ಮಂಕಾಳ್ ವೈದ್ಯರು ಸಚಿವ ಸ್ಥಾನದಲ್ಲಿದ್ದುಕೊಂಡು ಕಾನೂನಿನ ವ್ಯಾಪ್ತಿಯಲ್ಲಿ ಹೇಗೆ ಗೋ ಕಳ್ಳಸಾಗಣೆ, ಗೋಹತ್ಯೆಯನ್ನು ತಡೆಯಬಹುದು ಎಂದು ಸಮಾಲೋಚನೆ ಮಾಡಿ ಕಠಿಣ ಕ್ರಮಕ್ಕೆ ಸೂಚಿಸಬೇಕೇ ಹೊರತು ಗುಂಡಿಟ್ಟು ಕೊಲ್ಲಿ ಎಂದು ಆದೇಶ ನೀಡಿದರೆ ಅವರು ಪ್ರಜಾಪ್ರಭುತ್ವದ ದೇಶದಲ್ಲಿ ಸಂವಿಧಾನಬದ್ಧವಾಗಿ ಆಯ್ಕೆಯಾದ ಜನಪ್ರತಿನಿಧಿ ಆಗಲ್ಲ, ಸರ್ವಾಧಿಕಾರಿ ಆಗುತ್ತಾರೆ. ಒಂದು ವೇಳೆ ಗುಂಡಿಟ್ಟು ಕೊಲ್ಲಿ ಎಂಬ ಸಚಿವರ ಮಾತನ್ನು ಹಿಂದುತ್ವ ಕೋಮುವಾದಿಗಳು ಮುಸ್ಲಿಂ ಗೋ ವ್ಯಾಪಾರಿಗಳ ವಿರುದ್ಧ ಪ್ರಯೋಗಿಸಿದರೆ ಏನಾದೀತು?
ಕಾರವಾರದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಾತನಾಡುತ್ತಾ ಪಶುಸಂಗೋಪನೆ ಮತ್ತು ಬಂದರು ಸಚಿವ ಮಂಕಾಳ್ ಎಸ್ ವೈದ್ಯ ಅವರು, “ನಾವು ಪ್ರೀತಿಯಿಂದ ಸಾಕುವ, ಪೂಜಿಸುವ ಗೋವನ್ನು ಕಳ್ಳತನ ಮಾಡುವುದು-ಹತ್ಯೆಗೈಯ್ಯುವುದನ್ನು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ. ಈಗಾಗಲೇ ಪೊಲೀಸ್ ಇಲಾಖೆಗೆ ಹೇಳಿ ಬಿಟ್ಟಿದ್ದೇನೆ, ಅಂಥವರನ್ನ ಸುಮ್ಮನೆ ಬಿಡುವ ಮಾತೇ ಇಲ್ಲ. ಇನ್ಮುಂದೆ ಯಾರಾದರೂ ಗೋಹತ್ಯೆ, ಕಳ್ಳತನ ಮಾಡಿದ್ದೇ ಆದಲ್ಲಿ, ಅಂಥವರನ್ನ ಸರ್ಕಲ್ನಲ್ಲಿ ನಿಲ್ಲಿಸಿ ಗುಂಡು ಹೊಡೆಯಿರಿ” ಎಂದು ಪೊಲೀಸರನ್ನು ಉದ್ದೇಶಿಸಿ ಹೇಳಿರುವುದು ಅಚ್ಚರಿ ಮೂಡಿಸಲು ಕಾರಣ ಅವರು ಬಿಜೆಪಿ ಶಾಸಕರಲ್ಲ, ಕಾಂಗ್ರೆಸ್ ಶಾಸಕ. ಅದರರ್ಥ ಗೋ ಕಳ್ಳತನಕ್ಕೆ ಕಾಂಗ್ರೆಸ್ ಬೆಂಬಲಿಸಬೇಕು ಎಂದಲ್ಲ. ಕಳ್ಳರಿಗೆ ಗುಂಡಿಟ್ಟು ಸಾಯಿಸುವ ಕಾನೂನು ಈ ದೇಶದಲ್ಲಿ ಇಲ್ಲ.
ಗೋ ಹತ್ಯೆ ತಡೆಯಲು ಕಾನೂನು ಇದೆ. ಕಾನೂನಿನ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡುವ ಅವಕಾಶವೂ ಇದೆ. ಅನ್ಯಮತೀಯರನ್ನು ಗುಂಡಿಟ್ಟು ಕೊಲ್ಲಿ, ಗೋ ಕಳ್ಳರನ್ನು ಶೂಟೌಟ್ ಮಾಡಿ ಎಂದು ಹೇಳುವುದು ಬಿಜೆಪಿ ಮತ್ತು ಕೋಮುವಾದಿಗಳ ಚಾಳಿ. ಹೀಗೆ ಹೇಳುವಾಗ ಅವರ ಗುರಿ ಮುಸ್ಲೀಮರು. ಆದರೆ ಗೋರಕ್ಷಣೆ ಮಾಡೋರು ಎಂದು ಹೇಳಿಕೊಂಡಿದ್ದ ಕೆಲವು ಬಜರಂಗದಳದ ಮುಖಂಡರೇ ಮಂಗಳೂರಿನಿಂದ ಕೇರಳಕ್ಕೆ ಗೋ ಕಳ್ಳ ಸಾಗಣೆ ಮಾಡುವಾಗಿ ಸಿಕ್ಕಿಬಿದ್ದಿದ್ದರು! ಆದರೆ ಗೋಹತ್ಯೆ, ಗೋ ಕಳ್ಳತನ, ಗೋಮಾಂಸ ತಿನ್ನೋರು ಮುಸ್ಲೀಮರು ಎಂಬ ತಪ್ಪು ಅಭಿಪ್ರಾಯವನ್ನು ಸಮಾಜದಲ್ಲಿ ಮೂಡಿಸಲು ಸಂಘಪರಿವಾರ ಯಶಸ್ವಿಯಾಗಿದೆ. ಅದು ಬೇರೆ ವಿಷಯ.
