ಭಾರತೀಯ ರಿಸರ್ವ್ ಬ್ಯಾಂಕ್ನ(ಆರ್‌ಬಿಐ) ಮಾನಿಟರಿ ಪಾಲಿಸಿ ಕಮಿಟಿ ರಿಪೋದರವನ್ನು ಶೇ. 0.25 ರಷ್ಟು ಇಳಿಕೆ ಮಾಡುವ ನಿರ್ಧಾರ ಕೈಗೊಂಡಿದೆ. ಎರಡು ದಿನಗಳಿಂದ ನಡೆಯುತ್ತಿರುವ ಎಂಪಿಸಿ ಸಭೆಯ ಬಳಿಕ ಇಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
0.25 ಇಳಿಕೆಯಿಂದ ಶೇ. 6.50ರಷ್ಟಿದ್ದ ಬಡ್ಡಿದರ ಶೇ. 6.25ಕ್ಕೆ ಕಡಿತಗೊಳ್ಳುತ್ತದೆ. 2020ರ ಬಳಿಕ ಮೊದಲ ಬಾರಿಗೆ ಆರ್ಬಿಐನ ರಿಪೋ ದರ ಇಳಿಕೆ ಆಗಿದೆ. ಈ ಬಾರಿ 25 ಮೂಲಾಂಕಗಳಷ್ಟು ಇಳಿಕೆ ಆಗುತ್ತದೆ ಎಂದು ಬಹುತೇಕ ಆರ್ಥಿಕ ತಜ್ಞರು ನಿರೀಕ್ಷಿಸಿದ್ದರು. ಎಂಪಿಸಿಯಲ್ಲಿರುವ ಎಲ್ಲ ಆರು ಸದಸ್ಯರು ಸರ್ವಾನುಮತದಿಂದ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲು ನಿರ್ಧರಿಸಿದ್ದಾರೆ.
ಹಣದುಬ್ಬರ ನಿಯಂತ್ರಣಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಣಕಾಸು ನೀತಿ ಸಮಿತಿಯು ರಿಪೋ ದರ ಇಳಿಸುವ ನಿರ್ಧಾರ ತೆಗೆದುಕೊಂಡಿದೆ. ಈ ರಿಪೋ ದರ ಇಳಿಕೆಯಿಂದ ಬ್ಯಾಂಕುಗಳ ಸಾಲದರಗಳು ಕಡಿಮೆಗೊಳ್ಳುವ ಸಾಧ್ಯತೆ ಇದೆ. ಅದಾದಲ್ಲಿ ಸಾಲದ ಇಎಂಐ ಮೊತ್ತ ತುಸು ಕಡಿಮೆ ಆಗಬಹುದು.
ಏನಿದು ರಿಪೋ ದರ?
ರಿಪೋ ಎಂದರೆ ರೀ ಪರ್ಚೇಸಿಂಗ್ನ ಸಂಕ್ಷಿಪ್ತ ರೂಪ. ಇದು ಆರ್ಬಿಐನ ಬಡ್ಡಿದರವಾಗಿದೆ. ಕಮರ್ಷಿಯಲ್ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರ ಇದಾಗಿದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬಡ್ಡಿದರ ನಿಗದಿ ಮಾಡಲು ಈ ರಿಪೋ ದರ ಆಧಾರವಾಗಿರಬಹುದು.
ರಿವರ್ಸ್ ರಿಪೋ ಎಂದರೆ, ಕಮರ್ಷಿಯಲ್ ಬ್ಯಾಂಕುಗಳು ತಮ್ಮಲ್ಲಿರುವ ಫಂಡ್ ಅನ್ನು ಆರ್ಬಿಐನಲ್ಲಿ ಇರಿಸಿದರೆ ಸಿಗುವ ಬಡ್ಡಿ. ಇದೂ ಕೂಡ ಬ್ಯಾಂಕುಗಳ ಠೇವಣಿ ದರಗಳಿಗೆ ಆಧಾರವಾಗಬಹುದು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುರಹಂಕಾರಿ ದೊಡ್ಡಣ್ಣನ ಎದುರು ಮಂಡಿಯೂರಿದ ಮೋದಿ
2023ರ ಫೆಬ್ರುವರಿಯಿಂದ, ಅಂದರೆ ಎರಡು ವರ್ಷದಿಂದ ರಿಪೋ ದರ ಶೇ. 6.50ರಲ್ಲೇ ಇತ್ತು. 2020ರ ಮೇ ಬಳಿಕ ಆರ್‌ಬಿಐ ತನ್ನ ದರಗಳನ್ನು ಇಳಿಸಿದ್ದೇ ಇಲ್ಲ. ನಾಲ್ಕರಿಂದ ಐದು ವರ್ಷದ ಬಳಿಕ ಆರ್‌ಬಿಐ ಮೊದಲ ಬಾರಿಗೆ ರಿಪೋ ದರ ಇಳಿಸಿದಂತಾಗಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರಿಗೆ ಇದು ಮೊದಲ ಎಂಪಿಸಿ ಸಭೆ. ಕಳೆದ ತಿಂಗಳಷ್ಟೇ ಅವರು ಆರ್ಬಿಐನ 26ನೇ ಗವರ್ನರ್ ಆಗಿ ನೇಮಕಗೊಂಡಿದ್ದರು. ಆರ್ಬಿಐನ ಎಂಪಿಸಿಯಲ್ಲಿ ಆರು ಸದಸ್ಯರಿದ್ದಾರೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ಸಮಿತಿಯ ಮುಖ್ಯಸ್ಥರು. ಈ ಸಮಿತಿಯಲ್ಲಿ ಗವರ್ನರ್ ಅವರನ್ನೂ ಸೇರಿ ಮೂವರು ಸದಸ್ಯರು ಆರ್ಬಿಐನ ಅಧಿಕಾರಿಗಳೇ ಆಗಿದ್ದಾರೆ. ಇನ್ನುಳಿದ ಮೂವರು ಸ್ವತಂತ್ರ ಸದಸ್ಯರಾಗಿದ್ದಾರೆ.
