ಬೆಂಗಳೂರು-ಮೈಸೂರು ನಡುವೆ ಎಕ್ಸ್‌ಪ್ರೆಸ್-ವೇ ಆರಂಭವಾದಾಗಿನಿಂದಲೂ ನಾನಾ ರೀತಿಯ ಸಮಸ್ಯೆಗಳು, ಅವಾಂತರಗಳಿಂದ ಸುದ್ದಿಯಾಗುತ್ತಲೇ ಇದೆ. ಮಳೆ, ಅಪಘಾತ, ಟೋಲ್ ಕಾರಣದಿಂದಾಗಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ, ಬಿಡದಿ ಬಳಿ ಎಕ್ಸ್‌ಪ್ರೆಸ್-ವೇ ಮತ್ತು ಸರ್ವೀಸ್ ರಸ್ತೆ ನಡುವಿನ ನಿರ್ಗಮನ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದೆ. ಮತ್ತೆ ಆಕ್ರೋಶಕ್ಕೆ ಗುರಿಯಾಗಿದೆ.
ಆರಂಭದಲ್ಲಿ ಎಕ್ಸ್‌ಪ್ರೆಸ್-ವೇ ನಡುವಿನ ಸಂಚಾರ ಬೆಂಗಳೂರು-ಮೈಸೂರು ನಡುವೆ ಮಾತ್ರವೇ ಇತ್ತು. ರಸ್ತೆ ಹಾದುಹೋಗುವ ರಾಮನಗರ, ಮಂಡ್ಯ ಜಿಲ್ಲಾ ಕೇಂದ್ರಗಳು ಸೇರಿದಂತೆ ಯಾವುದೇ ಪಟ್ಟಣಕ್ಕೆ ಸಂಪರ್ಕವೇ ಇರಲಿಲ್ಲ. ಹೆದ್ದಾರಿ ಪ್ರಾಧಿಕಾರದ ಈ ಧೋರಣೆಯ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆ ಬಳಿಕ, ಎಲ್ಲ ನಗರಗಳಿಗೆ ಸಂಪರ್ಕಿಸುವಂತೆ ಎಕ್ಸ್‌ಪ್ರೆಸ್-ವೇಗೆಯಿಂದ ಸರ್ವೀಸ್ ರಸ್ತೆಗೆ ನಿರ್ಗಮನ ಮತ್ತು ಆಗಮನ ದ್ವಾರಗಳನ್ನು ತೆರೆಯಲಾಗಿತ್ತು.
ಇನ್ನು, ಎಕ್ಸ್‌ಪ್ರೆಸ್-ವೇ ಸಂಚಾರಕ್ಕೆ ದುಬಾರಿ ಟೋಲ್ ಶುಲ್ಕ ವಿಧಿಸಲಾಗಿರುವ ಪರಿಣಾಮ, ಬೆಂಗಳೂರಿನ ಶೇಷಗಿರಿಹಳ್ಳಿ ಬಳಿಯ ಟೋಲ್‌ನಲ್ಲಿ ಸುಂಕ ಪಾವತಿಸುವುದನ್ನು ತಪ್ಪಿಸಿಲು ಹಲವಾರು ವಾಹನ ಚಾಲಕರು ಬಿಡದಿ ಬಳಿಯೇ ಎಕ್ಸ್‌ಪ್ರೆಸ್-ವೇ ಇಂದ ಸರ್ವೀಸ್ ರಸ್ತೆಗೆ ಬಂದು, ಸರ್ವೀಸ್ ರಸ್ತೆ ಮೂಲಕ ಬೆಂಗಳೂರು ತಲುಪುತ್ತಿದ್ದರು.
ಇದರಿಂದ, ಟೋಲ್ ಸಂಗ್ರಹ ಕಡಿಮೆಯಾಗುತ್ತಿತ್ತು. ಈಗ, ಟೋಲ್ ಸುಂಕವನ್ನು ವಸೂಲಿ ಮಾಡಲೇಬೇಕು ಮತ್ತು ಸಂಗ್ರಹವನ್ನು ಹೆಚ್ಚಿಸಿಕೊಳ್ಳಬೇಕೆಂದು ನಿರ್ಧರಿಸಿರುವ ಹೆದ್ದಾರಿ ಪ್ರಾಧಿಕಾರಿ, ಬಿಡದಿ ಬಳಿ ಎಕ್ಸ್‌ಪ್ರೆಸ್‌ವೇ ಮತ್ತು ಸರ್ವೀಸ್ ರಸ್ತೆ ನಡುವಿನ ನಿರ್ಗಮನ ರಸ್ತೆಯನ್ನು ಬಂದ್ ಮಾಡಿದೆ. ಎಕ್ಸ್‌ಪ್ರೆಸ್-ವೇನಲ್ಲಿ ಬರುವ ವಾಹನ ಸವಾರರು ಶೇಷಗಿರಿಹಳ್ಳಿ ಟೋಲ್‌ನಲ್ಲಿ ಸುಂಕ ಪಾವತಿಸಿಯೇ ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ವರದಿ ಓದಿದ್ದೀರಾ?: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ | ಟೋಲ್ ಎಂಬ ಸರ್ಕಾರಿ ದರೋಡೆ; 20 ತಿಂಗಳಲ್ಲಿ 438 ಕೋಟಿ ವಸೂಲಿ
ಪ್ರಾಧಿಕಾರದ ನಡೆಯ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಸೂಚನೆಯನ್ನು ನೀಡದೆ, ಏಕಾಏಕಿ ನಿರ್ಗಮನ ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ಧೋರಣೆ ಸರಿಯಲ್ಲ. ಮೈಸೂರು-ಮಂಡ್ಯದಿಂದ ಬಂದವರು ಕುಂಬಳಗೋಡು ಸೇರಿದಂತೆ ಇತರ ಪ್ರದೇಶಗಳಿಗೆ ಹೋಗಬೇಕೆಂದರೆ ಎಕ್ಸ್‌ಪ್ರೆಸ್-ವೇಯಿಂದ ಸರ್ವೀಸ್ ರಸ್ತೆಗೆ ಹೇಗೆ ಬರಬೇಕು. ಕೆಂಗೇರಿಗೆ ಬಂದು, ವಾಪಸ್ ಹೋಗಬೇಕೇ ಎಂದು ಕಿಡಿಕಾರಿದ್ದಾರೆ.