ಕರ್ನಾಟಕ ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯು 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಬಂಜಾರ ಭಜನೆ’ ಕ್ಷೇತ್ರದಲ್ಲಿ ಬಸವಕಲ್ಯಾಣ ತಾಲ್ಲೂಕಿನ ಖೆರ್ಡಾ(ಬಿ) ಶಂಕ್ರು ತಾಂಡಾ ನಿವಾಸಿ ಗೋವಿಂದ ಚವ್ಹಾಣ ಅವರು ಬಂಜಾರ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಭಜನೆ ಗಾಯಕರಾದ ಗೋವಿಂದ ಚಚ್ಹಾಣ ಅವರಿಗೆ ಈಗ 75 ವರ್ಷ. ಚಿಕ್ಕಂದಿಂದಲೇ ಬಂಜಾರ ಭಜನೆ, ಜಾನಪದ ಕಲೆ ಮೈಗೂಡಿಸಿಕೊಂಡು ವಿವಿಧ ಕಾರ್ಯಕ್ರಮ, ಉತ್ಸವಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದೂರದರ್ಶನ, ಆಕಾಶವಾಣಿ ಸೇರಿದಂತೆ ವಿವಿಧೆಡೆ ಭಜನಾ ಕಲಾ ತಂಡದೊಂದಿಗೆ ಭಾಗವಹಿಸಿ ಕಲೆ ಪ್ರದರ್ಶಿಸಿದ್ದಾರೆ.
ಇದೀಗ ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಬಂಜಾರ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಈ ಕುರಿತು ಗೋವಿಂದ ಅವರು ಈದಿನ.ಕಾಮ್ ಜೊತೆ ಮಾತನಾಡಿ, ʼಬಂಜಾರ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದ ಅಕಾಡೆಮಿ ಅಧ್ಯಕ್ಷ ಗೋವಿಂದ ಸ್ವಾಮಿ ಅವರಿಗೆ ಧನ್ಯವಾದ ಸಲ್ಲಿಸುವೆ. ಸುಮಾರು ಐದು ದಶಕಗಳಿಂದ ಜಾನಪದ, ಬಂಜಾರ ಸಂಸ್ಕೃತಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಈಗ ಗುರುತಿಸಿ ಆಯ್ಕೆ ಮಾಡಿದ್ದು ಖುಷಿ ನೀಡಿದೆʼ ಎಂದರು.
ಅರ್ಹತೆ ಇದ್ದರೂ ದಕ್ಕದ ಮಾಸಾಶನ :
ಗಾಯಕ ಗೋವಿಂದ ಚಚ್ಹಾಣ ಅವರಿಗೆ ಈಗ 75 ವರ್ಷ. ಸುಮಾರು ಐದು ದಶಕಗಳಿಂದ ಭಜನೆ ಸೇರಿದಂತೆ ಅನೇಕ ಕಲಾ ಪ್ರಕಾರಗಳಲ್ಲಿ ಸಕ್ರಿಯರಾಗಿ ತಮ್ಮ ಕಲೆ ಪ್ರದರ್ಶನ ಮಾಡುತ್ತಿದ್ದಾರೆ. ಸರ್ಕಾರ ನೀಡುವ ಕಲಾವಿದರ ಮಾಸಾಶನ ಪಡೆಯಲು ಎಲ್ಲ ರೀತಿಯ ಅರ್ಹತೆಯಿದ್ದರೂ ಸಹ ಗೋವಿಂದ ಹಾಗೂ ಅವರ ತಂಡದವರು ಮಾಸಾಶನದಿಂದ ವಂಚಿತರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಆಶಾ ರಾಠೋಡ್‌ಗೆ ಬಂಜಾರ ಅಕಾಡೆಮಿ ವಾರ್ಷಿಕ ಪ್ರಶಸ್ತಿ
ʼಕಳೆದ ಹತ್ತು ವರ್ಷಗಳ ಹಿಂದೆ ಕಲಾವಿದರ ಮಾಸಾಶನಕ್ಕಾಗಿ ಅರ್ಜಿ ಹಾಕಿದ್ದೆ, ಆದರೆ ಯಾರೊಬ್ಬರೂ ಸ್ಪಂದಿಸಲಿಲ್ಲ. ತದನಂತರ ಪುನಃ ಅರ್ಜಿ ಹಾಕಲಿಲ್ಲ. ನಮ್ಮಂತಹ ಹಿರಿಯರಿಗೆ ಮಾಸಾಶನಕ್ಕಾಗಿ ಪರಿಗಣಿಸಬೇಕುʼ ಎಂದು ಗೋವಿಂದ ಚವ್ಹಾಣ ಅವರು ಈದಿನ.ಕಾಮ್ ಜೊತೆ ಮಾತನಾಡಿ ಕೋರಿದ್ದಾರೆ.