋದಿ

Date:

Advertisements
ಭಾರತೀಯ ಪ್ರಜೆಗಳನ್ನು ಮೃಗಗಳಿಗಿಂತ ಕಡೆಯಾಗಿ ಕಂಡು ಅವಮಾನಿಸಿದರೂ, ದೇಶದ ರಕ್ಷಣಾ ನೀತಿಗಳನ್ನು ಉಲ್ಲಂಘಿಸಿದರೂ, 56 ಇಂಚಿನ ಎದೆಯ ಮೋದಿಯಲ್ಲಿ ಸಣ್ಣ ಸಿಟ್ಟು-ಸೆಡವು ಕೂಡ ಕಾಣುತ್ತಿಲ್ಲ. ಕೊಲಂಬಿಯಾದಂತಹ ಚಿಕ್ಕ ದೇಶಕ್ಕಿರುವ ಧಮ್ಮು 140 ಕೋಟಿ ಜನಸಂಖ್ಯೆಯ, ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕತೆ ಎಂದು ಹೇಳಿಕೊಳ್ಳುವ ಭಾರತಕ್ಕಿಲ್ಲ.

ಅಮೆರಿಕ ಯುದ್ಧವಿಮಾನ ಭಾರತದ 104 ವಲಸಿಗರನ್ನು ಹೊತ್ತು ಅಮೃತಸರದಲ್ಲಿ ಬುಧವಾರ ಬಂದು ಇಳಿಯಿತು. ಅಂದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರನ್ನು ಹೊರಗಟ್ಟುತ್ತೇನೆ ಎಂದು ಹೇಳಿದ್ದರು, ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕಾರ್ಯರೂಪಕ್ಕೆ ತಂದರು. ಅಂದರೆ ಆಡಿದ್ದನ್ನು ಮಾಡಿ ತೋರಿಸಿದರು.

ಆದರೆ, ಮೊನ್ನೆ ತಾನೆ ಘನತೆವೆತ್ತ ಸಂಸತ್ತಿನಲ್ಲಿ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ದೇಶಮಂಟೆ ಮಟ್ಟಿ ಕಾದುರಾ, ಮನುಷುಲು’ ಎಂಬ ಅಣಿಮುತ್ತುಗಳನ್ನು ಉದುರಿಸಿದ್ದರು. ಈಗ ಅದೇ ದೇಶದ ಪ್ರಜೆಗಳನ್ನು- ಮನುಷ್ಯರನ್ನು ಅಮೆರಿಕ ಸರ್ಕಾರ ಅಮಾನವೀಯವಾಗಿ ನಡೆಸಿಕೊಂಡಿದೆ. ಪ್ರಾಣಿಗಳಿಗಿಂತ ಕಡೆಯಾಗಿ ಕಂಡಿದೆ.

ಟ್ರಂಪ್ ಆಡಿದ್ದನ್ನು ಮಾಡಿ ತೋರಿಸಿದರೆ, ನಮ್ಮ ಕೇಂದ್ರ ಸರ್ಕಾರ ಆಡುವುದು ಒಂದು ಮಾಡುವುದು ಇನ್ನೊಂದು- ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದೆ. 

Advertisements

‘ನಮ್ಮ ಕೈಗೆ ಬೇಡಿ ತೊಡಿಸಲಾಗಿತ್ತು. ಕಾಲುಗಳಿಗೆ ಸರಪಳಿ ಹಾಕಲಾಗಿತ್ತು. ಪ್ರಯಾಣದುದ್ದಕ್ಕೂ ಹೀಗೆ ಇದ್ದೆವು. ಅಮೃತಸರ ಏರ್ಪೋರ್ಟ್‌ನಲ್ಲಿ ಲ್ಯಾಂಡ್ ಆದ ಬಳಿಕವೇ ಅದನ್ನು ತೆಗೆಯಲಾಯಿತು’ ಎಂದು ಅಮೆರಿಕದಿಂದ ಭಾರತಕ್ಕೆ ಗಡೀಪಾರದವರ ಪೈಕಿ ಒಬ್ಬರಾದ ಪಂಜಾಬ್‌ನ ಜಸ್ಪಾಲ್ ಸಿಂಗ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

