ಚಳಿಗಾಲ | ನಗರ ನಿರಾಶ್ರಿತರ ರಕ್ಷಣೆ ಸರ್ಕಾರಗಳ ಕರ್ತವ್ಯವಲ್ಲವೇ?

Date:

Advertisements
ನಿರಾಶ್ರಿತ ವ್ಯಕ್ತಿಗಳಿಗೆ ಬದುಕಲು ಸರಿಯಾದ ರಕ್ಷಣೆ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯ. ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ನಿರಾಶ್ರಿತರ ಮುಂದಿನ ಪೀಳಿಗೆ ನಿರಾಶ್ರಿತರಾಗಿಯೇ ಉಳಿಯದಂತೆ ಮಾಡಲು, ಘನತೆಯಿಂದ ಬದುಕಲು ಅವರಿಗೆ ಶಾಶ್ವತ ಪರಿಹಾರ ಮತ್ತು ಸ್ವಂತ ಸೂರನ್ನು ಒದಗಿಸಬೇಕಿದೆ.

ಭಾರತದಲ್ಲಿ ಲಕ್ಷಾಂತರ ಮಂದಿ ನಿರಾಶ್ರಿತರಿದ್ದಾರೆ. ಅವರು ಹೆಚ್ಚಾಗಿ ಮಾನವ ವಾಸಕ್ಕೆ ಯೋಗ್ಯವಲ್ಲದ ಸ್ಥಳಗಳಲ್ಲಿ, ಬೀದಿಗಳಲ್ಲಿ, ಸೇತುವೆಗಳ ಅಡಿಯಲ್ಲಿ, ರೈಲ್ವೇ ಹಳಿಗಳ ಪಕ್ಕದಲ್ಲಿ ಅಥವಾ ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ 46,724 ಮಂದಿ ನಿರಾಶ್ರಿತರಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕನಿಷ್ಠ 3 ಲಕ್ಷ ಮಂದಿ ನಿರಾಶ್ರಿತರು ದೆಹಲಿಯಲ್ಲಿದ್ದಾರೆ ಎಂದು ‘ಶಹ್ರಿ ಅಧಿಕಾರ್ ಮಂಚ್’ ವಾದಿಸುತ್ತಿದೆ. ಬೆಂಗಳೂರಿನಲ್ಲಿಯೂ ಸುಮಾರು 10,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಿದ್ದಾರೆ ಎಂದು ಹೇಳಲಾಗಿದೆ. ಚಳಿಗಾಲದಲ್ಲಿ ಅವರ ಸ್ಥಿತಿ ಹೇಳತೀರದಾಗಿದೆ.

ಗ್ರಾಮೀಣ ಬಡತನ, ನಿರುದ್ಯೋಗ, ಜಾತಿ ತಾರತಮ್ಯ, ಭೂಸ್ವಾಧೀನ ಅಥವಾ ನೈಸರ್ಗಿಕ ವಿಕೋಪಗಳಿಂದಾಗಿ ಸ್ಥಳಾಂತರ ಮತ್ತು ನಗರೀಕರಣ ಸೇರಿದಂತೆ ಹಲವಾರು ಅಂಶಗಳಿಂದಾಗಿ ನಿರಾಶ್ರಿತತೆ ಉಂಟಾಗುತ್ತಿದೆ. ಸರಿಯಾದ ಪುನರ್‌ವಸತಿ ಒದಗಿಸದೆ ಜನರನ್ನು ಒಕ್ಕಲೆಬ್ಬಿಸಿ, ಸರ್ಕಾರಗಳೇ ಹಲವರನ್ನು ನಿರಾಶ್ರಿತರನ್ನಾಗಿ ಮಾಡುತ್ತಿವೆ ಎಂಬ ಆರೋಪಗಳೂ ಇವೆ. ನಾನಾ ಕಾರಣಗಳಿಂದಾಗಿ ನಿರಾಶ್ರಿತರಾದವರು ಅಸಮರ್ಪಕ ಆಶ್ರಯ ಮತ್ತು ಕಳಪೆ ಜೀವನ ಪರಿಸ್ಥಿತಿಯಿಂದ ವರ್ಷವಿಡೀ ಅಪಾಯಗಳನ್ನು ಎದುರಿಸುತ್ತಿದ್ದಾರೆ.