ಮಂಕಾಳ್ ವೈದ್ಯರು ಸಚಿವ ಸ್ಥಾನದಲ್ಲಿದ್ದುಕೊಂಡು ಕಾನೂನಿನ ವ್ಯಾಪ್ತಿಯಲ್ಲಿ ಹೇಗೆ ಗೋ ಕಳ್ಳಸಾಗಣೆ, ಗೋಹತ್ಯೆಯನ್ನು ತಡೆಯಬಹುದು ಎಂದು ಸಮಾಲೋಚನೆ ಮಾಡಿ ಕಠಿಣ ಕ್ರಮಕ್ಕೆ ಸೂಚಿಸಬೇಕೇ ಹೊರತು ಗುಂಡಿಟ್ಟು ಕೊಲ್ಲಿ ಎಂದು ಆದೇಶ ನೀಡಿದರೆ ಅವರು ಪ್ರಜಾಪ್ರಭುತ್ವದ ದೇಶದಲ್ಲಿ ಸಂವಿಧಾನ ಬದ್ಧವಾಗಿ ಆಯ್ಕೆಯಾದ ಜನಪ್ರತಿನಿಧಿ ಆಗಲ್ಲ, ಸರ್ವಾಧಿಕಾರಿ ಆಗುತ್ತಾರೆ. ಒಂದು ವೇಳೆ ಗುಂಡಿಟ್ಟು ಕೊಲ್ಲಿ ಎಂಬ ಸಚಿವರ ಮಾತನ್ನು ಕೋಮುವಾದಿಗಳು ಮುಸ್ಲಿಂ ಗೋ ವ್ಯಾಪಾರಿಗಳ ವಿರುದ್ಧ ಪ್ರಯೋಗಿಸಿದರೆ ಏನಾದೀತು? ದುರುದ್ದೇಶದಿಂದ ಒಬ್ಬ ವ್ಯಕ್ತಿಯನ್ನು ಗೋ ಕಳ್ಳ ಎಂದು ಗುಂಡಿಟ್ಟು ಕೊಂದರೆ ಆಗ ಸಚಿವರು ಹೊಣೆ ಹೊರುತ್ತಾರಾ? ಸಚಿವರ ಈ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಂದ ಯಾವುದೇ ಆಕ್ಷೇಪ ಬರದೇ ಇರುವುದು, ಸಚಿವರಿಗೆ ಎಚ್ಚರಿಕೆ ನೀಡದೇ ಇರುವುದು ಕೂಡಾ ಅಚ್ಚರಿ ಮೂಡಿಸಿದೆ.

ಇಡೀ ದೇಶದಲ್ಲಿ 80ರ ದಶಕದಿಂದೀಚೆಗೆ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದ್ದೇ ಮುಸ್ಲಿಂ ದ್ವೇಷ ಹರಡುತ್ತಾ, ರಾಮಮಂದಿರ ಕಟ್ಟುವೆವು ಎಂಬ ಘೋಷಣೆಯೊಂದಿದೆ. ಅಡ್ವಾಣಿಯವರ ರಥಯಾತ್ರೆ, ಇಟ್ಟಿಗೆ ಸಮಗ್ರ, ನಂತರ ಬಾಬರಿ ಮಸೀದಿ ಧ್ವಂಸ. ಆನಂತರ ರಾಮಮಂದಿರ ವ್ಯಾಜ್ಯ ಎರಡು ದಶಕಗಳಿಂದ ನಡೆಯುತ್ತಿರುವಾಗ ಬಿಜೆಪಿ ದೇಶದೆಲ್ಲೆಡೆ ಕೋಮುಗಲಭೆ ಸೃಷ್ಟಿಸುತ್ತಾ, ರಾಮನ ಜಪದಲ್ಲೇ ಹಿಂದೂ ಮತಗಳನ್ನು ಕ್ರೋಡೀಕರಿಸುತ್ತ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿತ್ತು. ಇತ್ತ ಕರ್ನಾಟಕದಲ್ಲೂ 2008ರಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚನೆ ಮಾಡುವಂತಾಗಿತ್ತು. ಆದರೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರು ಭ್ರಷ್ಟಾಚಾರದ ಕೇಸಿನಲ್ಲಿ ಜೈಲಿಗೆ ಹೋಗಬೇಕಾಯ್ತು. ಹೀಗಾಗಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗಿತ್ತು.
