ಮನರೇಗಾಕ್ಕೆ ಅನುದಾನ ಕಡಿತ: ಕೇಂದ್ರ ಸರ್ಕಾರದಿಂದ ಗ್ರಾಮೀಣ ಪ್ರದೇಶದ ಬಡವರಿಗೆ ಭಾರೀ ದ್ರೋಹ

Date:

Advertisements
ದೇಶದ ಹಲವು ಭಾಗಗಳಲ್ಲಿ ಕಡಿಮೆ ವೇತನ, ಕೆಲಸದ ದಿನಗಳ ಕಡಿತ ಮತ್ತು ಉದ್ಯೋಗ ಕಾರ್ಡ್‌ಗಳ ಅಳಿಸುವಿಕೆ ಮುಂತಾದ ಬಹು ಸಮಸ್ಯೆಗಳು ಎದುರಾಗುತ್ತಿವೆ. ಮೋದಿ ಸರ್ಕಾರವು 7 ಕೋಟಿಗೂ ಹೆಚ್ಚು ಕಾರ್ಮಿಕರ ಉದ್ಯೋಗ ಕಾರ್ಡ್‌ಗಳನ್ನು ಅಳಿಸಿದೆ. ಈ ಕುಟುಂಬಗಳನ್ನು ಮನರೇಗಾ ಕೆಲಸದಿಂದ ಕಡಿತಗೊಳಿಸಿದೆ. ಹಳ್ಳಿಗಳನ್ನು ವಿಕಾಸ ಮಾಡುತ್ತೇವೆ ಎಂದು ಹೇಳುವ ಕೇಂದ್ರ ಸರ್ಕಾರ ಶ್ರೀಮಂತರ ಓಲೈಕೆ ಮಾಡುತ್ತಿದೆ, ಬಡವರ ಬದುಕಿಗೆ ಕೊಳ್ಳಿ ಇಡುತ್ತಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ) ಯೋಜನೆ ಹಳ್ಳಿಗಾಡಿನ ಎಲ್ಲ ವರ್ಗದ ಬಡವರ ಹಸಿವನ್ನು ನೀಗಿಸಲು ವರ್ಷದಲ್ಲಿ ಇಂತಿಷ್ಟು ದಿನ ಉದ್ಯೋಗ ನೀಡಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಆಗಸ್ಟ್ 23, 2005 ರಂದು ಆರಂಭಿಸಿದ ಯೋಜನೆ. ಮನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಸೂರು, ಭೂಮಿಯಿಲ್ಲದವರು, ಬಡವರಿಗೆ ಒಂದಷ್ಟು ದಿನ ಆಸರೆಯಾಗುತ್ತಿತ್ತು. ಜಮೀನಿದ್ದರೂ ಸರಿಯಾದ ಕಾಲಕ್ಕೆ ಮಳೆಯಾಗದೆ ಬರ ಆವರಿಸಿ ಇಲ್ಲವೆ ನೆರೆಯಿಂದಾಗಿ ಬೆಳೆ ಹಾಳಾಗಿ ಮುಂದೇನು ಎಂದು ಕಂಗೆಟ್ಟು ಕುಳಿತಿದ್ದವರಿಗೆ ಒಪ್ಪತ್ತಿನ ಊಟಕ್ಕೆ ದಾರಿಯಾಗಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರತಿ ವರ್ಷದ ಬಜೆಟ್‌ನಲ್ಲಿ ಅನುದಾನವನ್ನು ಕಡಿತಗೊಳಿಸಿ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿದೆ.

