ಡ್ರಾಪ್ ನೆಪದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಮಹಿಳೆಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಅಪರೂಪದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಬಳಿ ನೆಡೆದಿದೆ.
ಮೂವರು ಮಹಿಳೆಯರು ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದವರು. ಕೆಲಸ ಮುಗಿಸುಕೊಂಡು ಗ್ರಾಮದತ್ತ ಹೊರಟಿದ್ದರು. ಈ ಗ್ರಾಮಕ್ಕೆ ನೇರ ಬಸ್ ಸಂಪರ್ಕವಿಲ್ಲದ ಕಾರಣ ಕಾಕನೂರು ಬಳಿಯ ರಾಣಿ ಚೆನ್ನಮ್ಮ ವಸತಿ ಶಾಲೆಯ ಬಳಿ ಬಸ್ ಇಳಿದು, ಬಳಿಕ ಚಿಕ್ಕಬೆನ್ನೂರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಸಂತೆಬೆನ್ನೂರು ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಜಗದೀಶ್ ಅವರನ್ನು ಸಂಪರ್ಕಿಸಿದಾಗ, “ಕೆಲಸ ಮುಗಿಸಿಕೊಂಡು ಚಿಕ್ಕಬೆನ್ನೂರು ಗ್ರಾಮಕ್ಕೆ ಹೊರಟಿದ್ದ ಮಹಿಳೆಯರನ್ನು ಡ್ರಾಪ್ ಕೊಡುವ ನೆಪದಲ್ಲಿ ಬೈಕ್‌ಗೆ ಹತ್ತಿಸಿಕೊಂಡ ಇಬ್ಬರು ಅಪರಿಚಿತರು ಕಾಕನೂರು ಬಳಿ ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಕಳ್ಳತನವನ್ನು ಪ್ರತಿಭಟಿಸಿದ ರತ್ನಮ್ಮ ಗಾಯಗೊಂಡಿದ್ದು, ಜತೆಯಲ್ಲಿದ್ದ ಗೌರಮ್ಮ ಹಾಗೂ ಶಾಂತಮ್ಮ ಸೇರಿ ಒಬ್ಬ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೊಬ್ಬ ಆರೋಪಿ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾನೆ” ಎಂದು ಪ್ರತಿಕ್ರಿಯಿಸಿದರು.
“ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. ಆರೋಪಿಗಳ ಗುರುತು ಪತೆಯಾಗಿದ್ದು, ಸಧ್ಯದಲ್ಲೇ ಬಂಧಿಸುವ ವಿಶ್ವಾಸವಿದೆ” ಎಂದು ಮಾಹಿತಿ ನೀಡಿದರು.
ಘಟನೆ ಹಿನ್ನೆಲೆ
ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ಕಂಡು ಬೈಕ್‌ನಲ್ಲಿ ಬಂದಿದ್ದ ಅಪರಿಚಿತರು ಡ್ರಾಪ್ ಕೊಡುವುದಾಗಿ ಮಹಿಳೆಯರನ್ನು ನಂಬಿಸಿದ್ದಾರೆ. ಬಳಿಕ ರತ್ನಮ್ಮ ಎಂಬುವವರು ಮಾತ್ರ ಬೈಕ್ ಹತ್ತಿದ್ದಾರೆ.
ಸ್ವಲ್ಪ ದೂರ ಕರೆದುಕೊಂಡು ಹೋದ ಆರೋಪಿಗಳು ಬೈಕ್‌ನಿಂದ ಕೆಳಗಿಳಿಸಿ ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ರತ್ನಮ್ಮ ಕೂಗಿಕೊಂಡಿದ್ದು, ಅಲ್ಲೇ ಹತ್ತಿರದಲ್ಲಿದ್ದ ಶಾಂತಮ್ಮ, ಗೌರಮ್ಮ ಇಬ್ಬರೂ ಓಡಿ ಬಂದಿದ್ದಾರೆ. ಈ ವೇಳೆ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದರೂ ಹಿಂದೆ ಓಡಿದ ರತ್ನಮ್ಮ ಹಿಂದಿನ ಸವಾರನನ್ನು ಬೆನ್ನಟ್ಟ ಹಿಡಿದು ಧೈರ್ಯದಿಂದ ಕೆಳಗೆ ಎಳೆದುಕೊಂಡಿದ್ದಾರೆ. ಘಟನೆ ನೋಡುತ್ತಿದ್ದಂತೆ ಓಡಿ ಬಂದ ಗೌರಮ್ಮ, ಶಾಂತಮ್ಮ ಇಬ್ಬರೂ ಸೇರಿ ಕಳ್ಳತನದ ಆರೋಪಿಯನ್ನು ಹಿಡಿದಿದ್ದು, ಅಲ್ಲೇ ಸುತ್ತಮುತ್ತಲಿದ್ದ ಜನರು, ಸಾರ್ವಜನಿಕರು ಸೇರಿಕೊಂಡು ಪೊಲೀಸರಿಗೆ ಮಾಹಿತಿ ತಿಳಿಸಿ ವಶಕ್ಕೆ ಒಪ್ಪಿಸಿದ್ದಾರೆ.
ಬೈಕ್‌ನಲ್ಲಿದ್ದ ಇನ್ನೊಬ್ಬ ಆರೋಪಿ ಸರದೊಂದಿಗೆ ಪರಾರಿಯಾಗಿದ್ದಾನೆ. ಸರಗಳ್ಳತನದ ಆರೋಪಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ರತ್ನಮ್ಮನ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡು ರಕ್ತ ಸುರಿಯುತ್ತಿದ್ದರೂ ಪಟ್ಟುಬಿಡದೆ ಅವನನ್ನು ಹಿಡಿದ ರತ್ನಮ್ಮನ ಧೈರ್ಯ ಮತ್ತು ಸಹಾಯಕ್ಕೆ ಹಗೂ ಘಟನಾ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಹಿಡಿದ ಗೌರಮ್ಮ, ಶಾಂತಮ್ಮನವರ ದಿಟ್ಟತನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಗೃಹ ಲಕ್ಷ್ಮೀ ಹಣ ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ದೇಣಿಗೆ ನೀಡಿದ ಆಶಾ ಕಾರ್ಯಕರ್ತೆ
ರತ್ನಮ್ಮ ಬೆನ್ನಟ್ಟಿ ಹಿಡಿದ ಬೈಕ್‌ನ ಹಿಂಬದಿ ಕುಳಿತಿದ್ದ ಆರೋಪಿಯನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದ ಸುರೇಶ ಎಂದು ಗುರುತಿಸಲಾಗಿದೆ.
ಸರ ಕಿತ್ತುಕೊಂಡು ಪರಾರಿಯಾದ ಇನ್ನೊಬ್ಬ ಆರೋಪಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕನ್ನಗುಂದಿ ಗ್ರಾಮದ ಸೋಮಶೇಖರ ಎಂದು ತಿಳಿದುಬಂದಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.