ಕಾಂಗ್ರೆಸ್ ಸರ್ಕಾರವಿದ್ದಾಗ ನಡೆದ ಎಲ್ಲ ಕೊಲೆ ಆತ್ಮಹತ್ಯೆಗಳಿಗೂ ಕಾಂಗ್ರೆಸ್ ಕಾರಣ ಎಂದವರು, ತಾವು ಸರ್ಕಾರ ನಡೆಸುತ್ತಿದ್ದಾಗ ನಡೆದ ಹಿಂದುತ್ವ ಕಾರ್ಯಕರ್ತರ ಹತ್ಯೆಗೂ ಕಾಂಗ್ರೆಸ್ ಕಾರಣ ಎಂದು ಊಳಿಟ್ಟರು. ಮುಸ್ಲಿಂ ಹಂತಕರಿಗೆ ಕಾಂಗ್ರೆಸ್ ಬೆಂಬಲಿಸುತ್ತದೆ ಅಂತ ಆರೋಪ ಮಾಡುತ್ತ ನಾಲ್ಕು ವರ್ಷಗಳ ಅಧಿಕಾರ ಮುಗಿಸಿದ್ರು. ಯಡಿಯೂರಪ್ಪ ಕೈಯಿಂದ ಅಧಿಕಾರ ದಂಡ ಬೊಮ್ಮಾಯಿ ಕೈಗೆ ಬರುತ್ತಿದ್ದಂತೆ ಹಿಂದುತ್ವ ಕೋಮುವಾದಿ ಪಡೆಯ ಕೃತ್ಯಗಳು ಕ್ರಿಯೆಗೆ ಪ್ರತಿಕ್ರಿಯೆ ಎಂದು ಕೋಮುವಾದದ ಭದ್ರ ನೆಲೆಯಾದ ಕರಾವಳಿಯಲ್ಲಿ ಹೋಗಿ ಹೇಳಿ ಸರ್ಕಾರ ಗಲಭೆಕೋರರ ಬೆಂಬಲಕ್ಕಿದೆ ಎಂದು ಸಾರಿ ಬಿಟ್ಟಿದ್ದರು. ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತರನ ಕೊಲೆಯಾದಾಗ ಪ್ರತೀಕಾರವಾಗಿ ಘಟನೆಗೆ ಸಂಬಂಧವೇ ಇಲ್ಲದ ಸುರತ್ಕಲ್ನ ಫಾಜಿಲ್ನಲ್ಲಿ ಅಲ್ಲಿನ ಬಜರಂಗದಳದ ಕಾರ್ಯಕರ್ತರು ಕೊಂದು ಮುಗಿಸಿದ್ದರು. ಆದರೆ ಬಿಜೆಪಿ ಕಾರ್ಯಕರ್ತನ ಮನೆಗೆ ಹೋಗಿ ಸಾಂತ್ವನದ ಮಾಡಿದ ಬೊಮ್ಮಾಯಿ ಮುಸ್ಲಿಂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿಲ್ಲ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸುಳ್ಯದ ಪ್ರವೀಣ್ ನೆಟ್ಟಾರು ಮತ್ತು ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ತಲಾ 25ಲಕ್ಷ ರೂಪಾಯಿ ಪರಿಹಾರ ನೀಡಿದ್ದ ಬೊಮ್ಮಾಯಿ, ಹಿಂದೂ ಕೋಮುವಾದಿಗಳಿಂದ ಹತರಾದ ಮುಸ್ಲಿಂ ಯುವಕರ ಕುಟುಂಬಕ್ಕೆ ಚಿಕ್ಕಾಸನ್ನೂ ನೀಡದೇ ಅಮಾನವೀಯತೆ ಮೆರೆದರು.
ಗೋರಕ್ಷಕರಿಂದ ಮುಸ್ಲಿಂ ವ್ಯಾಪಾರಿಯ ಹತ್ಯೆ, ಮುಸ್ಲಿಂ ವ್ಯಾಪಾರಿಗಳಿಗೆ ಸಂತೆಗಳಲ್ಲಿ ಜಾತ್ರೆಗಳಲ್ಲಿ ಬಹಿಷ್ಕಾರ ಸರ್ಕಾರದ ಬೆಂಬಲದೊಂದಿಗೆ ಸಾಂಗವಾಗಿ ನಡೆದಿತ್ತು. ಕೊರೋನಾ ಸಾಂಕ್ರಾಮಿಕದ ಎರಡು ವರ್ಷಗಳ ಕಾಲ ಸರ್ಕಾರವೇ ಜನರ ಜೀವದೊಂದಿಗೆ ಚೆಲ್ಲಾಟವಾಡಿ, ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಭ್ರಷ್ಟಾಚಾರ, ಬೆಲೆಯೇರಿಕೆ, ಸ್ವಜನಪಕ್ಷಪಾತ, ಮುಖ್ಯವಾಗಿ ಕೋಮುವಾದದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ಗೆ ನಾಗರಿಕ ಸಂಘಟನೆಗಳು ಅಭೂತಪೂರ್ವ ಬೆಂಬಲ ನೀಡಿ 2023ರ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳಲ್ಲಿ ಗೆದ್ದು ಬಹುಮತದ ಸರ್ಕಾರ ರಚನೆಯಾಗಲು ನೆರವಾಗಿದ್ದವು. ಅಷ್ಟೇ ಅಲ್ಲ ಮುಸ್ಲಿಂ ಸಮುದಾಯ ಸ್ಪಷ್ಟವಾಗಿ ಕಾಂಗ್ರೆಸ್ ಜೊತೆಗೆ ನಿಂತಿತ್ತು. ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಅತಿಹೆಚ್ಚು ಸಂಭ್ರಮಿಸಿದ್ದವರು ಕೋಮುವಾದದ ವಿರುದ್ಧ ಇದ್ದ ನೂರಾರು ಪ್ರಗತಿಪರ ಸಂಘಟನೆಗಳು.