ಮನರೇಗ ಯೋಜನೆಅಡಿ ಸದ್ಯ ವರ್ಷಕ್ಕೆ 100 ಉದ್ಯೋಗ ದಿನಗಳು ಹಾಗೂ 288 ರೂ. ಕೂಲಿಯನ್ನು ನೀಡಲಾಗುತ್ತಿದೆ. ದಿನಕ್ಕೆ 400 ರೂ. ವೇತದ ಪರಿಷ್ಕರಣೆ, ಸದ್ಯ ಇರುವ 100 ದಿನದ ಕೆಲಸದ ಅವಧಿಯನ್ನು 150 ದಿನಗಳಿಗೆ ಹೆಚ್ಚಳ ಸೇರಿದಂತೆ ಒಂದಷ್ಟು ಬದಲಾವಣೆಯನ್ನು ಈ ವರ್ಷದ ಬಜೆಟ್‌ನಲ್ಲಿ ಜಾರಿಗೊಳಿಸಬೇಕೆಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ವಿಪಕ್ಷಗಳ ನಾಯಕರು ಮನವಿ ಮಾಡಿದ್ದರು. ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಮನರೇಗವನ್ನು ಕಡೆಗಣಿಸಲಾಗಿದೆ.  

ಕಳೆದ 20 ವರ್ಷಗಳ ಹಿಂದೆ ಜಾರಿಗೊಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ ಯೋಜನೆಯಿಂದ ಹಳ್ಳಿಗರು ಒಂದಷ್ಟು ದಿನ ಉದ್ಯೋಗದೊಂದಿಗೆ ನೆಮ್ಮದಿ ಕಂಡುಕೊಂಡಿದ್ದರು. ಈ ಕಾರ್ಯಕ್ರಮವು ಗ್ರಾಮೀಣ ಜನರ ಜೀವನೋಪಾಯವಾಗಿ ಉಳಿಯದೇ, ಜೀವನ ನಿರ್ಮಾಣ ಮಾಡುವ ಕಾರ್ಯಕ್ರಮವಾಗಿದೆ. ವಿವಿಧ ರಾಜ್ಯಗಳಲ್ಲಿ ಶೇ.54ರಷ್ಟು ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಯೋಜನೆಯಡಿ ರಾಜ್ಯ ಸರ್ಕಾರಗಳು ಮಹಿಳೆಯರು ಹಾಗೂ ಪುರುಷರಿಗೆ ತಾರತಮ್ಯವಿಲ್ಲದೆ ವೇತನ ನೀಡುತ್ತಿದೆ. ಆದ ಕಾರಣ ಮನರೇಗಾ ಯೋಜನೆ ಗ್ರಾಮೀಣ ಕುಟುಂಬಗಳಲ್ಲಿ ಆರ್ಥಿಕ ಸ್ಥಿರತೆ ತಂದು ಕೊಟ್ಟಿದೆ.

Advertisements

ಮಹತ್ವಾಕಾಂಕ್ಷಿ ಯೋಜನೆಯಿಂದ ಗ್ರಾಮಗಳಲ್ಲಿ ಇಂದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ಪಾಲನೆಯಾಗುತ್ತಿದೆ. ಗ್ರಾಮ ಪಂಚಾಯತಿಗಳೇ ಸರ್ಕಾರಗಳಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ಮನರೇಗಾ ಕಾರ್ಯಕ್ರಮಗಳಡಿ ಕರ್ನಾಟಕ ರಾಜ್ಯದಲ್ಲಿಯೇ 17 ಲಕ್ಷ ಆಸ್ತಿಗಳನ್ನು ಸೃಷ್ಟಿ ಮಾಡಲಾಗಿದೆ. ಇವು ಗ್ರಾಮೀಣ ಭಾಗಕ್ಕೆ ಶಾಶ್ವತ ಕೊಡುಗೆಗಳಾಗಿವೆ. ಆದರೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುತ್ತಿರುವ ಮನರೇಗಾ ಅನುದಾನವನ್ನು ವರ್ಷ ವರ್ಷವೂ ಕಡಿತಗೊಳಿಸುತ್ತಾ ಹೋಗುತ್ತಿದೆ. ಇದು ಗ್ರಾಮೀಣ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಆಪತ್ತು ತರಿಸಲಿದೆ. ಗ್ರಾಮ ಪಂಚಾಯತಿಗಳು ವೈಜ್ಞಾನಿಕವಾಗಿ ಹಾಗೂ ಪ್ರಜ್ಞಾವಂತಿಕೆಯಿಂದ ಕಾರ್ಯನಿರ್ವಹಿಸುವದರೊಂದಿಗೆ ಗ್ರಾಮಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಮನರೇಗಾ ದಾರಿದೀಪವಾಗಿದೆ.