ಅದರಲ್ಲಿಯೂ, ಚಳಿಗಾಲ ಮತ್ತು ಮಳೆಗಾಲದಲ್ಲಿ, ನಿರಾಶ್ರಿತರು ಚಳಿ – ಶೀತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಆರೋಗ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾರೆ. ಆಶ್ರಯಕ್ಕಾಗಿ ಹುಡುಕುತ್ತಾರೆ. ಆದಾಗ್ಯೂ, ಆಶ್ರಯ ತಾಣಗಳಲ್ಲಿ ಶುದ್ಧ ನೀರು, ಕಂಬಳಿ, ಸಾಕಷ್ಟು ಆಹಾರ ಮತ್ತು ನೈರ್ಮಲ್ಯದಂತಹ ಮೂಲಭೂತ ಸೌಲಭ್ಯಗಳ ಕೊರತೆಗಳು ಅವರನ್ನು ಕಾಡುತ್ತವೆ. ಇದಲ್ಲದೆ, ಚಳಿಯ ತಿಂಗಳುಗಳಲ್ಲಿ ಸಾಂಕ್ರಾಮಿಕ ಉಸಿರಾಟದ ಕಾಯಿಲೆಗಳನ್ನು ಅವರು ಸಾಮಾನ್ಯವಾಗಿ ಎದುರಿಸಬೇಕಾಗಿದೆ. ಈ ಸಮಸ್ಯೆಗಳು ಬೇಸಿಗೆಯ ತಿಂಗಳುಗಳಲ್ಲಿಯೂ ಸಹ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ನಿರ್ಜಲೀಕರಣ ಮತ್ತು ಹೆಚ್ಚಿನ ಶಾಖದ ಪ್ರಭಾವವು ದುರ್ಬಲಗೊಂಡ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

Advertisements

ಹೀಗಾಗಿಯೇ, ಚಳಿಗಾಲದಲ್ಲಿ ನಿರಾಶ್ರಿತ ಜನರ ಮರಣ ಪ್ರಮಾಣ ಹೆಚ್ಚಾಗಿದೆ. ರಾಷ್ಟ್ರೀಯ ವಸತಿ ರಹಿತ ವಸತಿ ಹಕ್ಕುಗಳ ವೇದಿಕೆಯು ಪಟ್ಟಿ ಮಾಡಿದ ಮಾಹಿತಿಯ ಪ್ರಕಾರ, 2024ರ ನವೆಂಬರ್ 15 ಮತ್ತು 2025ರ ಜನವರಿ 10ರ ನಡುವೆ ದೆಹಲಿಯಲ್ಲಿ 474 ನಿರಾಶ್ರಿತ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 2024ರ ಜನವರಿ ತಿಂಗಳಿನಲ್ಲಿ ಪ್ರತಿದಿನ ಸುಮಾರು 8 ಮಂದಿ ನಿರಾಶ್ರಿತರು ಸಾವನ್ನಪ್ಪಿದ್ದಾರೆ ಎಂಬುದನ್ನು ವೇದಿಕೆ ಪಟ್ಟಿ ಮಾಡಿದೆ.

ಮನೆಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಬದುಕುತ್ತಿರುವ ನಿರಾಶ್ರಿತರು ಹವಾಮಾನ ವೈಪರೀತ್ಯದ ಸಮಯದಲ್ಲಿ ತೀವ್ರ ಸವಾಲುಗಳನ್ನು ಎದುರಿಸುತ್ತಾರೆ. ಜೊತೆಗೆ, ಸಾಮಾಜಿಕ ನಿಂದನೆಯನ್ನೂ ಎದುರಿಸಬೇಕಾಗಿದೆ. ತಮ್ಮ ಇರುವಿಕೆಯ ಗುರುತನ್ನೇ ಹೊಂದಿರದ ಹಲವಾರು ನಿರಾಶ್ರಿತರು ಅಗತ್ಯ ಆಶ್ರಯ ಮತ್ತು ಇತರ ಸೇವೆಗಳನ್ನು ಪಡೆಯುವುದು ಕಷ್ಟವಾಗುತ್ತದೆ.

