ಶಾಲೆಗಾಗಿ ಮಂಜೂರಾಗಿದ್ದ ಭೂಮಿಯನ್ನು ಕೆಲವು ವ್ಯಕ್ತಿಗಳು ಅನಧಿಕೃತವಾಗಿ, ಕಾನೂನು ಬಾಹಿರವಾಗಿ ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯಾರೇ ಆಗಲಿ ಭೂಕಬಳಿಕೆ ಮಾಡದಂತೆ ತಡೆಯಬೇಕು ಎಂದು ಆರೋಪಿಸಿ ಮೈಸೂರು ತಾಲೂಕಿನ ಭೋಗಾದಿ ಗ್ರಾಮಸ್ಥರು ಶಾಂತಿಯುತ ಪ್ರತಿಭಟನೆ ಮಾಡಿದ್ದಾರೆ.
ಭೋಗಾದಿಯ ಹರಿಗಿರಿ ಸೇವಾ ಪ್ರತಿಷ್ಠಾನದ ಬಳಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಭೂಮಿಯನ್ನು ಸಾರ್ವಜನಿಕ ಉದ್ದೇಶವಲ್ಲದೇ ಬೇರೆ ಉದ್ದೇಶಕ್ಕೆ ಬಳಸದಂತೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗ್ಯಾರೇಜ್ ರವಿ ಮಾತನಾಡಿ, “ಭೋಗಾದಿ ಗ್ರಾಮದಲ್ಲಿನ ಸರ್ವೇ ನಂಬರ್ 32ರ ಭೂಮಿ ವಿವಾದಕ್ಕೊಳಪಟ್ಟಿದ್ದು, 1997-98ನೇ ಇಸವಿಯಲ್ಲಿ ಶಾಲೆ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಸರ್ಕಾರದಿಂದ 25 ಗುಂಟೆ ಜಾಗ ಮಂಜೂರಾಗಿದೆ. ಆದರೆ ಖಾಸಗಿ ವ್ಯಕ್ತಿ ಎಂ ನಾಗರಾಜು ಎಂಬುವರು ಭೂಮಿಯನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ಈ ಕುರಿತು ತಹಶೀಲ್ದಾರ್ ಮಹೇಶ್, ಎಸಿಪಿ ಗಜೇಂದ್ರ ಪ್ರಸಾದ್ ಮತ್ತು ಸರಸ್ವತಿಪುರಂ ಠಾಣಾ ಇನ್‌ಸ್ಪೆಕ್ಟರ್ ಪುರುಷೋತ್ತಮ್ ನೇತೃತ್ವದಲ್ಲಿ ಫೆಬ್ರವರಿ 4ರಂದು ಶಾಂತಿ ಸಭೆ ನಡೆದು, ಭೂಮಿಯನ್ನು ಯತಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ್ದರೂ ಕೂಡಾ ಖಾಸಗಿ ವ್ಯಕ್ತಿ ಏಕಾಏಕಿ ಜೆಸಿಬಿ ಕರೆಸಿ ಜಾಗದಲ್ಲಿದ್ದ ಒಂದು ಪಾಳು ಮನೆಯನ್ನೂ ತೆರವುಗೊಳಿಸಿದ್ದಾರೆ. ಅಲ್ಲದೆ ಆ ಜಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಹಿಳೆಯರ ಘನತೆ, ಮಾನವೀಯ ಮೌಲ್ಯ ಉಳಿಸಲು ‘ಯುವ ಜನರ ಸಂಕಲ್ಪ’ ಸಮಾವೇಶ
“ಸರ್ಕಾರಿ ಜಾಗ ಸಾರ್ವಜನಿಕ ಉದ್ದೇಶಕಷ್ಟೇ ಬಳಕೆಯಾಗಬೇಕು. ಖಾಸಗಿ ವ್ಯಕ್ತಿಯ ಪಾಲಾಗಬಾರದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೇ ಬಿಟ್ಟುಕೊಡಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಅರುಣ, ದೊಡ್ಲಿಂಗನ ರವಿ, ಪೈಲ್ವಾನ್ ಕೃಷ್ಣ, ತ್ಯಾಗು, ಕಿರಣ್ ಕುಮಾರ್, ಭರತ್, ಕಾಂತರಾಜು, ರಘು, ಹಾಲಿನ ರೇವಣ್ಣ, ಶಶಿ, ಈಶ್ವರ್, ವಸಂತ್, ಪ್ರೇಮಸಾಗರ್, ಕೃಷ್ಣ, ಅವಿನಾಶ್, ಪ್ರಜು, ಸತ್ಯ ಮತ್ತು ಭೋಗಾದಿ ಗ್ರಾಮಸ್ಥರು ಇದ್ದರು.