ಯೋಜನೆಯ ಅಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ನೀಡಬೇಕು. ಒಂದು ವೇಳೆ ನಿಗದಿತ ಅವಧಿಗಿಂತ ಕೂಲಿ ಪಾವತಿ ವಿಳಂಬವಾದರೆ, ದಿನಕ್ಕೆ ಶೇ 0.05ರಂತೆ ವಿಳಂಬ ಪರಿಹಾರ ನೀಡಬೇಕಾಗುತ್ತದೆ. ಈ ಯೋಜನೆಗೆ ಬಹುಪಾಲು ಕೇಂದ್ರ ಸರ್ಕಾರ ಹಣ ಹೊಂದಿಸುತ್ತವೆ. ರಾಜ್ಯಗಳ ಪಾಲು ಸೀಮಿತದಲ್ಲಿರುತ್ತದೆ. ಕಾರ್ಮಿಕರಿಗೆ ಕೂಲಿ ನೀಡುವುದು, ಕುಶಲ ಮತ್ತು ಅರೆಕುಶಲ ಕಾರ್ಮಿಕರ ಕೂಲಿ ಮೊತ್ತ ಸೇರಿದಂತೆ ಯೋಜನೆಯಲ್ಲಿ ಬಳಸಲಾಗುವ ಸಾಮಗ್ರಿಗಳ ವೆಚ್ಚದ ನಾಲ್ಕನೇ ಮೂರರಷ್ಟು ಮೊತ್ತ ಹಾಗೂ ಯೋಜನೆಯ ಒಟ್ಟು ಆಡಳಿತಾತ್ಮಕ ವೆಚ್ಚದ ಶೇ 6ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರವು ಭರಿಸುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುರಹಂಕಾರಿ ದೊಡ್ಡಣ್ಣನ ಎದುರು ಮಂಡಿಯೂರಿದ ಮೋದಿ  

ಆದರೆ ಇತ್ತೀಚಿನ ವರ್ಷಗಳಲ್ಲಿ ಬರ, ನೆರೆ ನಿರುದ್ಯೋಗದಿಂದ ಗ್ರಾಮೀಣ ಜನರ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಹದಗೆಡುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಮನರೇಗಾ ಯೋಜನೆಗೆ ನಿರಂತರ ಪೆಟ್ಟು ನೀಡಲು ಹೊರಟಿದೆ. ದೇಶದ ಹಲವು ಭಾಗಗಳಲ್ಲಿ ಕಡಿಮೆ ವೇತನ, ಕೆಲಸದ ದಿನಗಳ ಕಡಿತ ಮತ್ತು ಉದ್ಯೋಗ ಕಾರ್ಡ್‌ಗಳ ಅಳಿಸುವಿಕೆ ಮುಂತಾದ ಬಹು ಸಮಸ್ಯೆಗಳು ಎದುರಾಗುತ್ತಿವೆ. ತಂತ್ರಜ್ಞಾನ ಮತ್ತು ಆಧಾರ್ ಬಳಸುವ ನೆಪದಲ್ಲಿ, ಮೋದಿ ಸರ್ಕಾರವು 7 ಕೋಟಿಗೂ ಹೆಚ್ಚು ಕಾರ್ಮಿಕರ ಉದ್ಯೋಗ ಕಾರ್ಡ್‌ಗಳನ್ನು ಅಳಿಸಿದೆ. ಈ ಕುಟುಂಬಗಳನ್ನು ಮನರೇಗಾ ಕೆಲಸದಿಂದ ಕಡಿತಗೊಳಿಸಿದೆ. ಹಳ್ಳಿಗಳನ್ನು ವಿಕಾಸ ಮಾಡುತ್ತೇವೆ ಎಂದು ಹೇಳುತ್ತ ಶ್ರೀಮಂತರ ಓಲೈಕೆಯಿಂದ ಬಡವರ ಬದುಕಿಗೆ ಮಾರಕವಾಗುತ್ತಿದೆ.