ಆದರೆ, ಆ ನಂತರ ಆಗಿದ್ದೇನು? ಕಾಂಗ್ರೆಸ್ ನಾಯಕರಿಗೆ ತಮ್ಮ ವಿರುದ್ಧ ಇರುವವರು ಯಾರು ಎಂಬುದನ್ನೂ ಗೆಲುವಿಗೆ ಸಹಕರಿಸಿದ್ದ ಸಂಘಟನೆಗಳು ಪದೇ ಪದೇ ಹೇಳಬೇಕಾಯ್ತು. ಕೆಲವು ಆಯಕಟ್ಟಿನ ಜಾಗಗಳಲ್ಲಿ ಕೋಮುವಾದಿಗಳು ತೂರಿಕೊಂಡರು. ಅಕಾಡೆಮಿ, ಪ್ರಾಧಿಕಾರ, ಕೆಲವು ಸಮಿತಿಗಳು, ಸರ್ಕಾರದ ಪ್ರಕರಣಗಳನ್ನು ನಡೆಸುವ ವಕೀಲರ ತಂಡ ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಬಿಜೆಪಿಯ ಬೆಂಬಲಿಗರು ಸೇರಿಕೊಂಡಿದ್ದಾರೆ. ಕೆಲವು ಕಡೆ ಕಾಂಗ್ರೆಸ್ ಶಾಸಕರು ಸಚಿವರೇ ಅಂತವರನ್ನು ತಮ್ಮ ಪ್ರಭಾವ ಬಳಸಿ ಉಳಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆಗೆ ಸರ್ಜರಿ ಮಾಡೇ ಇಲ್ಲ. ಹಿಂದುತ್ವವಾದಿ ಸಂಘಟನೆಗಳನ್ನು ಕೋಮುಪ್ರಚೋದಕ ಭಾಷಣಕಾರರನ್ನು ಹದ್ದುಬಸ್ತಿನಲ್ಲಿಡುವ ಯಾವ ಉದ್ದೇಶವೂ ಕಾಂಗ್ರೆಸ್ಗೆ ಇಲ್ಲ. ಬಿಜೆಪಿ ಅಥವಾ ಹಿಂದುತ್ವ ಸಂಘಟನೆಗಳ ಮೇಲೆ ಪ್ರಹಾರ ನಡೆಸಿದರೆ ಎಲ್ಲಿ ಹಿಂದೂ ಮತಗಳು ಕೈ ಜಾರುತ್ತವೋ ಎಂಬ ಭಯವೋ, ತಾವು ಹಿಂದೂ ವಿರೋಧಿಗಳು ಎಂಬ ಆರೋಪದಿಂದ ಮುಕ್ತರಾಗುವ ಆಶಯವೋ ಯಾವುದೆಂದು ಅರ್ಥವಾಗುತ್ತಿಲ್ಲ.

ಕಳೆದ ವರ್ಷ ಶ್ರೀರಂಗಪಟ್ಟಣದಲ್ಲಿ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೆಸ್ಸೆಸ್ ಮುಖಂಡ, ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದಾಗ ಆತನ ವಿರುದ್ಧ ದೂರು ದಾಖಲಿಸಲಾಗಿತ್ತು. ಆದರೆ, ಆತನನ್ನು ಬಂಧಿಸದಿರುವ ನಿರ್ಧಾರವನ್ನು ಗೃಹ ಇಲಾಖೆ ಅಂದ್ರೆ ಸರ್ಕಾರ ನ್ಯಾಯಪೀಠದ ಮುಂದೆ ಪ್ರಕಟಿಸಿತ್ತು. ಇದರಿಂದಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದ, ಸಿದ್ದರಾಮಯ್ಯನವರ ಮೇಲೆ ಭರವಸೆ ಇಟ್ಟಿದ್ದ ಮುಸ್ಲಿಂ ಸಮುದಾಯ ಮಾತ್ರವಲ್ಲ ಕೋಮುವಾದಿಗಳ ವಿರುದ್ಧವಿರುವ ಪ್ರಗತಿಪರ ಸಂಘಟನೆಗಳಿಗೆ ನಿರಾಸೆಯಾಗಿತ್ತು. ಕರಾವಳಿಯಲ್ಲಿ ಈಗಲೂ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವ ಶಾಸಕರಾದ ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ಹರೀಶ್ ಪೂಂಜಾ ವಿರುದ್ಧದ ಪ್ರಕರಣಗಳಿಗೆ ಕೋರ್ಟ್ ತಡೆ ಕೊಟ್ಟಾಗ ಅದನ್ನು ತೆರವುಗೊಳಿಸುವ ಗೋಜಿಗೆ ಸರ್ಕಾರ ಹೋಗುತ್ತಿಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ದಕ್ಷಿಣ ಕನ್ನಡದಲ್ಲಿ ತಮ್ಮ ಏಳು ಶಾಸಕರು ಇದ್ದಾಗಲೂ ಕೋಮುವಾದಿಗಳ ಅಟ್ಟಹಾಸವನ್ನು ತಡೆಯಲು ಯಾವುದೇ ಪ್ರಯತ್ನ ಮಾಡಿಲ್ಲ. ಶರಣ್ ಪಂಪ್ವೆಲ್, ಪ್ರಭಾಕರ ಭಟ್ಟ, ಭಜರಂಗದಳದ ಪ್ರಮುಖರು, ಹೀಗೆ ಸಮಾಜದ ಶಾಂತಿ ಕದಡುತ್ತಿದ್ದ ಕೋಮು ಕ್ರಿಮಿಗಳನ್ನು ಮಟ್ಟ ಹಾಕಿಲ್ಲ.
