ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ ಹಾಗೂ ಯುವಜನ ವಿರೋಧಿಯಾಗಿರುವ ಕೇಂದ್ರ ಬಜೆಟ್ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿತು.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಬಜೆಟ್ ಪ್ರತಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸಿತಾರಾಮ್ ಪ್ರತಿಕೃತಿ ದಹಿಸಿ ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದರು.
“ಮಂಡನೆಯಾಗಿರುವ ಬಜೆಟ್‌ನ್ನು ಬದಲಾವಣೆ ಮಾಡಬೇಕು. ಬೆಲೆ ಏರಿಕೆ, ನಿರುದ್ಯೋಗ, ಬಡತನ, ಹಸಿವು, ವಲಸೆ ಮುಂತಾದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವ ಗುರಿಯುಳ್ಳ ಬಜೆಟ್ ಆಗಿ ಮರು ರೂಪಿಸಬೇಕು. ಉದ್ಯೋಗ ಸೃಷ್ಟಿಗೆ ಸಂಪೂರ್ಣ ಒತ್ತು ನೀಡಬೇಕು. ಖಾಸಗೀಕರಣ ನೀತಿಗಳನ್ನು ಸಂಪೂರ್ಣವಾಗಿ ಕೈ ಬಿಡಬೇಕು. ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ, ಗ್ರಾಮೀಣ ಉದ್ಯೋಗ ಖಾತರಿ ಮಾನವ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆಗೆ ಆಗಿರುವ ಅನುದಾನ ಕೊರತೆ ಹಾಗೂ ನಿರ್ಲಕ್ಷ್ಯವನ್ನು ಸರಿಪಡಿಸಬೇಕು ಎಂದು” ಆಗ್ರಹಿಸಿದರು.
“ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ ಹಾಗೂ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ತಾರತಮ್ಯವನ್ನು ಸರಿಪಡಿಸಬೇಕು. ಐತಿಹಾಸಿಕ ದೆಹಲಿ ರೈತ ಹೋರಾಟದ ಮೂಲಕ ಹಿಮ್ಮೆಟ್ಟಿಸಿದ ಕರಾಳ ಕೃಷಿ ಕಾಯ್ದೆಗಳನ್ನು, ವಿದ್ಯುತ್ ಖಾಸಗೀಕರಣ ನೀತಿಗಳನ್ನು ಕರಾಳ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ಮೂಲಕ ಹಾಗೂ ವಿದ್ಯುತ್ ವಲಯ ವನ್ನು ಖಾಸಗಿ ಕಾರ್ಪೊರೇಟ್ ದೈತ್ಯರಿಗೆ ವಹಿಸುವ ಮೂಲಕ ಜಾರಿಗೆ ತರುವ ಎಲ್ಲಾ ಪ್ರಯತ್ನಗಳನ್ನು ಕೂಡಲೇ ನಿಲ್ಲಿಸಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿ ಕಾನೂನು ರೂಪಿಸಬೇಕು ಎಂಬುದು ಸೇರಿದಂತೆ ಎಲ್ಲಾ ದುಡಿಯುವ ಜನತೆಯನ್ನು ಸಾಲ ಬಾಧೆಯಿಂದ ಮುಕ್ತಿಗೊಳಿಸಬೇಕು. ಎಲ್ಲಾ ದುಡಿಯುವ ಜನರಿಗೆ ಘನತೆ ಹಾಗೂ ಗೌರವದಿಂದ ಜೀವಿಸುವ ರೀತಿಯಲ್ಲಿ ಕನಿಷ್ಟ ವೇತನ ಮತ್ತು ಪಿಂಚಣಿ ಭದ್ರತೆ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಸಾರಿಗೆ ಬಸ್ ಪಲ್ಟಿ; ಹಲವರಿಗೆ ಗಾಯ
ಈ ವೇಳೆ ವಿವಿಧ ಸಂಘಟನೆಗಳ ಮುಖಂಡರುಗಳಾದ ಚಾಮರಸ ಮಾಲಿ ಪಾಟೀಲ್, ಕೆ ಜಿ ವೀರೇಶ, ಹೆಚ್ ಪದ್ಮಾ, ಡಿ ಎಸ್ ಶರಣ ಬಸವ, ಜಿಂದಪ್ಪ ವಡ್ಲೂರು, ಕೆ ರಂಗನಾಥ ಡಿ.ರಾಂಪೂರ, ಮುದುಕಪ್ಪ, ಖಾಜಾ ಅಸ್ಲಂ ಅಹ್ಮದ್ ಸೇರಿದಂತೆ ಅನೇಕರು ಇದ್ದರು.