ಸಂಸತ್ತಿನಲ್ಲಿ 1.55 ಕೋಟಿ ಮನರೇಗಾ ಸಕ್ರಿಯ ಕಾರ್ಮಿಕರ ಹೆಸರನ್ನು ಅಳಿಸಿ ಹಾಕಿರುವ ಆರೋಪದ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಮಾಹಿತಿ ನೀಡಿದ್ದರು. ಉದ್ಯೋಗ ಕಾರ್ಡ್‌ಗಳ ದುರುಪಯೋಗ ತಡೆಗಾಗಿ ಮತ್ತು ನೈಜ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು. ಇವರೆಲ್ಲರೂ ಸುಳ್ಳು ಅಥವಾ ತಪ್ಪು ಮಾಹಿತಿ ಇರುವ ಉದ್ಯೋಗ ಕಾರ್ಡ್‌ ಹೊಂದಿರುವಿಕೆ, ಗ್ರಾಮ ಪಂಚಾಯಿತಿಯಿಂದ ಕುಟುಂಬಗಳ ಶಾಶ್ವತ ಸ್ಥಳಾಂತರ ಹಾಗೂ ಗ್ರಾಮಗಳನ್ನು ‘ನಗರ’ ಎಂದು ವರ್ಗೀಕರಿಸಿದ ಕಾರಣ ರದ್ದುಪಡಿಸಿರುವುದಾಗಿ ಹೇಳಿ ಸರ್ಕಾರದ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಸಚಿವರ ಈ ಹೇಳಿಕೆ ಹಂತಹಂತವಾಗಿ ತಾವು ಈ ಯೋಜನೆಯನ್ನು ಕೈಬಿಡುತ್ತೇವೆ ಎಂಬ ಅರ್ಥ ಪರೋಕ್ಷವಾಗಿ ನೀಡುವುದಾಗಿತ್ತೆ ವಿನಾ ಮತ್ತೇನಿರಲಿಲ್ಲ.

ಕೇಂದ್ರ ಸರ್ಕಾರವೇ ನೇಮಿಸಿದ್ದ ಸಂಸದೀಯ ಸ್ಥಾಯಿ ಸಮಿತಿ ವರದಿ ಪ್ರಕಾರ ಕಳೆದ ಕೆಲವು ವರ್ಷಗಳಿಂದ ನರೇಗಾ ಯೋಜನೆಗೆ ನಿಗದಿಯಾಗಿದ್ದ ಒಟ್ಟು ಮೊತ್ತದಲ್ಲಿ ಗಣನೀಯ ಪಾಲು ವೆಚ್ಚವಾಗಿಲ್ಲ. ಯೋಜನೆಗೆ ನಿಗದಿಪಡಿಸಿದ್ದ ಅನುದಾನದ ಪೈಕಿ 2021-22ರಲ್ಲಿ 6,545 ಕೋಟಿ, 2022-23ರಲ್ಲಿ 2,311 ಕೋಟಿ ಮತ್ತು 2023-24ರಲ್ಲಿ 1,110 ಕೋಟಿ ಹಣ ವೆಚ್ಚ ಮಾಡಲಾಗಿಲ್ಲ. ಆರ್ಥಿಕ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಹಣವು ಹಲವು ಕಾರಣಗಳಿಂದ ವೆಚ್ಚವಾಗದೇ ಉಳಿದಿರುವುದಾಗಿ ಸಮಿತಿ ತಿಳಿಸಿದೆ. ಇದಲ್ಲದೆ ವಿವಿಧ ಹಂತಗಳಲ್ಲಿ ಹಣ ಬಿಡುಗಡೆಯಲ್ಲಿ ವಿಳಂಬವಾಗಿರುವುದೂ ಒಂದು ಕಾರಣ ಎಂದು ಸಮಿತಿ ಹೇಳಿದೆ. ಹಣವನ್ನು ರಾಜ್ಯಗಳಿಗೆ ಬಿಡುಗಡೆಯೇ ಮಾಡದಿದ್ದರೆ ಹಣವು ಖಜಾನೆಯಲ್ಲಿಯೇ ಉಳಿಯುತ್ತದೆ ಹಾಗೂ ಯೋಜನೆಗಳು ಶಕ್ತಿಹೀನವಾಗುತ್ತವೆ ಎಂಬುದು ಕೇಂದ್ರ ಸರ್ಕಾರಕ್ಕೂ ತಿಳಿದಿದೆ.

