“ಜಮೀನು ಗ್ರಾಮೀಣ ಜನರ ಉತ್ಪಾದನೆಯ ಏಕೈಕ ಮಾರ್ಗವಾಗಿದೆ. ಗಜೇಂದ್ರಗಡ ತಾಲ್ಲೂಕಿನಲ್ಲಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಿಲ್ಲ. ಅರ್ಜಿ ಸಲ್ಲಿಸಿದವರಿಗೆ ಮನೆ, ನಿವೇಶನ ಹಂಚಿಕೆ ಮಾಡಿಲ್ಲ. ಬಗರ್ ಹುಕುಂ ಸಾಗುವಳಿ ಚೀಟಿ, ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು ಬಸವರಾಜ ಬೇಸರ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶಿಲ್ದಾರ್ ಕಚೇರಿ ಮುಭಾಂಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ನೀಡುವಂತೆ ಪ್ರತಿಭಟಿಸಿ ತಹಸೀಲ್ದಾರ್ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ “ಬಗರ್ ಹುಕಂ ಸಾಗುವಳಿದಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಬಾರಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಎಸಿ ಸೇರಿ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಯಾರೂ ಗಮನ ಹರಿಸಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರೈತರನ್ನು ಒಕ್ಕಲೆಬ್ಬಿಸದೇ ಕಾಯ್ದೆಯಡಿ ಪರಿಶೀಲಿಸಿ ಹಕ್ಕುಪತ್ರ, ಸಾಗುವಳಿ ಚೀಟಿ ನೀಡಬೇಕು” ಎಂದು ಹೇಳಿದರು.
“ರಾಜ್ಯದಲ್ಲಿ ಲಕ್ಷಾಂತರ ಮಂದಿ ಸಾಗುವಳಿದಾರರು 3 ತಲೆ ಮಾರುಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಅದನ್ನು ಸಕ್ರಮಗೊಳಿಸಲು ನಮೂನೆ 50,53,57 ರಲ್ಲಿ ಅರ್ಜಿ ಹಾಕಿದ ಸಾಗುವಳಿದಾರರಿಗೆ ಅರ್ಜಿ ಪರಿಶೀಲಿಸಿ ಸಾಗುವಳಿ ಚೀಟಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ” ಬಾಲು ರಾಠೋಡ್ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎಂ ಎಸ್ ಹಡಪದ ಮಾತನಾಡಿ “ತಾಲ್ಲೂಕಿನ ಜನರು ಬಗರ್ ಹುಕುಂ ಸಾಗುವಳಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಅನೇಕ ವರ್ಷಗಳು ಕಳೆದಿದೆ. ಭೂಮಿ ಮಂಜೂರು ಮಾಡುವಂತೆ ಸರ್ಕಾರಿ ಆದೇಶ ಇದ್ದರೂ, ಭೂಮಿ ಮಂಜೂರು ಮಾಡುತ್ತಿಲ್ಲ. ತಾಲ್ಲೂಕಿನಲ್ಲಿ ಸಾವಿರಾರು ಅರ್ಜಿಗಳು ಇತ್ಯರ್ಥವಾಗಿಲ್ಲ. ಪುನಃ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕೊಡಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಇರುವ ಭೂ ಮಂಜೂರಾತಿ ಸಮಿತಿಯನ್ನು ತಕ್ಷಣವೇ ಕರೆದು ಸಮಸ್ಯೆ ಇತ್ಯರ್ಥಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜು ಕಪನೂರ್ ಸೇರಿ ಐವರಿಗೆ ಜಾಮೀನು; ಜೈಲಿನಿಂದ ಬಿಡುಗಡೆ
ಪ್ರತಿಭಟನೆಯಲ್ಲಿ ಪೀರು ರಾಠೋಡ, ಚೆನ್ನಪ್ಪ ಗುಗಲೋತ್ತರ, ದಾವಲಸಾಬ ತಾಳಿಕೋಟಿ, ಚಂದ್ರು ರಾಠೋಡ, ಮೆಹಬೂಬ್ ಹವಾಲ್ದಾರ್, ಗಣೇಶ ಮಾಳೋತ್ತರ, ರೂಪ್ಲೇಶ ಮಾಳೋತ್ತರ, ವಿರೇಶ ರಾಠೋಡ, ಕುಮಾರ ರಾಠೋಡ, ಶಾಮಿದಸಾಬ ದಿಂಡವಾಡ, ದೀಪಲೇಪ್ಪ ರಾಠೋಡ, ದಿಂಡುರು ಚವಳವ್ವ ರಾಠೋಡ ಗುಬಾವ್ವ ರಾಠೋಡ ರೇಣವ್ವ ಗುಗಳೋತ್ತರ ಕೃಷ್ಣಪ್ಪ ಮಾಳೋತ್ತರ ಶಿವಪ್ಪ ಮಾಳೋತ್ತರ ಹರೇಶ, ಸೇರಿದಂತೆ ಗಜೇಂದ್ರಗಡ, ಬೈರಾಪೂರ, ಕಾಲಕಾಲೇಶ್ವರ, ಗೌಡಗೇರಿ,ರೈತರು ಕೃಷಿಕೂಲಿಕಾರರು ಸೇರಿದಂತೆ ಇತರರು ಇದ್ದರು.