ಗೋ ರಕ್ಷಣೆಯ ಹೆಸರಿನಲ್ಲಿ ಸುಲಿಗೆ, ದಾಂಧಲೆ ಮಾಡುತ್ತಿದ್ದ ಪುನೀತ್ ಕೆರೆಹಳ್ಳಿ ಈಗ ದೊಡ್ಡ ಹಿಂದೂ ಮುಖಂಡನಾಗಿದ್ದಾನೆ. 2023ರ ವಿಧಾನಸಭಾ ಚುನಾವಣೆಗೆ ಎರಡೇ ಎರಡು ತಿಂಗಳಿರುವಾಗ ಸಾತನೂರಿನಲ್ಲಿ ಸಂತೆಯಿಂದ ಖರೀದಿಸಿದ ಗೋವುಗಳನ್ನು ಸಾಗಣೆ ಮಾಡುತ್ತಿದ್ದ ವಾಹನವನ್ನು ತಡೆದು ಅದರ ಚಾಲಕ ಇದ್ರಿಸ್ ಪಾಷಾನನ್ನು ಅಟ್ಟಾಡಿಸಿ ಥಳಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಗುಜರಾತಿನಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ತಂಡವನ್ನು ವಾರದ ನಂತರ ಬಂಧಿಸಿದ್ದ ಪೊಲೀಸರು ಗಂಭೀರ ಪ್ರಕರಣ ದಾಖಲಿಸಿದ ಕಾರಣ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅದಾಗಿ ತಿಂಗಳೊಳಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಆತನ ಜಾಮೀನು ರದ್ದುಪಡಿಸುವ ಪ್ರಯತ್ನ ಮಾಡಿಲ್ಲ. ಆ ನಂತರ ಆತ ಹೀರೋ ಆಗಿದ್ದಾನೆ. ಸರಿಯಾದ ಪೂರ್ವತಯಾರಿ ಮಾಡಿಕೊಳ್ಳದೇ ಆತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ ಕಾರಣ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕುವಂತಾಯ್ತು. ಸಿ ಎಂ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದ ಪ್ರಕರಣ, ಜಮೀರ್ ವಿರುದ್ಧದ ನಿಂದನೆ, ರೈಲ್ವೆ ನಿಲ್ದಾಣದಲ್ಲಿ ದಾಂಧಲೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ ಈ ಕೋಮುವಾದಿಯ ಕೂದಲೂ ಕೊಂಕಿಲ್ಲ. ಬೇರೆ ಬೇರೆ ಜಿಲ್ಲೆಗಳಲ್ಲಿ ಹಿಂದುತ್ವ ಗುಂಪುಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮುಖ್ಯ ಭಾಷಣಕಾರನಾಗಿ ಹೋಗುವಷ್ಟು ಮುಖ್ಯ ವ್ಯಕ್ತಿಯಾಗಿದ್ದಾನೆ.
ಕಳೆದ ಸಂಕ್ರಾಂತಿಯ ಸಂದರ್ಭದಲ್ಲಿ ಮಂಡ್ಯದ ಕಾರ್ಯಕ್ರಮದಲ್ಲಿ ಪುನೀತ್ ಕೆರೆಹಳ್ಳಿ ಮುಖ್ಯ ಅತಿಥಿಯಾದರೆ ಆತನ ಪಕ್ಕದ ಕುರ್ಚಿಯಲ್ಲಿ ಕಾಂಗ್ರೆಸ್ ಶಾಸಕ ಗಣಿಗ ರವಿ ಕೂತಿದ್ದರು. ಇದು ಮಂಡ್ಯದ ಕಾಂಗ್ರೆಸ್ ಮತದಾರರಿಗೆ, ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಯಾವ ಸಂದೇಶ ಕೊಡುತ್ತದೆ ಎಂಬ ಬಗ್ಗೆ ಶಾಸಕರಿಗೆ ಸ್ವಲ್ಪವೂ ಗಮನ ಇಲ್ಲ. ಆ ವ್ಯಕ್ತಿ ಎಂತವನು, ಆತನ ಮೇಲೆ ಇರುವ ಆರೋಪಗಳೇನು, ಕಾಂಗ್ರೆಸ್ ನಾಯಕರ ವಿರುದ್ಧ ಆತ ಮಾಡುತ್ತಿರುವ ವಿಡಿಯೋ, ಹೇಳಿಕೆಗಳನ್ನು ಶಾಸಕರು ಗಮನಿಸಿಲ್ಲವೇ? ಕನಿಷ್ಠ ತಾನು ಭಾಗಿಯಾಗುವ ಕಾರ್ಯಕ್ರಮದಲ್ಲಿ ಯಾರೆಲ್ಲ ಅತಿಥಿಗಳಿದ್ದಾರೆ ಎಂದು ತಿಳಿದುಕೊಳ್ಳುವುದು ಶಾಸಕನ ಕರ್ತವ್ಯ ಅಲ್ಲವೇ? ಅಲ್ಲಿಗೆ ಹೋದ ಮೇಲಾದರೂ ಆತನೊಂದಿಗೆ ವೇದಿಕೆ ಹಂಚಿಕೊಳ್ಳದೇ ಕೋಮುವಾದಿಗಳ ವಿರುದ್ಧದ ತನ್ನ ನಿಲುವು ತೋರಿಸಬೇಕಿತ್ತು. ಆದರೆ ಇವರಿಗೆಲ್ಲ ಅದು ಬೇಕಿಲ್ಲ. ಹೇಗಾದರೂ ಗೆದ್ದರೆ ಸಾಕು.

ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಅದನ್ನೇ ಕಾಂಗ್ರೆಸ್ ವಿರುದ್ಧ ಚುನಾವಣಾ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ನ ನಾಯಕರು ಜೈ ಭಜರಂಗಿ ಎಂಬ ಘೋಷಣೆ ಕೂಗಿ ಚುನಾವಣಾ ಪ್ರಚಾರ ನಡೆಸಿದ್ದರು. ಪ್ರಧಾನಿ ಮೋದಿಯವರೂ ಇದನ್ನು ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಬಳಸಿದ್ದರು. ಆದರೆ, ಸರ್ಕಾರ ರಚನೆಯಾಗಿ ಗೃಹಖಾತೆ ಡಾ ಜಿ ಪರಮೇಶ್ವರ್ ಅವರಿಗೆ ಹಂಚಿಕೆಯಾಗುತ್ತದೆ ಎಂದು ಸೂಚನೆ ಸಿಕ್ಕಿದ ಕೂಡಲೇ ಉಡುಪಿಯ ಪೇಜಾವರ ಸ್ವಾಮಿ ಬೆಂಗಳೂರಿನ ಪರಮೇಶ್ವರ್ ಮನೆಗೆ ಹೋಗಿ ಭೇಟಿ ಮಾಡಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಅದೇ ರೀತಿ ಗೃಹ ಇಲಾಖೆ ಸಂಘಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದೇ ಸುಮ್ಮನಿದೆ ಎಂಬ ಆರೋಪ ಒಂದೂವರೆ ವರ್ಷಗಳಿಂದ ಜೀವಂತವಾಗಿದೆ.
ಇದರ ಮಧ್ಯೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೂ ಬಿಜೆಪಿಯವರು ಕೋಮು ಬಣ್ಣ ಬಳಿಯಲು ಯತ್ನಿಸಿದ್ದರು. ಬಿಹಾರದ ಯುವಕ ಕುಡಿತ ಮತ್ತಿನಲ್ಲಿ ಬ್ಲೇಡಿನಿಂದ ಹಸುವಿನ ಕೆಚ್ಚಲಿಗೆ ಗಾಯ ಮಾಡಿದ ಪ್ರಕರಣಕ್ಕೆ ವಕ್ಫ್ ವಿಚಾರ ಲಿಂಕ್ ಮಾಡಿದ್ದರು. ಚಾಮರಾಜಪೇಟೆ ಶಾಸಕ, ಸಚಿವ ಜಮೀರ್ ಅಹಮದ್ ಖಾನ್ ಹಿಂದೂಗಳನ್ನು ಓಡಿಸಲು ಭಯದ ವಾತಾವರಣ ಉಂಟು ಮಾಡಲು ಹೀಗೆ ಮಾಡಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಹೇಳಿದರೆ, ವಿಪಕ್ಷ ನಾಯಕ ಆರ್ ಅಶೋಕ್ “ಚಾಮರಾಜಪೇಟೆಯ ಪಶು ಆಸ್ಪತ್ರೆಯನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಅದಕ್ಕಾಗಿ ನಡೆದ ಪ್ರತಿಭಟನೆಗೆ ಈ ಹಸುಗಳನ್ನು ಮಾಲಕ ಕರ್ಣ ಕೊಂಡೊಯ್ದಿದ್ದ. ಅದಕ್ಕಾಗಿ ದ್ವೇಷದಿಂದ ಜಮೀರ್ ಈ ಕೃತ್ಯ ಮಾಡಿಸಿದ್ದಾರೆ” ಎಂದು ಆರೋಪಿಸಿದ್ದರು. ಒಂದೇ ದಿನದೊಳಗೆ ಬಿಹಾರ ಮೂಲದ ಆರೋಪಿಯ ಬಂಧನವಾಗಿದೆ. ಆದರೆ, ಬಿಜೆಪಿಯ ನಾಯಕರು ಈ ಪ್ರಕರಣವನ್ನು ಕಾಂಗ್ರೆಸ್ ಮತ್ತು ಸರ್ಕಾರದ ವಿರುದ್ಧ ಅಪಪ್ರಚಾರಕ್ಕೆ ಬಳಸಿಕೊಂಡಿದ್ದರು. ಹೀಗೆ ಅಪಪ್ರಚಾರ ದೊಂಬಿ ಮಾಡಿದವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಿಲ್ಲ. ಬದಲಿಗೆ ಸಚವರೇ ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಮೂರು ಹಸುಗಳನ್ನು ಆ ಕುಟುಂಬಕ್ಕೆ ಕೊಡಿಸಿದ್ದರು.