ಮನರೇಗಾ
ಮನರೇಗಾ

ಮನರೇಗಾ ಯೋಜನೆಗೆ ಈ ವರ್ಷದ ಬಜೆಟ್‌ ಹಂಚಿಕೆಯಲ್ಲೂ ಕಡಿತಗೊಳಿಸಲಾಗಿದೆ. 2024-25ನೇ ಸಾಲಿನ ಜಿಡಿಪಿ ಶೇಕಡವಾರಿನಲ್ಲಿ 0.26 ಇಳಿಕೆಯಾಗಿದೆ. ಹಳ್ಳಿ ಜನರ ಜೀವನ ಸುಧಾರಣೆಗೊಳ್ಳಬೇಕೆಂದರೆ ಮನರೇಗಾ ಯೋಜನೆಗೆ ಒಟ್ಟು ಜಿಡಿಪಿಯಲ್ಲಿ ಶೇ.1.7 ರಷ್ಟು ಮಿಸಲಿಡಬೇಕೆಂದು ವಿಶ್ವಬ್ಯಾಂಕ್‌ ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಬಜೆಟ್‌ ಹಂಚಿಕೆಯಲ್ಲೂ ಕಳೆದ ಬಾರಿ ನೀಡಿದಷ್ಟೆ 86 ಸಾವಿರ ಕೋಟಿಯನ್ನು ನೀಡಲಾಗಿದೆ. ಈಗ ನೀಡಿರುವ ಹಣಕಾಸಿನ ನೆರವು ಯೋಜನೆಯ ನಿಧಿಯಲ್ಲಿ 10 ವರ್ಷಗಳ ಕನಿಷ್ಠ ಮಟ್ಟವನ್ನು ಸೂಚಿಸುತ್ತದೆ. ಇದನ್ನು ಗಮನಿಸಿದರೆ ಕೇಂದ್ರ ಸರ್ಕಾರವು ಮನರೇಗಾವನ್ನು ನಿರ್ಲಕ್ಷಿಸುವ ಮೂಲಕ ಗ್ರಾಮೀಣ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಯೋಜನೆಗೆ ನೀಡುತ್ತಿರುವ ಕಡಿಮೆ ಹಂಚಿಕೆಯು ಕೆಲಸದ ಬೇಡಿಕೆಯನ್ನು ಕೃತಕವಾಗಿ ನಿಗ್ರಹಿಸುವುದಲ್ಲದೆ ಮತ್ತೇನು ಅಲ್ಲ. ಪ್ರಸ್ತುತ ನೀಡುತ್ತಿರುವ 298 ರೂ. ದಿನಗೂಲಿ ವೇತನ ಬದಲಾಗುತ್ತಿರುವ ಮಾರುಕಟ್ಟೆ ದರಗಳಿಗೆ ಸಾಕಷ್ಟು ಕಡಿಮೆಯಿದೆ. ರಾಷ್ಟ್ರೀಯ ಕನಿಷ್ಠ ವೇತನವಾಗಿ ದಿನಕ್ಕೆ 400 ರೂ. ನೀಡಬೇಕೆಂಬ ಬೇಡಿಕೆ ಕೇವಲ ಬೇಡಿಕೆಯಾಗಿಯೆ ಇದೆ.