ಗಡೀಪಾರಾದ 104 ಪ್ರಜೆಗಳ ಪೈಕಿ ಕೆಲವರು ಅಕ್ರಮ ನುಸುಳುಕೋರರಿರಬಹುದು, ಏಜೆನ್ಸಿಗಳಿಗೆ ಹಣ ಕೊಟ್ಟು ಮೋಸ ಹೋಗಿರಬಹುದು, ದಾಖಲೆಗಳನ್ನು ಕಳೆದುಕೊಂಡವರಿರಬಹುದು. ಅಸಲಿಗೆ ಅವರೆಲ್ಲರೂ ಭಾರತೀಯ ಪ್ರಜೆಗಳು. ಇಲ್ಲಿ ಕಳೆದ ಹತ್ತು ವರ್ಷಗಳಿಂದ ದೇಶವನ್ನಾಳುತ್ತಿರುವ ಮೋದಿ, ಉದ್ಯೋಗ ಒದಗಿಸಿದ್ದರೆ ಅವರು ಏಕೆ ಅಮೆರಿಕಾಕ್ಕೆ ಹೋಗುತ್ತಿದ್ದರು?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕುಂಭಮೇಳದ ಕಾಲ್ತುಳಿತದಲ್ಲಿ ಗತಿಸಿದವರ ಮನೆಗಳಿಗೇಕೆ ಧಾವಿಸಲಿಲ್ಲ ಬಿಜೆಪಿ ಹಿಂಡು?

ಇಷ್ಟಾದರೂ ಕೇಂದ್ರ ಸರ್ಕಾರದ ಯಾವೊಬ್ಬ ಸಚಿವರೂ ಭಾರತೀಯ ಪ್ರಜೆಗಳ ಬಗ್ಗೆ ಬಾಯಿ ಬಿಡಲಿಲ್ಲ. ಅಷ್ಟೇಕೆ, ಅಮೆರಿಕದ ಯುದ್ಧ ವಿಮಾನ ಭಾರತದ ರಕ್ಷಣಾ ಇಲಾಖೆಯ ಅನುಮತಿಯಿಲ್ಲದೆ ಬಂದು ಇಳಿದಿದ್ದನ್ನು ಯಾರೂ ಪ್ರಶ್ನಿಸಲಿಲ್ಲ. ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು, ಯುದ್ಧವಿಮಾನ ಬಂದು ಇಳಿದದ್ದು, ಕೇಂದ್ರ ಬಿಜೆಪಿ ಸರ್ಕಾರ ಮೌನ ವಹಿಸಿದ್ದು- ಇದಾವುದೂ ಮಾಧ್ಯಮಗಳಿಗೆ ಸುದ್ದಿ ಅನಿಸಲಿಲ್ಲ, ಪ್ರಶ್ನಿಸಲಿಲ್ಲ.

ಬದಲಿಗೆ, ಪ್ರಧಾನಿ ನರೇಂದ್ರ ಮೋದಿಯವರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದಲ್ಲಿ ಮುಳುಗೇಳುತ್ತಿದ್ದುದನ್ನು ಲೈವ್ ಮಾಡುತ್ತಿದ್ದರು. ದೇಶದ ಮಾಧ್ಯಮಗಳಲ್ಲಿ ಪ್ರಧಾನಿಗಳ ಪುಣ್ಯಸ್ನಾನದ ನೇರ ಪ್ರಸಾರ- ದೆಹಲಿ ಮತದಾನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮರೆಯಲಾಗಿತ್ತು. ಕೇಳಬೇಕಿದ್ದ, ತಡೆಯಬೇಕಿದ್ದ ಚುನಾವಣಾ ಆಯೋಗ ಮಲಗಿ ನಿದ್ರಿಸುತ್ತಿತ್ತು. ಅಂದರೆ, ಮೀಡಿಯಾ ಮತ್ತು ಆಯೋಗದ ನೆರವಿನಿಂದ ಪುಣ್ಯಸ್ನಾನವನ್ನು ಸ್ವಾರ್ಥಕ್ಕಾಗಿ- ಅಧಿಕಾರಕ್ಕಾಗಿ ಬಳಸಿಕೊಳ್ಳಲಾಗಿತ್ತು. ಮೋದಿಗೆ ಅದು ಮುಖ್ಯವಾಗಿತ್ತು. ವಲಸಿಗರ ಗಡೀಪಾರು ಒಲ್ಲದ ವಿಷಯವಾಗಿತ್ತು.

ಕೆನಡಾ, ಮೆಕ್ಸಿಕೊದ ಎಲ್ಲ ಉತ್ತನ್ನಗಳ ಮೇಲೆ ಶೇ. 25ರಷ್ಟು ಹಾಗೂ ಚೀನಾದ ಸರಕುಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. ಅಷ್ಟೇ ಅಲ್ಲ, ಫೆ.4ರಿಂದ ಅನ್ವಯವಾಗುವಂತೆ ಸೂಚಿಸಿದ್ದರು.