ಒಂದು ಕಡೆ ಕೋಮುವಾದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಲ್ಲಿ ಸತತ ಸೋಲು, ಮತ್ತೊಂದು ಕಡೆ ತಾವೂ ಕೋಮುವಾದಿಗಳಂತೆ ಹೇಳಿಕೆ ನೀಡುವುದು, ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು, ಸಂಘಪರಿವಾರದ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವುದು, ಅತಿಥಿಗಳಾಗಿ ಹೋಗುವುದು ಇವೆಲ್ಲ ಕಾಂಗ್ರೆಸ್ನ ಮೆದು ಹಿಂದುತ್ವದ ನಿಚ್ಚಳ ನಿದರ್ಶನಗಳು. ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟಿರುವವರಿಗೆ ಭ್ರಮನಿರಸನ ಉಂಟು ಮಾಡುತ್ತಿರುವುದು ವಾಸ್ತವ.

ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಇರುವ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುವ ಪ್ರಯತ್ನ ಸರ್ಕಾರ ಮಾಡಿಲ್ಲ. ಅದರ ಬಗ್ಗೆ ಚಕಾರ ಎತ್ತಿಲ್ಲ. ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿಲ್ಲ. ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡದಂತೆ ತಡೆಯುವುದು ಕಳೆದ ವರ್ಷವೂ ನಡೆದಿತ್ತು. ವಕ್ಫ್ ಜಮೀನು ವಿವಾದವನ್ನು ಕೋಮುವಾದದ ಪ್ರಚಾರಕ್ಕೆ ಮತ್ತು ಕಾಂಗ್ರೆಸ್ ವಿರುದ್ಧ ಅಪಪ್ರಚಾರಕ್ಕೆ ಬಿಜೆಪಿ ಬಳಸಿಕೊಂಡಿತ್ತು. ಆದರೆ ಕಾಂಗ್ರೆಸ್ನ ಕೆಲವೇ ಬೆರಳೆಣಿಕೆಯ ಸಚಿವರನ್ನು ಬಿಟ್ಟರೆ ಮಿಕ್ಕ ಯಾರೊಬ್ಬರೂ ಅದರ ವಿರುದ್ಧ ಮಾತಾಡಿಲ್ಲ. ಸರ್ಕಾರದ ಬೆಂಬಲಕ್ಕೆ ಸ್ವತಃ ಸಚಿವರೇ ನಿಂತಿಲ್ಲ. ಇಂತಹ ಉದಾಸೀನತೆ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಗೆದ್ದಲು ಹಿಡಿಸುತ್ತಿದೆ. ಮೊದಲಿಗೆ ಕೋಮುವಾದದ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಕಾಂಗ್ರೆಸ್ ಪಕ್ಷ, ನಾಯಕರು ಸ್ಪಷ್ಟಪಡಿಸಬೇಕು.
***
ತೀರಾ ಹಿಂದಕ್ಕೆ ಹೋಗೋದು ಬೇಡ. 2013-2018ರವರೆಗೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ, ಅರಸು ನಂತರದ ಅತ್ಯುತ್ತಮ ಸರ್ಕಾರ, ಅತ್ಯುತ್ತಮ ಮುಖ್ಯಮಂತ್ರಿ, ಸ್ವಚ್ಛ ರಾಜಕಾರಣಿ ಎಂಬ ಹೆಗ್ಗಳಿಕೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಜೊತೆಗಿತ್ತು. ಅದಕ್ಕೂ ಮುನ್ನ ಅಧಿಕಾರದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ನಡೆದ ಗಣಿ ಹಗರಣ, ಗಣಿಧಣಿಗಳೆಂದು ಕರೆಸಿಕೊಂಡಿದ್ದ ಬಳ್ಳಾರಿಯನ್ನು ತಮ್ಮ ರಿಪಬ್ಲಿಕ್ ಮಾಡಿಕೊಂಡಿದ್ದ ಬಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರ ಪ್ರಭಾವ ಬಿಜೆಪಿಯ ಹೈಕಮಾಂಡ್ವರೆಗೂ ಚಾಚಿತ್ತು. ಸುಷ್ಮಾ ಸ್ವರಾಜ್ ಅಮ್ಮನವರ ಕೃಪೆ, ಆಶೀರ್ವಾದದಿಂದ ಈ ಇಬ್ಬರು ಪ್ರಭಾವಿಗಳು ಎನಿಸಿದ್ದರು. ಆ ಸಮಯದಲ್ಲಿ ರೆಡ್ಡಿಯ ವಿರುದ್ಧ ವಿಧಾನಸಭೆಯಲ್ಲಿ ರಟ್ಟೆ- ತೊಡೆ ತಟ್ಟಿ ಚಾಲೆಂಜ್ ಮಾಡಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು.