ಗ್ರಾಮೀಣ ಹಣದುಬ್ಬರವು ಕಳೆದ 2 ವರ್ಷಗಳಿಂದ ನಗರ ಹಣದುಬ್ಬರಕ್ಕಿಂತ ಹೆಚ್ಚಿದ್ದರೂ, ಕೇಂದ್ರ ಸರ್ಕಾರ ಗ್ರಾಮೀಣ ಬಡವರ ಬಗ್ಗೆ ನಿರಾಶಾದಾಯಕ ನಿರಾಸಕ್ತಿ ಮುಂದುವರಿಸಿದೆ. ಹಾಗೆ ನೋಡಿದರೆ ಮನರೇಗಾ ವಿಶ್ವದ ಅತಿ ದೊಡ್ಡ ಉದ್ಯೋಗ ಯೋಜನೆ. ಒಂದೆಡೆ ಉದ್ಯೋಗ ಹಾಗೂ ನೆರವನ್ನು ಕಡಿತಗೊಳಿಸುತ್ತಿದ್ದರೆ ಮತ್ತೊಂದಡೆ ಹಲವು ರಾಜ್ಯಗಳಿಗೆ ಹಳೆಯ ಬಾಕಿ ಹಣವನ್ನೆ ನೀಡಿಲ್ಲ. ಇವೆಲ್ಲ ತಂತ್ರಗಳು ಯೋಜನೆಯನ್ನು ನಿಧಾನವಾಗಿ ಸ್ಥಗಿತಗೊಳಿಸುವ ಹುನ್ನಾರವಲ್ಲದೆ ಮತ್ತೇನಿಲ್ಲ. ಬಿಜೆಪಿ ಸರ್ಕಾರ ಅಧಿಕಾರ ಬಂದಾಗಿನಿಂದಲೂ ಅತಿ ಶ್ರೀಮಂತರು, ಮೇಲ್‌ ಮಧ್ಯಮವರ್ಗದವರನ್ನು ಅನುಕೂಲ ಮಾಡಿಕೊಡುವ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ದೇಶದಲ್ಲಿ ಬಹುಪಾಲು ಸಂಖ್ಯೆಯಲ್ಲಿದ್ದು ಪರೋಕ್ಷವಾಗಿ ವರಮಾನ ತಂದುಕೊಡುತ್ತಿರುವ ಹಳ್ಳಿಗರು, ಬಡವರು, ದಲಿತ, ಹಿಂದುಳಿತ, ಅಲ್ಪಸಂಖ್ಯಾತರು ಜೀವನಮಟ್ಟ ಸುಧಾರಣೆ ಬೇಡವಾಗಿದೆ.  

ಗ್ರಾಮೀಣ ಭಾಗದ ಬಡತನ ಮತ್ತು ನಿರುದ್ಯೋಗವನ್ನು ನಿವಾರಿಸುವಲ್ಲಿ ಮನರೇಗಾ ದೇಶದ ಹಳ್ಳಿಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಮುಖ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ ಶೇ 100ರಷ್ಟು ನಗರ ಪ್ರದೇಶ ಎಂದು ಪರಿಗಣಿತವಾದ ಜಿಲ್ಲೆಗಳನ್ನು ಹೊರತುಪಡಿಸಿದರೆ, ದೇಶದ ಎಲ್ಲ ಭಾಗಗಳಲ್ಲೂ ಇದನ್ನು ಜಾರಿಮಾಡಲಾಗಿದೆ. ಆದರೆ ಮಹಾತ್ಮಾ ಗಾಂಧಿ ಹೆಸರಿರುವ ಹಾಗೂ ಕಾಂಗ್ರೆಸ್‌ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜಕೀಯ ದುರುದ್ದೇಶದಿಂದ ಮಹತ್ವದ ಯೋಜನೆಯೊಂದನ್ನು ಬಿಜೆಪಿ ಸರ್ಕಾರ ಮೂಲೆಗುಂಪು ಮಾಡಲು ಹೊರಟಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X