ಬೀದರ್‌ನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಎನ್ನಲಾದ ರಾಜು ಕಪನೂರ್ ಸೇರಿದಂತೆ ಐವರನ್ನು ಗುರುವಾರ ಸಂಜೆ ಜೈಲಿನಿಂದ ಬಿಡುಗಡೆಗೊಳಿಸಲಾಯಿತು.
ರಾಜು ಕಪನೂರ, ನಂದಕುಮಾರ ನಾಗಭುಜಂಗೆ, ಗೋರಖನಾಥ, ಸತೀಶ ಹಾಗೂ ರಾಮನಗೌಡ ಅವರು ಬೀದರ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ನಿನ್ನೆ ಈ 5 ಜನರಿಗೆ ಜೆಎಂಎಫ್‌ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಆರೋಪಿಗಳ ಪರ ವಕೀಲ ಅರುಣಕುಮಾರ ಮಾಧ್ಯಮಗಳೊಂದಿಗೆ ಮಾತನಾಡಿ, ‘ಸಚಿನ್ ಪಾಂಚಾಳ್ ಗುತ್ತಿಗೆದಾರನೇ ಅಲ್ಲ. ಎಲ್ಲರನ್ನೂ ನಂಬಿಸಿ, ಮೋಸ ಮಾಡಿ ಹಣ ಲೂಟಿ ಮಾಡುತ್ತಿದ್ದ. ಜೂಜು, ರಮ್ಮಿ ಗೇಮ್ ಆಡಿ ಲಕ್ಷಾಂತರ ಸಾಲ ಮಾಡಿದ್ದ. ಸಚಿನ್‌ಗೆ ರಾಜು ಕಪನೂರ ಹಣ ಕೊಟ್ಟಿದ್ದರು. ಮರಳಿ ಕೊಡುವಂತೆ ಕೇಳಿದ್ದರು. ಅದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ’ ಎಂದರು.
ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಮರಣ ಪತ್ರ ಬರೆದಿಟ್ಟು ಸಚಿನ್ ಪಾಂಚಾಳ್ ಡಿ.26ರಂದು ರೈಲಿನಡಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.