ಹಲವು ವರ್ಷಗಳಿಂದ, ನಗರಗಳ ‘ಸುಂದರೀಕರಣ’ದ ಉದ್ದೇಶಗಳಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರಗಳು ರೂಪಿಸುತ್ತಿವೆ. ಮೇಲುರಸ್ತೆಗಳ (ಫ್ಲೈಓವರ್‌) ಅಡಿಯಲ್ಲಿರುವ ಸ್ಥಳಗಳನ್ನು ಉದ್ಯಾನವನಗಳು ಮತ್ತು ಚಾರ್ಜಿಂಗ್ ಸ್ಟೇಷನ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದಾಗಿ, ಹಿಂದೆ ಅಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಆಶ್ರಯಕ್ಕಿದ್ದ ಆ ಸ್ಥಳಗಳಿಂದಲೂ ಹೊರಬೀಳುತ್ತಾರೆ.

ಚಳಿಗಾಲದ ಸಮಯದಲ್ಲಿ ನಿರಾಶ್ರಿತತೆಯನ್ನು ಪರಿಹರಿಸಲು ರೂಪಿಸಲಾದ ಚಳಿಗಾಲದ ಕ್ರಿಯಾ ಯೋಜನೆ (WAP) ಹೊಂದಿರುವ ಏಕೈಕ ಭಾರತೀಯ ನಗರ ದೆಹಲಿ. ಅಲ್ಲಿ, ಭೀಕರ ಚಳಿಗಾಲದಲ್ಲಿ ಬದುಕುಳಿಯಲು ಸರಿಯಾದ ಆಶ್ರಯಗಳು ನಿರ್ಣಾಯಕವಾಗಿವೆ. ನಿರಾಶ್ರಿತರಿಗೆ ಸಾಕಷ್ಟು ಆಶ್ರಯ, ಆಹಾರ, ಬಟ್ಟೆ ಮತ್ತು ನೈರ್ಮಲ್ಯವನ್ನು ಒದಗಿಸುವ ಉದ್ದೇಶದಿಂದ ಡಬ್ಲ್ಯೂಎಪಿಯನ್ನು ರೂಪಿಸಲಾಗಿದೆ. ಆದರೆ, ಅದರ ಅನುಷ್ಠಾನದಲ್ಲಿಯೂ ನಾನಾ ವೈಫಲ್ಯಗಳಿವೆ.

WAP ಪ್ರಕಾರ, ದೆಹಲಿ ಸರ್ಕಾರವು ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ (DUSIB) ಅಡಿಯಲ್ಲಿ 7,092 ಜನರು ಇರಬಹುದಾದ ಒಟ್ಟು 197 ಆಶ್ರಯ ಮನೆಗಳನ್ನು ಮತ್ತು ಹೆಚ್ಚಿನವರಿಗಾಗಿ 250 ಹೆಚ್ಚುವರಿ ತಾತ್ಕಾಲಿಕ ಆಶ್ರಯಗಳನ್ನು ನಿರ್ಮಾಣ ಮಾಡಲಿದೆ. ಈ ಹೆಚ್ಚುವರಿ ತಾತ್ಕಾಲಿಕ ಆಶ್ರಯ ತಾಣಗಳಿದ್ದರೂ ಸಹ, ದೆಹಲಿಯಲ್ಲಿ ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಾಗದು ಎಂಬ ಅಭಿಪ್ರಾಯಗಳಿವೆ.