ಅಷ್ಟೇ ಅಲ್ಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಒಂದು ರೂಪಾಯಿಗೆ ಕೇಜಿ ಅಕ್ಕಿ ನೀಡುವ ಅನ್ನಭಾಗ್ಯ ಜಾರಿಗೊಳಿಸಿ ಬಡವರ ಕಣ್ಮಣಿ ಎನಿಸಿದ್ದರು. ಒಂದೇ ವರ್ಷದಲ್ಲಿ ಉಚಿತ ಅಕ್ಕಿ ಕೊಡುವ ಯೋಜನೆ ಜಾರಿಗೊಳಿಸಿದ್ದರು. ಇದರ ಜೊತೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಹಾಲು ಕೊಡುವ ಕ್ಷೀರಭಾಗ್ಯ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಭಾಗ್ಯ … ಹೀಗೆ ಭಾಗ್ಯಗಳ ಸರದಾರ ಎನಿಸಿದ್ದರು.
ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ, ಕಾಂಗ್ರೆಸ್ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತ್ತು. ವೈಯಕ್ತಿಕ ದ್ವೇಷದಿಂದಾದ ಹಿಂದೂ ಕಾರ್ಯಕರ್ತರ ಕೊಲೆ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳನ್ನು ತಮ್ಮ ರಾಜಕೀಯ ತೆವಲಿಗೆ ಬಳಸಿಕೊಂಡ ಬಿಜೆಪಿಯ ಅಜೆಂಡ ಫಲ ನೀಡಿತ್ತು. ಎಷ್ಟೇ ಉತ್ತಮ ಕೆಲಸ ಮಾಡಿದ್ದರೂ ಸರ್ಕಾರದ ಮೇಲೆ ಆರೋಪ ಹೊರಿಸಿ ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಬಿಂಬಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು. ಕಾಂಗ್ರೆಸ್ನ ಕೆಲ ನಾಯಕರು ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವುದನ್ನು ಸಹಿಸಲಿಲ್ಲ. ಒಟ್ಟಿನಲ್ಲಿ ಬಡವರು, ಶೋಷಿತ ಸಮುದಾಯದ ಏಳಿಗೆಗಾಗಿ ಹಲವು ಯೋಜನೆಗಳನ್ನು ಕೊಟ್ಟಿದ್ದ ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರನ್ನು ಜನ ಎರಡನೇ ಬಾರಿಗೆ ಮುಖ್ಯಮಂತ್ರಿ ಮಾಡಲಿಲ್ಲ. ಜೆಡಿಎಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ, ದೊಡ್ಡ ಮಟ್ಟದ ಆಪರೇಷನ್ಗೆ ಬಲಿಯಾದ ಎರಡೂ ಪಕ್ಷಗಳ 14 ಶಾಸಕರು ಬಿಜೆಪಿ ಕೈಗೆ ಅಧಿಕಾರದ ದಂಡ ನೀಡುವಲ್ಲಿ ಯಶಸ್ವಿಯಾದರು. ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗಲೂ, ಅಧಿಕಾರದಲ್ಲಿ ಇದ್ದಾಗಲೂ ಕೋಮು ಘರ್ಷಣೆ, ಗಲಭೆಗಳನ್ನು ನಿರಂತರವಾಗಿ ನಡೆಯುವಂತೆ ನೋಡಿಕೊಂಡಿತ್ತು.
‘ವಿಶ್ವಗುರುʼ ತನ್ನ ನಾಗರಿಕರನ್ನು ಕೈಕೋಳಗಳಲ್ಲಿ ಸ್ವಾಗತಿಸಿತು; ಕೊಲಂಬಿಯಾ ದೇಶ ʼರಾಷ್ಟ್ರಪತಿ ವಿಮಾನವನ್ನೇ ಕಳಿಸಿತು!
ಈಗ ಸ್ಪಷ್ಟ ಬಹುಮತವಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕೋಮುವಾದವನ್ನು ಮಟ್ಟ ಹಾಕಲು ಪ್ರಯತ್ನ ಮಾಡಿಲ್ಲ ಎಂದಾದರೆ ಮುಂದೆ ಯಾವತ್ತೂ ಸಾಧ್ಯವಾಗದು. ಅಂತಹ ಇಚ್ಛಾಶಕ್ತಿ ಪ್ರದರ್ಶಿಸಲು ಸಿದ್ದರಾಮಯ್ಯ ಸರ್ಕಾರಕ್ಕೆ ಸಾಧ್ಯವಾಗಬೇಕಾದರೆ ಮೊದಲು ತಮ್ಮ ಶಾಸಕರಿಗೆ ಕಾಂಗ್ರೆಸ್ನ ಜಾತ್ಯತೀತ ಸಿದ್ಧಾಂತ, ರಾಹುಲ್ ಗಾಂಧಿ ಅವರಿಗೆ ಆರೆಸ್ಸೆಸ್ ಬಿಜೆಪಿ ಬಗ್ಗೆ ಇರುವ ಸ್ಪಷ್ಟತೆ, ಕೋಮುವಾದದ ವಿರುದ್ಧದ ಅವರ ದಿಟ್ಟ ನಿಲುವುಗಳನ್ನು ಅರ್ಥ ಮಾಡಿಸುವ ಅಗತ್ಯವಿದೆ. ಆದರೆ ಅದನ್ನು ಮಾಡುವವರು ಯಾರು?

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.