ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಮಂಜೂರು ಮಾಡಿದ್ದ ಇಎಸ್ಐ ಆಸ್ಪತ್ರೆ ಇನ್ನೂ ಉಡುಪಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರ ಆಸ್ಪತ್ರೆ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಜಿ.ಎ. ಕೋಟೆಯಾರ್ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಕೇಂದ್ರ ಸರಕಾರ ಹಲವು ಜಿಲ್ಲೆಗಳಿಗೆ ಇಎಸ್ ಐ ಆಸ್ಪತ್ರೆ ಮಂಜೂರು ಮಾಡಿದೆ. ಆದರೆ ಉಡುಪಿಗೆ ಇನ್ನೂ ಬಂದಿಲ್ಲ. ಇದರಿಂದಾಗಿ ಕಾರ್ಮಿಕರಿಗೆ, ಬಡ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ, ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನ ಸೇರಿ ನಮ್ಮ ಹಕ್ಕನ್ನು ಕೇಳಿ ಪಡೆಯುತ್ತೇವೆ ಎಂದು ಹೋರಾಟಗಾರ ಜಿ.ಎ .ಕೋಟೆಯಾರ್ ಹೇಳಿದರು. ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದ ಕಾಮನ್ ಪೀಪಲ್ಸ್ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ಜಿ.ಎ. ಕೋಟೆಯಾರ್, ಮಹಿಳಾ ಘಟಕದ ಅಧ್ಯಕ್ಷ ಭಾನುಮತಿ, ಯುವ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