ಟ್ರಂಪ್ ಸರಕಾರದ ಸುಂಕ ನೀತಿಗೆ ಈಗ ಅಮೆರಿಕದಲ್ಲಿಯೇ ಅಪಸ್ವರ ಎದ್ದಿದೆ. ‘ಗ್ಯಾಲಿಯಂ, ಜರ್ಮೇನಿಯಂ, ಗ್ರಾಫೈಟ್ ಇತರ ಅನೇಕ ನಿರ್ಣಾಯಕ ಖನಿಜಗಳಿಗಾಗಿ ನಾವು ಚೀನಾವನ್ನು ಅವಲಂಬಿಸಿದ್ದೇವೆ. ಈ ಖನಿಜಗಳಲ್ಲಿ ಹಲವು ಭೂ ಸರ್ವೇಕ್ಷಣಾ ಸಮೀಕ್ಷೆಗೆ ಅಗತ್ಯವಷ್ಟೇ ಅಲ್ಲ, ಅಮೆರಿಕದ ಆರ್ಥಿಕ ಮತ್ತು ರಕ್ಷಣಾ ವಲಯಕ್ಕೆ ತುರ್ತು ಅಗತ್ಯ ವಸ್ತುಗಳಾಗಿವೆ. ಇದು ಚೀನಾ ಮತ್ತು ಅಮೆರಿಕದ ವ್ಯಾಪಾರಕ್ಕೆ ಧಕ್ಕೆಯನ್ನು, ಹೆಚ್ಚು ನಷ್ಟವನ್ನು ಉಂಟುಮಾಡುತ್ತದ’ ಎಂದು ವಿದೇಶಾಂಗ ಇಲಾಖೆಯ ಮಾಜಿ ಅಧಿಕಾರಿ ಮತ್ತು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ ನ್ಯಾಷನಲ್ ಸ್ಟಡೀಸ್ ನಿರ್ದೇಶಕ ಫಿಲಿಪ್ ಲುಕ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಆಮದು ಸುಂಕ ವಿಧಿಸಿರುವ ಅಮೆರಿಕದ ವಿರುದ್ಧ ತಿರುಗಿಬಿದ್ದಿರುವ ಕೆನಡಾ ಮತ್ತು ಮೆಕ್ಸಿಕೋ ಅಮೆರಿಕದ ಉತ್ಪನ್ನಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿವೆ. ಚೀನಾ ಕೂಡ ಅಮೆರಿಕದ ಕಲ್ಲಿದ್ದಲು, ಎಲ್ಎನ್‌ಜಿ ಮೇಲೆ ಶೇ. 15ರಷ್ಟು ಮತ್ತು ಕಚ್ಚಾತೈಲ, ಶಸ್ತಾಸ್ತ್ರಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸುವುದಾಗಿ ಹೇಳಿಕೊಂಡಿದೆ. ತನ್ನ ಭೂಪ್ರದೇಶಕ್ಕೆ ಬರುವ ಅಮೆರಿಕದ ಉತ್ಪನ್ನಗಳಾದ ಬ್ರ್ಯಾಂಡೆಡ್ ಬಟ್ಟೆಗಳ, ಕಾರುಗಳ ಮೇಲೆ ಭಾರಿ ಪ್ರಮಾಣದ ಆಮದು ತೆರಿಗೆ ವಿಧಿಸಿ ಆದೇಶಿಸಿದೆ. ಜೈವಿಕ ತಂತ್ರಜ್ಞಾನ ಕಂಪನಿ ಇಲ್ಯುಮಿನಾವನ್ನು ವಿಶ್ವಾಸಾರ್ಹವಲ್ಲದ ಘಟಕಗಳ ಪಟ್ಟಿಗೆ ಸೇರಿಸುವುದಾಗಿ ಟ್ರಂಪ್ ಸರಕಾರಕ್ಕೆ ತಿರುಗೇಟು ನೀಡಿದೆ.

ಕೆನಡಾ, ಮೆಕ್ಸಿಕೋ, ಚೀನಾಗಳ ಪ್ರತಿರೋಧಕ್ಕೆ ಬೆಚ್ಚಿಬಿದ್ದಿರುವ ಟ್ರಂಪ್, ಆಮದು ಸುಂಕ ಜಾರಿಗೆ 30 ದಿನಗಳ ತಾತ್ಕಾಲಿಕ ತಡೆ ಘೋಷಿಸಿದ್ದಾರೆ.