ಉಳಿದ ನಗರಗಳಲ್ಲಿಯೂ ಇಂತಹದ್ದೇ ಪರಿಸ್ಥಿತಿ ಇದೆ. ಅದರಲ್ಲೂ ಮಹಿಳಾ ಆಶ್ರಯ ತಾಣಗಳ ಪರಿಸ್ಥಿತಿಗೂ ಕಳಪೆಯಾಗಿವೆ. ಮಲಗಲು ಸಾಕಷ್ಟು ಸ್ಥಳಾವಕಾಶಗಳಿಲ್ಲದೆ, ಕಿಕ್ಕಿರಿದ ಜಾಗದಲ್ಲಿ ಹೆಚ್ಚಿನ ಮಂದಿಯನ್ನು ಇರಿಸಲಾಗಿದೆ. ಆಶ್ರಯ ಮೂಲಸೌಕರ್ಯ ಮತ್ತು ನಿರ್ವಹಣೆಯಲ್ಲಿನ ತೀವ್ರ ಅಸಮರ್ಪಕತೆಯು ಎದ್ದುಕಾಣುತ್ತಿದೆ.

ಈ ವರದಿ ಓದಿದ್ದೀರಾ?: ಬಜೆಟ್‌ ವಿಶ್ಲೇಷಣೆ | ಬೇಟಿ ಬಚಾವೊ-ಬೇಟಿ ಪಢಾವೊ; ಹೇಳಿದ್ದೊಂದು ಮಾಡಿದ್ದೊಂದು

ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (DAY-NULM), ನಗರ ಭಾಗಗಳ ವಸತಿ ರಹಿತರಿಗೆ ವಿವಿಧ ಕಾಲಮಾನಗಳಲ್ಲಿ ಆಶ್ರಯ ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ನಿರಾಶ್ರಿತ ವ್ಯಕ್ತಿಗಳನ್ನು PDS ಕಾರ್ಡ್‌ಗಳಿಗೆ ನೋಂದಣಿ, BPL ಕಾರ್ಡ್‌ಗಳ ಫಲಾನುಭವ, ಪಿಂಚಣಿಗಳು, ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶದಂತಹ ಸೌಲಭ್ಯಗಳನ್ನು ಒದಗಿಸಿ, ಮುಖ್ಯವಾಹಿನಿಯ ಸರ್ಕಾರಿ ಯೋಜನೆಗಳಿಗೆ ಫಲಾಭವಿಗಳನ್ನಾಗಿ ಮಾಡಬೇಕೆಂದು ಒತ್ತಿಹೇಳುತ್ತದೆ.

ಆದಾಗ್ಯೂ, ಈ ಯೋಜನೆಗಳು ಮತ್ತು ಆಶ್ರಯವನ್ನು ಪಡೆಯಲು ಆಧಾರ್ ಕಾರ್ಡ್‌ ರೀತಿಯ ಗುರುತಿನ ದಾಖಲೆಗಳು ಗಮನಾರ್ಹ ಅಡಚಣೆಯಾಗಿವೆ. ಅನೇಕ ನಿರಾಶ್ರಿತರು ತಮ್ಮ ಅಸ್ಥಿರ ಜೀವನಶೈಲಿಯಿಂದಾಗಿ ಗುರುತಿನ ದಾಖಲೆಗಳನ್ನೇ ಹೊಂದಿಲ್ಲ. 2025ರಲ್ಲಿ, ಆಧಾರ್ ಕಾರ್ಡ್ ಇಲ್ಲದ ಕಾರಣ ನಿರಾಶ್ರಿತರಿಗೆ ಆಶ್ರಯ ಮನೆಗಳಲ್ಲಿ ವಸತಿ ನೀಡಲು ನಿರಾಕರಿಸಿದ ಹಲವಾರು ಪ್ರಕರಣಗಳು ವರದಿಯಾಗಿವೆ. ಇದು, ನಿರಾಶ್ರಿತರನ್ನು ಸೌಲಭ್ಯ ವಂಚಿತರನ್ನಾಗಿ ಮಾಡುವುದರ ಜೊತೆಗೆ, ಮತ್ತಷ್ಟು ಅಂಚಿಗೆ ದೂಡುತ್ತದೆ. ಕಠಿಣ ಪರಿಸ್ಥಿತಿಗಳನ್ನು ಸಹಿಸಿಕೊಂಡೇ ಬೀದಿಗಳಲ್ಲಿ ಬದುಕುವಂತೆ ಮಾಡುತ್ತದೆ.