ಅಷ್ಟೇ ಅಲ್ಲ, ಅತ್ತ ಪುಟ್ಟ ದೇಶಗಳಾದ ಪನಾಮಾ, ಗ್ರೀನ್ ಲ್ಯಾಂಡ್‌ಗಳು ಕೂಡ ಟ್ರಂಪ್ ವಿರುದ್ಧ ತಿರುಗಿಬಿದ್ದಿವೆ. ಅಮೆರಿಕದ ಪಕ್ಕದಲ್ಲಿಯೇ ಇರುವ, ಐದು ಕೋಟಿಯಷ್ಟು ಜನಸಂಖ್ಯೆಯುಳ್ಳ ಪುಟ್ಟ ಕೊಲಂಬಿಯಾ ಕೂಡ ಎದ್ದು ನಿಂತಿದೆ. ಇದರ ಪ್ರಜೆಗಳು ಕಾನೂನುಬಾಹಿರವಾಗಿ ಅಮೆರಿಕಕ್ಕೆ ಹೋಗುವುದು, ಅಮೆರಿಕ ಅವರನ್ನು ವಾಪಸ್ ಕಳಿಸುವುದು ಹೊಸದಲ್ಲ. ಈ ಬಾರಿ ಡೊನಾಲ್ಡ್ ಟ್ರಂಪ್, ಕೈಕೋಳ ಹಾಕಿ ತನ್ನ ಪ್ರಜೆಗಳನ್ನು ವಾಪಸ್ ಕಳಿಸಿದ್ದನ್ನು ನೋಡಿ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆದರಿದ ಟ್ರಂಪ್, ಆ ನಂತರ ವಲಸಿಗ ಕೊಲಂಬಿಯನ್ನರಿಗೆ ಕೋಳ ಹಾಕಿ ಕಳುಹಿಸುವುದನ್ನು ನಿಲ್ಲಿಸಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ನಿದ್ರಿಸುವ ಸಚಿವರು, ಪ್ರಶ್ನಿಸದ ಸಂಸದರು- ಕರ್ನಾಟಕದ ಹಿತ ಕಾಪಾಡುವವರು ಯಾರು?

ಹೀಗೆ… ಡೊನಾಲ್ಡ್ ಟ್ರಂಪ್ ಅವರ ತಿಕ್ಕಲು ನಿರ್ಧಾರಗಳ ವಿರುದ್ಧ ಪ್ರಪಂಚದ ನಾನಾ ದೇಶಗಳ ನಾಯಕರು ತಿರುಗಿಬಿದ್ದಿದ್ದಾರೆ. ಆದರೆ ನಮ್ಮ ಮೋದಿಯವರು, ಅವರನ್ನು ಈಗಲೂ ಪರಮಾಪ್ತ ಗೆಳೆಯ ಎಂದೇ ಭಾವಿಸಿದ್ದಾರೆ. ಭಾರತೀಯ ಪ್ರಜೆಗಳನ್ನು ಮೃಗಗಳಿಗಿಂತ ಕಡೆಯಾಗಿ ಕಂಡು ಅವಮಾನಿಸಿದರೂ, ದೇಶದ ರಕ್ಷಣಾ ನೀತಿಗಳನ್ನು ಉಲ್ಲಂಘಿಸಿದರೂ, 56 ಇಂಚಿನ ಎದೆಯಲ್ಲಿ ಸಣ್ಣ ಸಿಟ್ಟು-ಸೆಡವು ಕೂಡ ಕಾಣುತ್ತಿಲ್ಲ. ಕೊಲಂಬಿಯಾದಂತಹ ಚಿಕ್ಕ ದೇಶಕ್ಕಿರುವ ಧಮ್ಮು 140 ಕೋಟಿ ಜನಸಂಖ್ಯೆಯ, ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕತೆ ಎಂದು ಹೇಳಿಕೊಳ್ಳುವ ಭಾರತಕ್ಕಿಲ್ಲ.

ಅಮೆರಿಕದ ದೊಡ್ಡಣ್ಣ ಟ್ರಂಪ್ ಮಂಡಿಯೂರಿ ಎಂದರೆ, ಮೋದಿ ನೆಲಮಟ್ಟ ಮಲಗಿ ದೇಶದ ಸ್ವಾಭಿಮಾನವನ್ನೂ ಮಣ್ಣುಪಾಲು ಮಾಡುತ್ತಿರುವ ಪರಿ ಇದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X