ಆಶ್ರಯ ನೀತಿಗಳ ಕಳಪೆ ಅನುಷ್ಠಾನದಿಂದ ಹಿಡಿದು ದಾಖಲೆಗಳಿಲ್ಲದ ಕಾರಣಕ್ಕೆ ನಿರಾಶ್ರಿತರನ್ನು ಹೊರಗಿಡುವ ಧೋರಣೆವರೆಗೆ ವ್ಯವಸ್ಥಿತ ವೈಫಲ್ಯಗಳು ಎದ್ದು ಕಾಣುತ್ತಿವೆ. ನಿರಾಶ್ರಿತರು ಬೇಸಿಗೆ ಬಿಸಿ, ಮಳೆ ಮತ್ತು ಚಳಿಯ ತೀವ್ರ ಪರಿಸ್ಥಿತಿಗಳಲ್ಲಿ ಘನತೆಯಿಂದ ಬದುಕಲು ಸಾಧ್ಯವಾಗುವಂತೆ ಮಾಡಿವೆ. ಇದು, ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲು ದೀರ್ಘಕಾಲದ ಪರಿಹಾರಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ.

ಇಂತಹ ನಿರಾಶ್ರಿತರಿಗೆ ನೆರವು ನೀಡುವಲ್ಲಿ ನಾಗರಿಕ ಸೊಸೈಟಿ ಸಂಸ್ಥೆಗಳು (CSOಗಳು), ಸ್ವಯಂಸೇವಕರು ಮತ್ತು ಕಾಳಜಿಯುಳ್ಳ ನಾಗರಿಕರ ಪಾತ್ರವೂ ಬಹುಮುಖ್ಯವಾಗಿದೆ. ಅಂತಹ ಪಾತ್ರವನ್ನು ಹಲವರು ನಿರ್ವಹಿಸುತ್ತಿದ್ದಾರೆ. ಜೊತೆಗೆ, ಆಶ್ರಯತಾಣಗಳ ಪರಿಸ್ಥಿತಿಗಳ ಬಗ್ಗೆಯೂ ಗಮನ ಸೆಳೆಯುತ್ತಿದ್ದಾರೆ. ಜೊತೆಗೆ, ಅಂಚಿನಲ್ಲಿರುವ ಸಮುದಾಯಗಳಿಗೆ ಧ್ವನಿಯಾಗಿ, ಸರ್ಕಾರಗಳ ವೈಫಲ್ಯಗಳನ್ನು ಎತ್ತಿ ತೋರಿಸಲು ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕ ವೇದಿಕೆಗಳು ಮಾತನಾಡಬೇಕಾದ ಅಗತ್ಯವಿದೆ.

ನಿರಾಶ್ರಿತ ವ್ಯಕ್ತಿಗಳಿಗೆ ಬದುಕಲು ಸರಿಯಾದ ರಕ್ಷಣೆ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯ. ಹೀಗಾಗಿ, ಆಳುವ ಸರ್ಕಾರಗಳು ಮತ್ತು ಅಧಿಕಾರಿಗಳು ನಿರಾಶ್ರಿತರ ಪರಿಸ್ಥಿತಿಗಳ ಹೊಣೆಹೊರಬೇಕಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ಮಾತ್ರವಲ್ಲದೆ, ಆಶ್ರಯ ತಾಣಗಳ ಹೊರತಾಗಿ, ನಿರಾಶ್ರಿತರ ಮುಂದಿನ ಪೀಳಿಗೆ ನಿರಾಶ್ರಿತರಾಗಿಯೇ ಉಳಿಯದಂತೆ ಮಾಡಲು, ಘನತೆಯಿಂದ ಬದುಕಲು ಅವರಿಗೆ ಶಾಶ್ವತ ಪರಿಹಾರ ಮತ್ತು ಸ್ವಂತ ಸೂರನ್ನು ಒದಗಿಸಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X